ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಲಿ, ಟಿಪ್ಪು ಆರ್ಭಟ ನಿಲ್ಲಿಸಲು ಬಿಜೆಪಿ ಗೆಲ್ಲಿಸಿ: ಸಂಸದ ಪ್ರತಾಪ ಸಿಂಹ

ಬಿಜೆಪಿಯ ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶ; ಯದುವೀರ್‌ಗೆ ಸನ್ಮಾನ
Published 24 ಮಾರ್ಚ್ 2024, 15:05 IST
Last Updated 24 ಮಾರ್ಚ್ 2024, 15:05 IST
ಅಕ್ಷರ ಗಾತ್ರ

ಮೈಸೂರು: ‘ಹೈದರಾಲಿ ಮತ್ತು ಟಿಪ್ಪುವಿನ ಆರ್ಭಟ ಮುಂದುವರಿಯಬಾರದೆಂದರೆ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಬೇಕು’ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಬಿಜೆಪಿ ಎಸ್‌ಟಿ ಮೋರ್ಚಾದಿಂದ ಇಲ್ಲಿನ ನೇರಂಬಳ್ಳಿ ಸಾವಿತ್ರಮ್ಮ ಸುಬ್ಬರಾವ್ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ‘ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ನಾಯಕ ಸಮುದಾಯವು ಮದಕರಿ ನಾಯಕ ಮತ್ತು ಒನಕೆ ಓಬವ್ವರನ್ನು ಕೊಂದ ದುಷ್ಟರನ್ನು ಮರೆಯಬಾರದು. ಅಂಥವರ ಕೈಗೆ ಮತ್ತೆ ಅಧಿಕಾರ ನೀಡಬಾರದು’ ಎಂದು ಕೋರಿದರು.

‘ನಾನು ಸಂಸದನಾಗಲು ನಾಯಕ ಸಮುದಾಯದ ಬೆಂಬಲ ಸಾಕಷ್ಟಿದೆ. ರಾಜಕಾರಣದಲ್ಲಿ ಬದಲಾವಣೆ ಅನಿವಾರ್ಯ. ಇಂದು ಮೈಸೂರಿಗೆ ಸಾಕಷ್ಟು ಕೊಡುಗೆ ನೀಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕುಟುಂಬದ ಯದುವೀರ್ ಅವರು  ಚುನಾವಣೆಗೆ ಸ್ಪರ್ಧಿಸಿದ್ದು, ಸಮುದಾಯವು ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಮೈಸೂರು ಮಹಾರಾಜರು ಪ್ರಾತಃಸ್ಮರಣೀಯರು: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ‘ವಸತಿಶಾಲೆಗಳ ಅಭಿವೃದ್ಧಿ ಮತ್ತು ಗ್ರಾಮಗಳಲ್ಲಿ ಹಿಂದುಳಿದವರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. 17 ಸಾವಿರ ಗ್ರಾಮಗಳು ಇದರ ಪ್ರಯೋಜನ ಪಡೆದಿವೆ. ಮುದ್ರಾ ಯೋಜನೆ ಮುಖಾಂತರ ಹಲವು ಪರಿಶಿಷ್ಟರು ಉದ್ಯಮಿಗಳಾಗಿದ್ದಾರೆ. ಶೇ 50ಕ್ಕೂ ಹೆಚ್ಚು ಹಿಂದುಳಿದವರು ಯೋಜನೆಗಳ ಫಲಾನುಭವಿಗಳಾಗಿದ್ದಾರೆ’ ಎಂದರು.

ಮಾಜಿ ಮೇಯರ್‌ ಶಿವಕುಮಾರ್ ಮಾತನಾಡಿ, ‘ಮೈಸೂರು ಮಹಾರಾಜರು ಪ್ರಾತಃಸ್ಮರಣೀಯರು. ಇಂದಿನ ಅಭಿವೃದ್ಧಿಗೆ ಆಗಲೇ ಅಡಿಪಾಯ ಹಾಕಿಕೊಟ್ಟರು. ಅವರನ್ನು ಮರೆಯಬಾರದು’ ಎಂದು ಹೇಳಿದರು.

ಯದುವೀರ್ ಅವರಿಗೆ ನಾಯಕ ಸಮಾಜದ ಸಂಕೇತವಾದ ಕತ್ತಿಗುರಾಣಿ ನೀಡಲಾಯಿತು.

ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್‌ ಅಗರ್‌ವಾಲ್, ಶಾಸಕ ಟಿ.ಎಸ್.ಶ್ರೀವತ್ಸ, ಪಕ್ಷದ ಮುಖಂಡರಾದ ಎನ್.ಮಹೇಶ್, ಎಸ್.ಎ.ರಾಮದಾಸ್, ರಘು ಆರ್. ಕೌಟಿಲ್ಯ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಸಿದ್ದರಾಜು, ಎಸ್ಟಿ ಮೋರ್ಚಾದ ನಗರ ಘಟಕದ ಅಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ, ಹರತಲೆ ಚಿಕ್ಕರಂಗನಾಯಕ, ತ್ಯಾಗರಾಜ್, ವಿಜಯ್ ನಾಯಕ, ಎಂ.ಮಹೇಶ್, ಕೃಷ್ಣ ನಾಯಕ ಪಾಲ್ಗೊಂಡಿದ್ದರು.

‘ಶ್ರೀಕಂಠದತ್ತ ಒಡೆಯರ್‌ ಕೂಡ ಮಾಡಲಿಲ್ಲ’

‘ನಾಯಕ ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಆದಿಯಾಗಿ ಯಾವ ಸಂಸದರೂ ಮಾಡದ ಕೆಲಸವನ್ನು ನಾನು ಮಾಡಿದ್ದೇನೆ’ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು. ‘ಪರಿವಾರ ನಾಯಕ ಮತ್ತು ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಬೇಡಿಕೆಯನ್ನು 1982ರಿಂದಲೂ ಇದ್ದ ಸಂಸದರಾರೂ ಈಡೇರಿಸಲಿಲ್ಲ. ಎಚ್.ವಿಶ್ವನಾಥ್‌  ಸಿ.ಎಚ್.ವಿಜಯಶಂಕರ್ ಸೇರಿದಂತೆ ಎಲ್ಲರೂ ಮಾತನಾಡಿದ್ದರೇ ಹೊರತು ಕೆಲಸ ಮಾಡಲಿಲ್ಲ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT