ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ಜೆಡಿಎಸ್‌– ಬಿಜೆಪಿ ಒಗಟ್ಟು ಪ್ರದರ್ಶನ

ದಕ್ಷಿಣ ಶಿಕ್ಷಕರ ಕ್ಷೇತ್ರ ಗೆಲ್ಲಲು ಶ್ರಮಿಸುವಂತೆ ಕಾರ್ಯಕರ್ತರಿಗೆ ವಿಜಯೇಂದ್ರ ಸೂಚನೆ
Published 26 ಮೇ 2024, 16:09 IST
Last Updated 26 ಮೇ 2024, 16:09 IST
ಅಕ್ಷರ ಗಾತ್ರ

ಮೈಸೂರು: ವಿಧಾನ ಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರ ಗೆಲ್ಲಲು ಎನ್‌ಡಿಎ ಮೈತ್ರಿಕೂಟವು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಭಾನುವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿ, ರಣತಂತ್ರ ರೂಪಿಸಿತು.

ಐದು ದಿನಗಳಲ್ಲಿ ಎಲ್ಲ ಮತದಾರರನ್ನು ಭೇಟಿ ಮಾಡುವಂತೆ ಬಿಜೆಪಿ– ಜೆಡಿಎಸ್‌ ಮುಖಂಡರು ಹಾಸನ, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆ ಕಾರ್ಯಕರ್ತರಿಗೆ ತಾಕೀತು ಮಾಡಿದರು. 

ಜೆಡಿಎಸ್‌ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ, ‘ನಾವು ಕಷ್ಟ ಕಾಲದಲ್ಲಿದ್ದೇವೆ. ಅವರ ಬಳಿ 135 ಶಾಸಕರಿದ್ದಾರೆ. ಅವರದ್ದೇ ಎಲ್ಲ ನಡೆಯುತ್ತಿದೆ. ಆದರೇನೂ, ಅವರು ಅಭಿವೃದ್ಧಿ ಮಾಡುತ್ತಿಲ್ಲ. ನಾವು ಅಸ್ತಿತ್ವ ಉಳಿಸಿಕೊಳ್ಳಲು ಈ ಚುನಾವಣೆ ಗೆಲ್ಲುವುದು ಮುಖ್ಯ’ ಎಂದರು.

‘ನಗರಸಭೆ, ಪಾಲಿಕೆ ಚುನಾವಣೆಗಳೂ ಇನ್ನೇನು ಬರಲಿವೆ. ಆಗ ‘ಬಿ’ ಫಾರಂ ಕೊಡುವಂತೆ ಬರಬೇಕೆಂದರೆ ಈಗಿನ ಚುನಾವಣೆ ಪ್ರಚಾರದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಿ. ರಾಜ್ಯದ ಇತರ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನೀವು ಮಾತ್ರ ನಮ್ಮನ್ನು ಮಾತನಾಡಿಸುತ್ತಿಲ್ಲ, ಏನೂ ಕೊಟ್ಟಿಲ್ಲ ಎಂದೆಲ್ಲ ಕುಳಿತಿರಬೇಡಿ. ಮತದಾರರ ಬಳಿ ಹೋಗಿ. ಯಾರು ಎಷ್ಟು ಕೆಲಸ ಮಾಡುತ್ತಿದ್ದೀರೆಂದು ಗೊತ್ತಿದೆ’ ಎಂದು ತಿಳಿಸಿದರು.

‘ಭಿನ್ನಾಭಿಪ್ರಾಯ ಬಿಟ್ಟು ಒಗ್ಗಟ್ಟಾಗಬೇಕು. ಬಿಜೆಪಿಯ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಈ.ಸಿ. ನಿಂಗರಾಜ್‌ ಗೌಡ, ಕೆ.ವಸಂತಕುಮಾರ್ ಕೆಲಸ ಮಾಡುತ್ತಿದ್ದಾರೆ. ನೀವು ಮಾತ್ರ ಜನರ ಬಳಿ ಹೋಗಿಲ್ಲ’ ಎಂದು ಕಾರ್ಯಕರ್ತರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಗ್ಯಾರಂಟಿ ಚಿಟ್ಟು ಹಿಡಿಸಿದೆ: ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗ್ಯಾರಂಟಿ ಹೆಸರು ಕೇಳಿ–ಕೇಳಿ ಜನರ ತಲೆ ಚಿಟ್ಟು ಹಿಡಿದಿದೆ. ಲೋಕಸಭಾ ಚುನಾವಣೆ ಫಲಿತಾಂಶ ನಂತರ ಗ್ಯಾರಂಟಿ ಬಗ್ಗೆ ಜನರಿಗೆ ಗೊತ್ತಾಗಲಿದೆ’ ಎಂದು ಬಿ.ವೈ.ವಿಜಯೇಂದ್ರ ಕಿಡಿಕಾರಿದರು. 

‘ಜೆಡಿಎಸ್‌– ಬಿಜೆಪಿ ಸರ್ಕಾರವಿದ್ದಾಗ ರಾಜ್ಯದಲ್ಲಿ ಸುವರ್ಣ ಯುಗವಿತ್ತು. ಶಿಕ್ಷಣ ಕ್ಷೇತ್ರಕ್ಕೆ ₹4 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿತ್ತು. ಕೋವಿಡ್‌ ಸಂದರ್ಭದಲ್ಲಿಯೂ ಯಡಿಯೂರಪ್ಪ ಅವರು ಶಿಕ್ಷಕರ ಸಂಬಳ ಕಡಿತ ಮಾಡಿರಲಿಲ್ಲ. ಈಗಿನ ಸರ್ಕಾರವು ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡಿದೆ’ ಎಂದರು.

ಶಾಸಕ ಟಿ.ಎಸ್‌. ಶ್ರೀವತ್ಸ, ವಿಧಾನ ‍ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜೆಡಿಎಸ್‌ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್‌, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಆರ್.ಕೌಟಿಲ್ಯ, ನಗರ ಘಟಕದ ಅಧ್ಯಕ್ಷ ಎಲ್‌.ನಾಗೇಂದ್ರ, ಗ್ರಾಮಾಂತರ ಘಟಕದ ಅಧ್ಯಕ್ಷ ಎಲ್‌.ಆರ್.ಮಹದೇವಸ್ವಾಮಿ, ಮುಖಂಡರಾದ ಸಿ.ಎಚ್‌.ವಿಜಯಶಂಕರ್‌, ಸಿ.ಎಸ್. ನಿರಂಜನ್ ಕುಮಾರ್, ಮೈ.ವಿ.ರವಿಶಂಕರ್, ಸಿದ್ದರಾಜು, ತೋಂಟದಾರ್ಯ, ಈ.ಸಿ.ನಿಂಗರಾಜ್‌ ಗೌಡ, ಸಂದೇಶ್ ಸ್ವಾಮಿ, ಶಿವಕುಮಾರ್, ಆರ್.ಲಿಂಗಪ್ಪ, ಎಂ.ಜೆ.ರವಿಕುಮಾರ್, ಕೇಬಲ್ ಮಹೇಶ್, ಬಿ.ಎಂ.ರಘು, ಗಿರಿಧರ್, ಕಿರಣ್, ಜಯರಾಮ್ ಗೌಡ ಹಾಜರಿದ್ದರು.

‘ಬಿ’ ಫಾರಂ ಬೇಕೆಂದರೆ ಪ್ರಚಾರದಲ್ಲಿ ತೊಡಗಿಸಿಕೊಳ್ಳಿ ಕಾರ್ಯಕರ್ತರು, ಮುಖಂಡರಿಗೆ ಜಿ.ಟಿ.ದೇವೇಗೌಡ ತಾಕೀತು
ತುಮಕೂರಿನ ಸಭೆಯಲ್ಲಿ ಎರಡೂ ಪಕ್ಷದ ಶಾಲೂ ಹಾಕಿದ್ದರು. ಇಲ್ಲಿ ಬಿಜೆಪಿಯದು ಮಾತ್ರ ಇದೆ. ಕಾರ್ಯಕರ್ತರು ಸರಿಯಾಗಿ ಸಂಘಟನೆ ಪ್ರಚಾರ ಮಾಡುತ್ತಿಲ್ಲ.
ಜಿ.ಟಿ.ದೇವೇಗೌಡ ಜೆಡಿಎಸ್‌ ಕೋರ್ ಕಮಿಟಿ ಅಧ್ಯಕ್ಷ
‘ಕನ್ನಡ ಬರಬೇಕೆಂಬ ಕಾನೂನಿದೆಯಾ ಎಂದು ಕೇಳಿದರೆ ಕಷ್ಟ’
‘ಶಿಕ್ಷಣ ಸಚಿವರ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು. ಅವರಿಗೆ ಕನ್ನಡ ಬರುವುದಿಲ್ಲವೆಂದು ನಾವೇನಾದರೂ ಹೇಳಿದರೆ ಸಚಿವರಿಗೆ ಕನ್ನಡ ಬರಬೇಕೆಂಬ ಕಾನೂನಿದೆಯಾ ಎಂದು ಸಿದ್ದರಾಮಯ್ಯ ಅವರು ಕೇಳಿದರೆ ಕಷ್ಟ’ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು. ‘ಪ್ರತಾಪ ಸಿಂಹ ಅವರಿಗೆ ಟಿಕೆಟ್‌ ತಪ್ಪಲು ನಾನು ಕಾರಣ ಅಲ್ಲ. ಪಕ್ಷದ ವರಿಷ್ಠರೇ ನಿರ್ಧರಿಸಿದ್ದರು. ಮೈಸೂರು– ಕೊಡಗು ಲೋಕಸಭಾ ಕ್ಷೇತ್ರವನ್ನು ಗೆಲ್ಲಲಿದ್ದೇವೆ. ಯದುವೀರ್‌ ಸರಳತೆಯನ್ನು ಜನರು ಗಮನಿಸಿದ್ದಾರೆ’ ಎಂದರು. ಸಭೆಯಲ್ಲಿ ಸಂಸದ ಪ್ರತಾಪ ಸಿಂಹ ಗೈರು ಹಾಜರಿ ಎದ್ದು ಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT