ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಲೋಕಸಭಾ ಕ್ಷೇತ್ರ: ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್‌ ಕಸರತ್ತು

Published 23 ಡಿಸೆಂಬರ್ 2023, 17:09 IST
Last Updated 23 ಡಿಸೆಂಬರ್ 2023, 17:09 IST
ಅಕ್ಷರ ಗಾತ್ರ

ನಂಜನಗೂಡು (ಮೈಸೂರು ಜಿಲ್ಲೆ): ಮುಂಬರುವ ಲೋಕಸಭಾ ಚುನಾವಣೆಗೆ ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಕಾಂಗ್ರೆಸ್‌ ಕಸರತ್ತು ಆರಂಭಿಸಿದೆ. ಇಲ್ಲಿ ಶನಿವಾರ ನಡೆದ ಸಭೆಯಲ್ಲಿ ಆಕಾಂಕ್ಷಿಗಳು, ಶಾಸಕರು, ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಅಧ್ಯಕ್ಷರು, ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು.

ತಾಲ್ಲೂಕಿನ ದೊಡ್ಡ ಕವಲಂದೆ ಗ್ರಾಮದ ನೀಲಾಂಬಿಕ ಕಲ್ಯಾಣ ಮಂಟಪದಲ್ಲಿ ಚಾಮರಾಜನಗರ ಮತ್ತು ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ನಿಂದ ಸಚಿವರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಶಾಸಕ ದರ್ಶನ್‌ ಧ್ರುವನಾರಾಯಣ ಮಾತನಾಡಿ, ‘ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. ತಂದೆ ಧ್ರುವನಾರಾಯಣ 2 ಬಾರಿ ಆಯ್ಕೆಯಾಗಿ ರಾಜ್ಯದ ನಂಬರ್‌ 1 ಸಂಸದರಾಗಿ ಹೊರಹೊಮ್ಮಿದ್ದರು. ಈ ಬಾರಿ ಚುನಾವಣೆಗೆ ಅಭ್ಯರ್ಥಿಯಾಗಿ ಯಾರನ್ನೇ ಆಯ್ಕೆ ಮಾಡಿದರೂ ಈ ಭಾಗದ ಶಾಸಕರು ಹಾಗೂ ಮುಖಂಡರು, ಕಾರ್ಯಕರ್ತರು ಗೆಲುವಿಗೆ ಶ್ರಮಿಸಬೇಕು’ ಎಂದು ಕೋರಿದರು.

ಮಾಜಿ ಸಚಿವ ಬಿ.ಸೋಮಶೇಖರ್‌ ಮಾತನಾಡಿ, ‘ನಾನೂ ಆಕಾಂಕ್ಷಿಯಾಗಿದ್ದು, ಪಕ್ಷ ಟಿಕೆಟ್‌ ನೀಡಿದರೆ ಸ್ಪರ್ಧಿಸುತ್ತೇನೆ. ವರಿಷ್ಠರು ಯಾರನ್ನೇ ಆಯ್ಕೆ ಮಾಡಿದರೂ ಅವರ ಗೆಲುವಿಗೆ ದುಡಿಯುತ್ತೇನೆ’ ಎಂದು ಹೇಳಿದರು.

ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ ಮಾತನಾಡಿ, ‘2004ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದೆ. ಕಾಂಗ್ರೆಸ್‌ ಪಕ್ಷ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾಗ ಸೋನಿಯಾ ಗಾಂಧಿ ಅವರ ಆಶಯದಂತೆ ಸಂಸತ್ತಿನಲ್ಲಿ ಪಕ್ಷದ ಪರವಾಗಿ ಮತ ನೀಡಿ ಸರ್ಕಾರವನ್ನು ಉಳಿಸಿದ್ದೆ. ನಾನು ನಿಷ್ಠಾವಂತ ಕಾರ್ಯಕರ್ತನಾಗಿದ್ದು, ವರಿಷ್ಠರು ಅವಕಾಶ ಮಾಡಿಕೊಡಬೇಕು’ ಎಂದು ಕೋರಿದರು.

ಮುಖಂಡ ಸುನೀಲ್‌ ಬೋಸ್‌ ಮಾತನಾಡಿ, ‘2008ರಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ. ನಾನೂ ಪ್ರಬಲ ಆಕಾಂಕ್ಷಿಯಾಗಿದ್ದು, ನಮ್ಮ ಭಾಗದ ಎಲ್ಲ ಶಾಸಕರು ಹಾಗೂ ಮುಖಂಡರು ಬೆಂಬಲ ನೀಡಬೇಕು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನನಗೆ ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಜಿ.ಎನ್‌. ನಂಜುಂಡಸ್ವಾಮಿ, ‘ಕೊಳ್ಳೇಗಾಲ ಕ್ಷೇತ್ರದಲ್ಲಿ 2 ಬಾರಿ ಶಾಸಕನಾಗಿದ್ದೆ. ಎರಡೂ ಜಿಲ್ಲೆಗಳ ಮುಖಂಡರು, ಕಾರ್ಯಕರ್ತರೊಂದಿಗೆ ಉತ್ತಮ ಒಡನಾಟ ಹೊಂದಿದ್ದೇನೆ. ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು’ ಎಂದು ಕೋರಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ‘2017ರಿಂದ ಎರಡು ಜಿಲ್ಲೆಗಳ ಉಸ್ತುವಾರಿಯಾಗಿ ಕೆಲಸ ಮಾಡಿದ ಅನುಭವವಿದೆ. ಪಕ್ಷದ ಹೈಕಮಾಂಡ್‌ ಈ ಬಾರಿ ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ನೀಡುತ್ತದೆ ಎಂಬ ನಂಬಿಕೆ ಇದೆ. ನಾನು ತಿ.ನರಸೀಪುರ ತಾಲ್ಲೂಕಿನವಳಾಗಿದ್ದು, ಮೈಸೂರಿನ ಸೊಸೆಯಾದ ನನಗೆ ಕ್ಷೇತ್ರದ ಸಂಪೂರ್ಣ ಪರಿಚಯವಿದೆ. ನನಗೆ ಈ ಬಾರಿ ಸ್ಪರ್ಧಿಸಲು ಅವಕಾಶ ನೀಡಬೇಕು’ ಎಂದು ವಿನಂತಿಸಿದರು.

ಮುಖಂಡರಾದ ಜೆ.ಸಿ.ಕಿರಣ್‌, ಪ್ರೊ.ಮಹದೇವ್‌, ಡಿ.ಎನ್‌. ನಟರಾಜ್‌ ಕೂಡ ಆಕಾಂಕ್ಷಿಗಳಾಗಿರುವುದಾಗಿ ತಿಳಿಸಿದರು.

ನಂತರ ದಿನೇಶ್‌ ಗುಂಡೂರಾವ್‌ ಅವರು ಕೊಠಡಿಯಲ್ಲಿ ಆಕಾಂಕ್ಷಿಗಳು, ಶಾಸಕರು ಹಾಗೂ ಜಿಲ್ಲಾ, ತಾಲ್ಲೂಕು ಕಾಂಗ್ರೆಸ್‌ ಅಧ್ಯಕ್ಷರು, ಮುಖಂಡರನ್ನು ಕರೆಸಿ ಅಭಿಪ್ರಾಯ ಸಂಗ್ರಹಿಸಿದರು.

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಅನಿಲ್‌ ಚಿಕ್ಕಮಾದು, ಗಣೇಶ್‌ ಪ್ರಸಾದ್‌, ಎ.ಆರ್.ಕೃಷ್ಣಮೂರ್ತಿ, ಡಾ.ತಿಮ್ಮಯ್ಯ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ.ವಿಜಯ್‌ ಕುಮಾರ್‌, ಮುಖಂಡರಾದ ಕಳಲೆ ಕೇಶವಮೂರ್ತಿ, ಸೋಮೇಶ್‌, ಎಚ್‌.ಸಿ.ಬಸವರಾಜ್‌, ಬಿ.ಎಂ.ರಾಮು ಪಾಲ್ಗೊಂಡಿದ್ದರು.

ನಂಜನಗೂಡಿನಿಂದ ಕಾರ್ಯಕ್ರಮ ಆಯೋಜಿಸಿದ್ದ ದೊಡ್ಡ ಕವಲಂದೆವರೆಗೆ ಹೆದ್ದಾರಿಯಲ್ಲಿ ನಂಜುಂಡಸ್ವಾಮಿ ಹಾಗೂ ಸುನೀಲ್‌ ಬೋಸ್‌ ಬೆಂಬಲಿಗರು ಹಾಕಿದ್ದ ಬ್ಯಾನರ್‌ ಮತ್ತು ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು.

ಸುನೀಲ್‌ ಬೋಸ್‌ ಪರ ಜಯಘೋಷ; ಗದ್ದಲದ ವಾತಾವರಣ

ಸುನೀಲ್‌ ಬೋಸ್‌ ಹಾಗೂ ಜಿ.ಎನ್‌.ನಂಜುಂಡಸ್ವಾಮಿ ಅವರು ತಮ್ಮ ಅಭಿಪ್ರಾಯ ಮಂಡಿಸಲು ದಿನೇಶ್‌ ಗುಂಡೂರಾವ್‌ ಅವರಿದ್ದ ಕೊಠಡಿಗೆ ತೆರಳುವಾಗ ಮತ್ತು ವಾಪಸ್‌ ಬರುವಾಗ ಅಭಿಮಾನಿಗಳು, ಬೆಂಬಲಿಗರು ಜಯಘೋಷ ಮೊಳಗಿಸಿದರು.

ಇಬ್ಬರೂ ಎದುರಾದರೂ ಮಾತನಾಡಲಿಲ್ಲ. ಸುನೀಲ್‌ ಬೋಸ್‌ ಅವರಿಗೆ ಟಿಕೆಟ್‌ ನೀಡಬೇಕು ಎಂದು ಬೆಂಬಲಿಗರು ಕೂಗುತ್ತಿದ್ದರು. ಇದರಿಂದ ಕೆಲ ಕಾಲ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು. ಸಭೆಯ ಆರಂಭದಿಂದ ಅಂತ್ಯದವರೆಗೂ ಬೋಸ್‌ ಪರ ಬೆಂಬಲಿಗರು ಘೋಷಣೆ ಕೂಗುತ್ತಿದ್ದರು.

‘ಅಭ್ಯರ್ಥಿ ಗೆಲುವಿಗೆ ಶ್ರಮಿಸಿ’

ದಿನೇಶ್‌ ಗುಂಡೂರಾವ್‌ ಮಾತನಾಡಿ, ‘ಯಾರೇ ಆಕಾಂಕ್ಷಿಗಳಾದರೂ ಕ್ಷೇತ್ರದ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರ ಬಳಿ ಚರ್ಚಿಸಿ, ಅವರ ಅಭಿಪ್ರಾಯ ಪಡೆದು ಗೆಲ್ಲುವ ಅವಕಾಶ ಹೆಚ್ಚಿರುವ ಅಭ್ಯರ್ಥಿಯನ್ನು ಹೈಕಮಾಂಡ್‌ ಆಯ್ಕೆ ಮಾಡಲಿದೆ. ಯಾರೇ ಅಭ್ಯರ್ಥಿಯಾದರೂ ಕಾರ್ಯಕರ್ತರು, ಮುಖಂಡರು ಶ್ರಮ ವಹಿಸಿ ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕು’ ಎಂದು ತಿಳಿಸಿದರು.

‘ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಬಾರಿ ಲೋಕಸಭಾ ಚುನಾವಣೆ ನಡೆಯಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದ 8 ವಿಧಾನಸಭಾ ಕ್ಷೇತ್ರಗಳಲ್ಲಿ 7 ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದಿದೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಕರ್ನಾಟಕ ಕಾಂಗ್ರೆಸ್‌ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಬೇಕು’ ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT