ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರದೆ ಹಿಂದಿನ ಧ್ರುವತಾರೆ ರಂಗಕರ್ಮಿ ಮುದ್ದುಕೃಷ್ಣ ಇನ್ನಿಲ್ಲ

Last Updated 8 ಜುಲೈ 2019, 13:57 IST
ಅಕ್ಷರ ಗಾತ್ರ

ಮೈಸೂರು: ‘ಪರದೆ ಹಿಂದಿನ ಧೃವತಾರೆ’ ಎಂದೇ ಖ್ಯಾತಿ ಪಡೆದ ಹಿರಿಯ ರಂಗಕರ್ಮಿ ಮುದ್ದುಕೃಷ್ಣ (65) ಹಾಗೂ ಇವರ ಪತ್ನಿ ಸಿಎಫ್‌ಟಿಆರ್‌ಐನ ವಿಜ್ಞಾನಿ ಇಂದ್ರಾಣಿ (59) ಉತ್ತರ ಪ್ರದೇಶದ ಲಖನೌ ಸಮೀಪ ಭಾನುವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

‘ಪಾರ್ಥೀವಶರೀರಗಳನ್ನು ತರಲು ರಂಗಕರ್ಮಿ ಜಯರಾಮ ಪಾಟೀಲ ಅವರು ಉತ್ತರ ಪ್ರದೇಶ ತಲುಪಿದ್ದು, ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇವರ ಇಬ್ಬರು ಪುತ್ರರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಪಾರ್ಥೀವ ಶರೀರ ಬಂದ ಬಳಿಕ ಅಂತಿಮ ಸಂಸ್ಕಾರದ ಕುರಿತು ಚಿಂತಿಸಲಾಗುವುದು’ ಎಂದು ಮುದ್ದುಕೃಷ್ಣ ಅವರ ಒಡನಾಡಿ, ರಂಗಾಯಣದ ಮಾಜಿ ನಿರ್ದೇಶಕ ಹಾಗೂ ಹಾಲಿ ಗಂಗೂಬಾಯಿ ಸಂಗೀತ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರೂ ಆಗಿರುವ ಎಚ್.ಜನಾರ್ದನ್ ‘‍ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

ಇಂಡಿಯನ್ ಬ್ಯಾಂಕಿನ ಉದ್ಯೋಗಿಯಾಗಿದ್ದ ಮುದ್ದುಕೃಷ್ಣ ನೇರವಾಗಿ ರಂಗದ ಮೇಲೆ ಬಣ್ಣ ಹಚ್ಚಿದವರಲ್ಲ. ಇವರು ರಂಗದ ಹಿಂದಿನ ಬಹುದೊಡ್ಡ ಶಕ್ತಿಯಾಗಿದ್ದರು. ಒಂದು ನಾಟಕಕ್ಕೆ ಏನೆಲ್ಲ ಬೇಕೋ ಅವೆಲ್ಲವನ್ನೂ ಪೂರೈಸುತ್ತಿದ್ದ ರಂಗಪೋಷಕ ಇವರಾಗಿದ್ದರು.

‘ಸಮುದಾಯ’ ರಂಗ ಚಳವಳಿಯಲ್ಲಿ ಸಕ್ರಿಯರಾಗಿದ್ದ ಇವರು ಮೈಸೂರಿನಲ್ಲಿ ಲಿಂಗದೇವರು ಹಳೇಮನೆ, ಎಸ್.ಆರ್.ರಮೇಶ್ ಅವರೊಂದಿಗೆ ಈ ಚಳವಳಿಯನ್ನು ಕಟ್ಟಿದವರು. ‘ಸಮುದಾಯ’ದ ಅನೇಕ ನಾಟಕಗಳಲ್ಲಿ ಇವರು ವೇದಿಕೆ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದರು.‌

ಸದಾ ಜನಪರ ಕಾಳಜಿಯುಳ್ಳ ಮುದ್ದುಕೃಷ್ಣ ಅವರದು ನಿಜಕ್ಕೂ ಮಗುವಿನಂತಹ ಮನಸ್ಸು. ತಮ್ಮ ಮನಸ್ಸಿಗೆ ಇದು ಅನ್ಯಾಯ ಎಂದು ಕಂಡಾಕ್ಷಣ ಕೆರಳಿ ಪ್ರತಿಭಟನೆಯನ್ನು ದಾಖಲಿಸುವುದಕ್ಕೂ ಇವರು ಹಿಂಜರಿಯುತ್ತಿರಲಿಲ್ಲ.

ಕೆಲ ವರ್ಷಗಳ ಹಿಂದೆ ಮೈಸೂರಿನ ರಂಗಾಯಣದ ‘ಬಹುರೂಪಿ’ ನಾಟಕೋತ್ಸವದ ಉದ್ಘಾಟನೆಗೆ ನಟ ಹಾಗೂ ರಂಗಕರ್ಮಿ ನಾಸಿರುದ್ದೀನ್‌ ಷಾ ಅವರನ್ನು ಕರೆಸಿದಾಗ ಇವರಿಗೆ ಸಂಭಾವನೆ ಕೊಡಲು ಸಾಕಷ್ಟು ಹಣ ಇರಲಿಲ್ಲ. ಅದಕ್ಕಾಗಿ ನಾಟಕ ಪ್ರದರ್ಶನದ ಟಿಕೆಟ್ ದರವನ್ನು ₹ 300ಕ್ಕೆ ಹೆಚ್ಚಿಸಲಾಯಿತು. ಇದರ ವಿರುದ್ಧ ಮುದ್ದುಕೃಷ್ಣ ಪ್ರತಿಭಟನೆ ನಡೆಸುವ ಮೂಲಕ ರಂಗಭೂಮಿ ಸಾಮಾನ್ಯ ಜನರಿಗೂ ಕೈಗೆಟುಕುವಂತಾಗಬೇಕು ಎಂದು ಪ್ರತಿಪಾದಿಸಿದ್ದರು.‌

ಯಾವಾಗ ತಮ್ಮ ರಂಗಚಟುವಟಿಕೆಗಳಿಗೆ ಕೆಲಸ ಅಡ್ಡಿಯಾಗುತ್ತದೆ ಎಂದು ಅನ್ನಿಸಿತೋ ಆ ಕ್ಷಣವೇ ಅವರು ಬ್ಯಾಂಕ್ ನೌಕರಿಯನ್ನು ತ್ಯಜಿಸಿ, ತಮ್ಮನ್ನು ತಾವು ಸಂಪೂರ್ಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು.

‌ಇವರು ಒಮ್ಮೆ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿದ್ದರು. ನೇರ, ನಿಷ್ಠುರತನದ ವ್ಯಕ್ತಿತ್ವ ರೂಢಿಸಿಕೊಂಡಿದ್ದ ಇವರಿಗೆ ಸಹಜವಾಗಿಯೇ ಹೆಚ್ಚಿನ ರಂಗಪುರಸ್ಕಾರಗಳು ಒಲಿದು ಬಂದಿರಲಿಲ್ಲ.

ಇವರ ಪತ್ನಿ ಇಂದ್ರಾಣಿ ಸಹ ಸಿಎಫ್‌ಟಿಆರ್‌ಐನಲ್ಲಿ ವಿಜ್ಞಾನಿಯಾಗಿದ್ದವರು. ಇವರ ನಿವೃತ್ತಿಗೆ ಒಂದು ವರ್ಷ ಮಾತ್ರವೇ ಬಾಕಿ ಉಳಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT