ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಮೈಸೂರಲ್ಲಿ ‘ರಾಜಪರಿವಾರ’ದ ರಾಜಕಾರಣ ಮತ್ತೆ ಶುರು

Published 13 ಮಾರ್ಚ್ 2024, 17:24 IST
Last Updated 13 ಮಾರ್ಚ್ 2024, 17:24 IST
ಅಕ್ಷರ ಗಾತ್ರ

ಮೈಸೂರು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ದೊರೆಯುವುದರೊಂದಿಗೆ ಮೈಸೂರಿನಲ್ಲಿ ‘ರಾಜಪರಿವಾರ’ದವರ ರಾಜಕಾರಣಕ್ಕೆ ಮತ್ತೆ ಚಾಲನೆ ಸಿಕ್ಕಂತಾಗಿದೆ.

ಮೈಸೂರು ಸಂಸ್ಥಾನವನ್ನು ಆಳಿದ ಅರಸು ಮನೆತನದವರು, ಸ್ವಾತಂತ್ರ್ಯ ನಂತರವೂ ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ದೂರವಿದ್ದರು. ಸದ್ಯ ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಯದುವೀರ್‌ ಬಿಜೆಪಿ ಟಿಕೆಟ್ ಪಡೆದುಕೊಂಡಿದ್ದಾರೆ. ಇದನ್ನು ರಾಜವಂಶಸ್ಥರ ರಾಜಕೀಯದ ಮತ್ತೊಂದು ಪರ್ವ ಎಂದು ಬಿಂಬಿಸಲಾಗುತ್ತಿದೆ.

ತಂದೆ, ಮಾಜಿ ಸಂಸದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಹೊಂದಿದ್ದ ರಾಜಕೀಯ ಪ್ರಭಾವವನ್ನು ವಿಸ್ತರಿಸುವ ಹಾಗೂ ಜನರಲ್ಲಿ ತಮ್ಮ ವಂಶಕ್ಕಿರುವ ಗೌರವವನ್ನು ಮತವನ್ನಾಗಿ ಪರಿವರ್ತಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಯದುವೀರ್ ಚುನಾವಣಾ ರಾಜಕಾರಣಕ್ಕೆ ಮುಂದಡಿ ಇಟ್ಟಿದ್ದಾರೆ. ಎರಡೂ ಜಿಲ್ಲೆಗಳ ಜನಬೆಂಬಲದ ನಿರೀಕ್ಷೆಯಲ್ಲಿದ್ದಾರೆ.

ರಾಜವಂಶಸ್ಥರು ಇತ್ತೀಚಿನ ವರ್ಷಗಳಲ್ಲಿ ರಾಜಕೀಯದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ, ಅವರನ್ನು ಕರೆದುಕೊಂಡು ಬರುವಲ್ಲಿ ಬಿಜೆಪಿ ವರಿಷ್ಠರು ಯಶಸ್ವಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಹಾಗೂ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ‍ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಮತ್ತು ಯದುವೀರ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ನಡೆಸಿದ್ದ ಮಾತುಕತೆ ಫಲ ನೀಡಿದೆ. ಬಿಜೆಪಿ ಹೈಕಮಾಂಡ್, ಚುನಾವಣೆಯಲ್ಲಿ ಕಣಕ್ಕಿಳಿಯುವಂತೆ ಯದುವೀರ್ ಅವರ ಮನವೊಲಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ಟಿಕೆಟ್‌ ಪಡೆದಿದ್ದಕ್ಕೆ ಯದುವೀರ್‌ ಪ್ರತಿಕ್ರಿಯೆ

ಟಿಕೆಟ್‌ ಪಡೆದಿದ್ದಕ್ಕೆ ಯದುವೀರ್‌ ಪ್ರತಿಕ್ರಿಯೆ

ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ನಂತರ ಅರಸು ಸಮುದಾಯದ ಯಾವುದೇ ನಾಯಕ ಅಂತಹ ದೊಡ್ಡ ಹುದ್ದೆಗೆ ಏರಿರಲಿಲ್ಲ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ 1984, 1989, 1993 ಹಾಗೂ 1996ರಲ್ಲಿ ಅಂದರೆ ನಾಲ್ಕು ಬಾರಿ ಸಂಸದರಾಗಿದ್ದರು. ಎರಡು ಬಾರಿ ಸೋಲನುಭವಿಸಿದ್ದರು. 1991ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. 2004ರಲ್ಲಿ ಕೊನೆಯ ಚುನಾವಣೆ ಎದುರಿಸಿದ್ದರು. ಬಳಿಕ ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದರು. ಇದೀಗ, ಆ ವಂಶದ ಯದುವೀರ್‌ಗೆ ಬಿಜೆಪಿ ಮಣೆ ಹಾಕಿದೆ.

ದೇವರಾಜ ಅರಸು, ಜಯದೇವರಾಜ ಅರಸು, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಚಂದ್ರಪ್ರಭಾ ಅರಸು ಬಳಿಕ ಮೈಸೂರಿನಿಂದ ಅರಸು ಜನಾಂಗದ ಯದುವೀರ್‌ ರಾಜಕಾರಣಕ್ಕೆ ಇಳಿದಿದ್ದಾರೆ. ಅವರಿಗೆ ಯಾವ ರೀತಿಯ ಪ್ರತಿಫಲ ದೊರೆಯಬಹುದು ಎನ್ನುವುದು ಈಗ ಚರ್ಚೆಯ ವಸ್ತುವಾಗಿದೆ.

ಯದುವೀರ್ ಎದುರಿನ ಸವಾಲುಗಳೇನು?

  • ರಾಜಕಾರಣದಲ್ಲಿನ ಒಳಸುಳಿಗಳನ್ನು ಅರಿಯುವುದು.

  • ಬಿಜೆಪಿ–ಜೆಡಿಎಸ್ ಮೈತ್ರಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು.

  • ಜೆಡಿಎಸ್-ಬಿಜೆಪಿ ನಾಯಕರು, ಕಾರ್ಯಕರ್ತರ ವಿಶ್ವಾಸ ಗಳಿಸುವುದು. ಎರಡೂ ಪಕ್ಷದವರೊಂದಿಗೆ ಸಮನ್ವಯ ಸಾಧಿಸುವುದು.

  • ರಾಜಕಾರಣದಲ್ಲಿ ಎದುರಾಗಬಹುದಾದ ಟೀಕೆಗಳನ್ನು ಎದುರಿಸುವುದು.

  • ಪ್ರತಾಪ ಸಿಂಹಗೆ ಟಿಕೆಟ್‌ ಕೈತಪ್ಪಿದ್ದಕ್ಕೆ ಅವರ ಬೆಂಬಲಿಗರಲ್ಲಿರುವ ಅಸಮಾಧಾನವನ್ನು ತಣಿಸಿ, ತಮಗೆ ಬೆಂಬಲ ಪಡೆದುಕೊಳ್ಳುವುದು. ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ ಪರವಾಗಿ ಸಾಕಷ್ಟು ಮಂದಿ ಬೆಂಬಲ ವ್ಯಕ್ತಪಡಿಸಿದ್ದರು. ಮೈಸೂರಿನಲ್ಲಿ ಬುಧವಾರ ಅವರ ಬೆಂಬಲಿಗರು ‘ಬಲ ಪ್ರದರ್ಶನ’ವನ್ನೂ ಮಾಡಿದ್ದರು.

  • ಮುಖ್ಯಮಂತ್ರಿ ಸಿದ್ದರಾಮಯ್ಯ ತವರಿನಲ್ಲಿ ಕಾಂಗ್ರೆಸ್‌ನ ತೀವ್ರ ಪೈಪೋಟಿ ಎದುರಿಸುವುದು.

  • ಕ್ಷೇತ್ರದ ವ್ಯಾಪ್ತಿಯ ಒಟ್ಟು ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಷ್ಟೇ ಬಿಜೆಪಿ ಗೆದ್ದಿದೆ. ಮೈತ್ರಿಕೂಟದ ಜೆಡಿಎಸ್‌ 2 ಕಡೆ ಜಯಿಸಿದ್ದರೆ, 5 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ. ಕಾಂಗ್ರೆಸ್‌ ಶಕ್ತಿಯನ್ನು ಮೀರಿ ಜನಬೆಂಬಲ ಗಳಿಸಬೇಕಿರುವುದು.

  • ಈ ಭಾಗದಲ್ಲಿ ಬಿಜೆಪಿಯ ಸಂಘಟನೆ ಬಲಪಡಿಸಲು ತಮ್ಮದೇ ‘ಕೊಡುಗೆ’ ನೀಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT