ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾದಯಾತ್ರೆ ಹೆಸರಿನಲ್ಲಿ ಮಾನ ಹರಾಜು: ವಿಶ್ವನಾಥ್‌ ಟೀಕೆ

Published : 5 ಆಗಸ್ಟ್ 2024, 14:41 IST
Last Updated : 5 ಆಗಸ್ಟ್ 2024, 14:41 IST
ಫಾಲೋ ಮಾಡಿ
Comments

ಮೈಸೂರು: ‘ಪಾದಯಾತ್ರೆ, ಜನಾಂದೋಲನದ ಹೆಸರಿನಲ್ಲಿ ಮೂರೂ ಪಕ್ಷಗಳು ರಾಜ್ಯದ ಮಾನ ಹರಾಜು ಮಾಡುತ್ತಿದ್ದು, ಸಾರ್ವಜನಿಕ ಹಿತಾಸಕ್ತಿಗಿಂತ ಕೌಟುಂಬಿಕ ಹಿತಾಸಕ್ತಿಯೇ ಹೆಚ್ಚಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಟೀಕಿಸಿದರು.

‘ಇವು ನಾಡಿನ ಹಿತಾಸಕ್ತಿಗೆ ನಡೆದಿರುವ ಕಾರ್ಯಕ್ರಮಗಳೇನೂ ಅಲ್ಲ. ವೈಯಕ್ತಿಕ ಟೀಕೆಗಳ ಭರಾಟೆಯಲ್ಲಿ ನಾಯಕರು ಮೂರೂ ಬಿಟ್ಟವರಂತೆ ಆಡುತ್ತಿದ್ದಾರೆ. ಅವರ ಭಾಷೆ ಬಳಕೆ ಅಸಹ್ಯ ಹುಟ್ಟಿಸುವಂತಿದೆ. ಅದನ್ನು ಟೀಕಿಸಬೇಕಾದ ಕನ್ನಡದ ಚಿಂತಕರು ಮರೆಯಾಗಿದ್ದಾರೆ. ಸಾಹಿತಿಗಳು- ಚಿಂತಕರು ಈಗ ಸರ್ಕಾರಗಳ ಫಲಾನುಭವಿಗಳು. ಹೀಗಾಗಿ ಮಾತನಾಡುತ್ತಿಲ್ಲ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.

‘ಸಿದ್ದರಾಮಯ್ಯನವರ ಸಾಮಾಜಿಕ ನ್ಯಾಯ ಬರೀ ಭ್ರಾಂತಿ. ಪುಸ್ತಕದ ಕಾನೂನಿನಲ್ಲಿ ಅಲ್ಲ, ಬದಲಿಗೆ, ಜನತಾ ನ್ಯಾಯಾಲಯದಲ್ಲಿ ಭೇಷ್ ಎನಿಸಿಕೊಳ್ಳಬೇಕು. ಕಾನೂನು ಮೀರಿ ಪಡೆದುಕೊಂಡಿರುವ ನಿವೇಶನಗಳನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಿ ಸತ್ಯಾಂಶ ಹೊರತೆಗೆಯಬೇಕು’ ಎಂದು ಆಗ್ರಹಿಸಿದರು.

‘ ಕೇವಲ ಸಿದ್ದರಾಮಯ್ಯ ಮಾತ್ರವಲ್ಲ, ಮೂರು ಪಕ್ಷದವರೂ ಮುಡಾದಲ್ಲಿ ನಿವೇಶನ ಪಡೆದಿದ್ದಾರೆ. ಜೆಡಿಎಸ್‌ನವರೇ ಹೆಚ್ಚಿದ್ದಾರೆ. ಎಲ್ಲವೂ ತನಿಖೆಯಾಗಲಿ’ ಎಂದರು.

ದಾಖಲೆ ನಾಶ: ‘ಮುಡಾದಿಂದ ಬೇರೆಡೆಗೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ಮತ್ತೆ ಅದೇ ಜಾಗದಲ್ಲಿ ವಕ್ಕರಿಸಿ ರಾತ್ರಿಯಿಡೀ ದಾಖಲೆಗಳನ್ನು ತಿದ್ದುತ್ತಿದ್ದಾರೆ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಹತ್ವದ ದಾಖಲೆಗಳನ್ನು ಈಗಾಗಲೇ ವಿಮಾನದಲ್ಲಿ ಹೊತ್ತೊಯ್ದಿದ್ದಾರೆ. ಈಗ ಉಳಿದ ದಾಖಲೆಗಳನ್ನು ಹಾಳುಗೆಡವುತ್ತಿದ್ದು, ಅದಕ್ಕೆಂದೇ ಮುಡಾದಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಕಿತ್ತು ಹಾಕಲಾಗಿದೆ. ದಾಖಲೆ ತಿದ್ದಲೆಂದೇ ತಮಗೆ ಬೇಕಾದವರನ್ನು ಆಯುಕ್ತರ ಜಾಗಕ್ಕೆ ತಂದು ಕೂರಿಸಿದ್ದಾರೆ. ಹೀಗಿರುವಾಗ ದೇಸಾಯಿ ಆಯೋಗ ಬಂದು ಏನು ತನಿಖೆ ಮಾಡಲು ಸಾಧ್ಯ?’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT