ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಸ್ವೀಪ್‌ ಸಮಿತಿ ಚಟುವಟಿಕೆ ಚುರುಕು: ಮತದಾನ ಹೆಚ್ಚಳಕ್ಕೆ ಕಸರತ್ತು

Published 22 ಏಪ್ರಿಲ್ 2024, 7:44 IST
Last Updated 22 ಏಪ್ರಿಲ್ 2024, 7:44 IST
ಅಕ್ಷರ ಗಾತ್ರ

ಮೈಸೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳದ ಮೂಲಕ ದಾಖಲೆ ಬರೆಯಲು ‘ಜಿಲ್ಲಾ ಮತದಾರರ ಜಾಗೃತಿ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ ಸಮಿತಿ’ಯು (ಸ್ವೀಪ್‌) ಚಟುವಟಿಕೆ ಆರಂಭಿಸಿದೆ.

ಕ್ಷೇತ್ರದಲ್ಲಿ ಒಟ್ಟು 17 ಸಾರ್ವತ್ರಿಕ ಚುನಾವಣೆಗಳು ನಡೆದಿದ್ದು, ಇದರಲ್ಲಿ 2019ರಲ್ಲಿ ಒಟ್ಟು ಶೇ 70.39ರಷ್ಟು ಮತದಾರರು ಮತ ಚಲಾವಣೆ ಮೂಲಕ ಗರಿಷ್ಠ ಪ್ರಮಾಣದ ಮತದಾನದ ದಾಖಲೆ ಬರೆದಿದ್ದಾರೆ. ಅದಕ್ಕೂ ಮುನ್ನ, 1989ರಲ್ಲಿ ಶೇ 69.74ರಷ್ಟು ಮತದಾನವಾಗಿರುವುದೇ ದಾಖಲೆಯಾಗಿತ್ತು. ಕಳೆದ ಎರಡು ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಗಣನೀಯವಾಗಿ ಏರಿಕೆ ಆಗಿದೆ.

ಮೈಸೂರು ಜಿಲ್ಲೆಯಲ್ಲಿ ಒಟ್ಟು 2,915 ಮತಗಟ್ಟೆಗಳಿವೆ. ಇದರಲ್ಲಿ 1,314 ಮತಗಟ್ಟೆಗಳು ಜಿಲ್ಲೆಯ ಮತದಾನ ಪ್ರಮಾಣಕ್ಕಿಂತ ಕಡಿಮೆ ಸರಾಸರಿ ಹೊಂದಿವೆ. ಈ ಮತಗಟ್ಟೆಗಳ ವ್ಯಾಪ್ತಿಯಲ್ಲಿ ವಿಶೇಷವಾಗಿ ಜಾಗೃತಿ ಚಟುವಟಿಕೆಗಳನ್ನು ಹೆಚ್ಚೆಚ್ಚು ಹಮ್ಮಿಕೊಳ್ಳಲು ಸ್ವೀಪ್‌ ಸಮಿತಿಯು ಮುಂದಾಗಿದೆ.

ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ: ನಗರದ ಪ್ರಮುಖ ವೃತ್ತಗಳಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯ ಘೋಷವಾಕ್ಯವಾದ ‘ಚುನಾವಣಾ ಪರ್ವ; ದೇಶದ ಗರ್ವ’ ಹೇಳಿಕೆಯನ್ನು ವಿದ್ಯುತ್‌ ದೀಪಗಳ ಅಲಂಕಾರದ ಮೂಲಕ ಬಿಂಬಿಸಲು ಯೋಜನೆ ರೂಪಿಸಿದ್ದು, ಈ ಸಂಬಂಧ ಸ್ವೀಪ್‌ ಸಮಿತಿಯು ಸೆಸ್ಕ್ ಜೊತೆ ಮಾತುಕತೆ ನಡೆಸಿದೆ. ನಗರದ ನಾಲ್ಕು ಪ್ರಮುಖ ವೃತ್ತಗಳಲ್ಲಿ ಈ ಘೋಷವಾಕ್ಯವು ಮೂಡಿಬರಲಿದೆ. ಇದರ ಜೊತೆಗೆ ‘ಏಪ್ರಿಲ್‌ 26– ತಪ್ಪದೇ ಮತದಾನ ಮಾಡಿ’ ಎನ್ನುವ ನೆನಪಿನೋಲೆಯೂ ಇರಲಿದೆ.

ಇದಲ್ಲದೆ ಎಂದಿನಂತೆ ವಿಂಟೇಜ್‌ ಕಾರು ಹಾಗೂ ಬೈಕುಗಳ ರ್‍ಯಾಲಿ ಇರಲಿದೆ. ಜೊತೆಗೆ ಅಲ್ಲಲ್ಲಿ ಸೆಲ್ಫಿ ಬೂತ್‌ಗಳು ತಲೆ ಎತ್ತಲಿವೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಜಾಗೃತಿ ಸಂದೇಶಗಳು ಮೂಡಿಬರಲಿದ್ದು, ಈ ಸಂಬಂಧ ಮಾತುಕತೆ ನಡೆದಿದೆ.

‘ಕಳೆದ ಚುನಾವಣೆಗಿಂತ ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗಬೇಕು ಎನ್ನುವುದು ನಮ್ಮ ಗುರಿ. ಯುವಜನರು, ಹೊಸ ಮತದಾರರು, ಹಿರಿಯ ನಾಗರಿಕರು, ಅಂಗವಿಕಲರು, ಗಿರಿಜನರು, ಸೌಲಭ್ಯ ವಂಚಿತರು... ಹೀಗೆ ವಿವಿಧ ವರ್ಗಗಳ ಜನರನ್ನು ಕೇಂದ್ರವಾಗಿಸಿಕೊಂಡು ಚಟುವಟಿಕೆಗಳನ್ನು ರೂಪಿಸುತ್ತಿದ್ದೇವೆ’ ಎನ್ನುತ್ತಾರೆ ಸ್ವೀಪ್‌ ಸಮಿತಿಯ ಅಧಿಕಾರಿಗಳು.

ಐಕಾನ್‌ಗಳಿಂದ ಪ್ರಚಾರ: ಮತಗಟ್ಟೆಗೆ ಜನರನ್ನು ಸೆಳೆಯಲು ಮೇರು ವ್ಯಕ್ತಿತ್ವದ ಐಕಾನ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಲ್ಲಿ ಖ್ಯಾತ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌, ವನ್ಯಜೀವಿ ತಜ್ಞರಾದ ಕೃಪಾಕರ– ಸೇನಾನಿ ಸೇರಿದಂತೆ ಹಲವರ ಹೆಸರುಗಳನ್ನು ಸ್ವೀಪ್‌ ಸಮಿತಿಯು ಆಯೋಗಕ್ಕೆ ಪ್ರಸ್ತಾವ ಸ‌ಲ್ಲಿಸಿದ್ದು, ಇನ್ನಷ್ಟೇ ಒಪ್ಪಿಗೆ ಸಿಗಬೇಕಿದೆ.

ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರಕ್ಕೆ ಪ್ರಸ್ತಾವ ಬಸ್‌ಗಳಲ್ಲೂ ಜಾಗೃತಿ ಸಂದೇಶಕ್ಕೆ ಚಿಂತನೆ ಸೆಲ್ಫಿ ಬೂತ್‌ಗಳ ಸ್ಥಾಪನೆ
ಮತದಾನ ಪ್ರಮಾಣ ಹೆಚ್ಚಳಕ್ಕೆ ಪೂರಕವಾಗಿ ಸ್ವೀಪ್‌ ಸಮಿತಿ ಚಟುವಟಿಕೆಗಳು ಆರಂಭವಾಗಿವೆ. ಎಲ್ಲ ವರ್ಗಗಳ ಜನರನ್ನೂ ಮತಗಟ್ಟೆಗಳತ್ತ ಸೆಳೆಯಲು ಕಾರ್ಯಕ್ರಮ ರೂಪಿಸಲಾಗುತ್ತಿದೆ
ಕೆ.ಎಂ. ಗಾಯಿತ್ರಿ ಅಧ್ಯಕ್ಷೆ ಜಿಲ್ಲಾ ಸ್ವೀಪ್‌ ಸಮಿತಿ
ನಗರ ಪ್ರದೇಶವೇ ಸವಾಲು
ಗ್ರಾಮೀಣ ಮತದಾರರಿಗೆ ಹೋಲಿಸಿದರೆ ನಗರ ಪ್ರದೇಶದಲ್ಲಿಯೇ ಮತದಾನದ ಪ್ರಮಾಣ ಕಡಿಮೆ ಇದೆ. ಅದರಲ್ಲಿಯೂ ಮೈಸೂರಿನ ನರಸಿಂಹರಾಜ ಕೃಷ್ಣರಾಜ ಚಾಮರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಮತದಾನದ ಪ್ರಮಾಣವು ಶೇ 59–60ರ ಸರಾಸರಿಯಲ್ಲಿದೆ. ನಗರ ಮತದಾರರು ಲೋಕಸಭಾ ಚುನಾವಣೆಗಳಲ್ಲಿ ಮತದಾನಕ್ಕೆ ನಿರುತ್ಸಾಹ ತೋರುತ್ತಿದ್ದಾರೆ. ಇಲ್ಲಿನ ಮತದಾರರನ್ನು ಮತಗಟ್ಟೆಗಳತ್ತ ಸೆಳೆಯುವ ಸವಾಲು ಸ್ವೀಪ್‌ ಸಮಿತಿ ಮುಂದೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT