ಮೈಸೂರು: ಗೌರಿ–ಗಣೇಶ ಹಬ್ಬ ಹೊಸ್ತಿಲಲ್ಲಿದೆ. ನಗರದಲ್ಲಿ ಮೂರ್ತಿಗಳ ಮಾರಾಟವೂ ಜೋರಾಗಿದೆ. ಮಣ್ಣಿನ ಗಣಪನಿಗಿಂತಲೂ, ಬಣ್ಣದ ಗಣಪನಿಗೇ ಬೇಡಿಕೆ ಹೆಚ್ಚು ಕಂಡು ಬಂದಿದೆ. ಈ ನಡುವೆ, ಪರಿಸರ ಪ್ರಿಯರು, ‘ಬಣ್ಣದ ಗಣಪನ ಬಿಡಿ, ಮಣ್ಣಿನ ಗಣಪನಿಗೇ ಕೈ ಮುಗಿಯಿರಿ’ ಎಂದು ಜಾಗೃತಿ ಮೂಡಿಸುತ್ತಿದ್ದಾರೆ.
ಇಲ್ಲಿನ ಕೆ.ಟಿ.ರಸ್ತೆ, ಕುಂಬಾರಗೇರಿಯ ಸಿದ್ದಪ್ಪಾಜಿ ರಸ್ತೆ, ಕಾಳಿದಾಸ ರಸ್ತೆ, ಇರ್ವಿನ್ ರಸ್ತೆ, ಕುವೆಂಪುನಗರ, ಅಗ್ರಹಾರ, ವಿವೇಕಾನಂದ ವೃತ್ತ, ಒಂಟಿಕೊಪ್ಪಲು, ಪಡುವಾರಹಳ್ಳಿ ಬಳಿ ಮೂರ್ತಿಗಳ ಪ್ರದರ್ಶನ ಹಾಗೂ ಮಾರಾಟ ಭರ್ಜರಿಯಾಗಿದೆ. ಕೋಲಾರ, ಬೆಂಗಳೂರಿನಿಂದ ಮೂರ್ತಿಗಳನ್ನು ತರಿಸಲಾಗಿದೆ.
ಮೂಷಿಕ ವಾಹನನೂ ಹುಲಿ, ಸಿಂಹ, ಗರುಡ, ನವಿಲು, ಆನೆಯನ್ನು ಏರಿ ಬಂದಿದ್ದಾನೆ. ಡ್ರ್ಯಾಗನ್ ಸವಾರಿ ಮಾಡುತ್ತಿರುವ ಮೂರ್ತಿಗಳು ಸೇರಿ ಆಧುನಿಕ ರೂಪದ ಗಣಪನ ಮೂರ್ತಿಗಳು ಗಮನ ಸೆಳೆದಿವೆ. ಗೌರಿ ಮೂರ್ತಿಗಳು ಮಾತ್ರ ಸಾಂಪ್ರದಾಯಿಕ ವಿನ್ಯಾಸದಲ್ಲೇ ಇದ್ದು, ವಿವಿಧ ಆಕಾರಗಳಲ್ಲಿ ದೊರೆಯುತ್ತಿವೆ.
ಗಣಪನ ಮೂರ್ತಿಗಳು ಪ್ರಚಲಿತ ವಿದ್ಯಾಮಾನದಂತೆ ಪ್ರತಿಬಾರಿಯೂ ವಿವಿಧ ವಿಶೇಷ ರೂಪ ಧರಿಸುತ್ತವೆ. ಈ ಬಾರಿ ಅಯೋಧ್ಯೆಯ ರಾಮ ಮಂದಿರದೊಂದಿಗೆ ಗಣಪತಿ ಮೂರ್ತಿಯನ್ನು ಜೊತೆಯಾಗಿರಿಸಿರುವುದು ವಿಶೇಷ.
ಮಂಜುನಾಥ್ ಅವರು ಅಯೋಧ್ಯೆಯ ಬಾಲರಾಮನು ನಿಂತ ಭಂಗಿಯಲ್ಲಿಯೇ ಗಣಪತಿಯನ್ನು ನಿರ್ಮಿಸಿದ್ದು, ‘ಒಂದು ಮೂರ್ತಿ ನಿರ್ಮಾಣಕ್ಕೆ 10 ದಿನ ಸಮಯ ಬೇಕಾಗುತ್ತದೆ’ ಎಂದು ತಿಳಿಸಿದರು. ₹50ರಿಂದ ಆರಂಭವಾಗುವ ಮೂರ್ತಿಗಳ ದರವೂ ಎತ್ತರ, ವಿನ್ಯಾಸದಂತೆ ಹೆಚ್ಚಳವಾಗುತ್ತಿದ್ದು, ಕಳೆದ ಬಾರಿಗಿಂತ ದುಬಾರಿಯಾಗಿದೆ.
ಬಣ್ಣಕ್ಕೆ ಆದ್ಯತೆ: ‘ಪರಿಸರ ಸ್ನೇಹಿ, ಸಂಪೂರ್ಣ ಬಣ್ಣರಹಿತ ಗಣಪತಿಯನ್ನು ಮಾರಾಟ ಮಾಡಲು ಸಿದ್ಧವಿದ್ದರೂ ಗ್ರಾಹಕರೇ ಕೊಳ್ಳುವುದಿಲ್ಲ. ಬಹುತೇಕರು ಬಣ್ಣದ ಗಣಪತಿಯನ್ನೇ ಕೇಳುತ್ತಾರೆ’ ಎಂಬುದು ‘ಫೇಮಸ್ ಜೇಡಿ ಮಣ್ಣಿನ ಗಣಪತಿಗಳು’ ಮಳಿಗೆ ವ್ಯಾಪಾರಿ ಎಸ್.ರವಿಕುಮಾರ್ ಅವರ ನುಡಿ.
‘25 ವರ್ಷದಿಂದ ಇಲ್ಲಿನ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ವ್ಯಾಪಾರ ಮಾಡುತ್ತಿದ್ದೇವೆ. ₹200ರಿಂದ ₹18,000ದವರೆಗಿನ ದರದಲ್ಲಿ ವಿವಿಧ ಮಾದರಿಯ ಗಣಪತಿ ಮೂರ್ತಿಗಳಿವೆ. ಜೇಡಿ ಮಣ್ಣು ಮತ್ತು ಪರಿಸರ ಸ್ನೇಹಿ ವಾಟರ್ ಕಲರ್ ಬಳಸಿ ಮಾಡಲಾಗಿದ್ದು, ಕೋಲಾರದಿಂದ ತರಿಸುತ್ತೇವೆ’ ಎಂದರು.
ಮನೆ, ಕಚೇರಿಗೆ ಮಣ್ಣಿನ ಗಣಪತಿ: ‘ಮನೆಗಳಲ್ಲಿ ಕೂರಿಸಲು, ಕಚೇರಿಯಲ್ಲಿ ಉದ್ಯೋಗಿಗಳಿಗೆ ನೀಡಲು ಮಣ್ಣಿನ ಪುಟ್ಟ ಗಣಪತಿಗೆ ಹೆಚ್ಚು ಬೇಡಿಕೆಯಿದೆ. ಸಗಟಾಗಿ ಆರ್ಡರ್ ನೀಡುತ್ತಾರೆ. ಮಣ್ಣಲ್ಲಿ ಹೆಚ್ಚೆಂದರೆ 6 ಅಡಿ ಎತ್ತರದ ಮೂರ್ತಿ ಮಾಡಬಹುದು. ಅದೇ ಸುಮಾರು 200 ಕೆ.ಜಿ. ತೂಕ ಬರಲಿದೆ. ಪಿಒಪಿ ಮತ್ತು ಆಯಿಲ್ ಪೇಂಟೆಡ್ ಗಣಪತಿಗಳ ಉತ್ಪಾದನೆ ತಡೆದರೆ ನಮ್ಮಂತ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ’ ಎಂದು ಕೆ.ಟಿ.ರಸ್ತೆಯ ಗಣಪತಿ ತಯಾರಕ ಮಂಜುನಾಥ್ ‘ಪ‍್ರಜಾವಾಣಿ’ಗೆ ತಿಳಿಸಿದರು.
ತಂದೆಯ ಕಾಲದಿಂದಲೂ ಗಣಪತಿ ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದೇವೆ. ಕಳೆದ ಬಾರಿ ₹1000 ದರವಿದ್ದ ಮೂರ್ತಿ ಈ ಬಾರಿ ₹1600ಕ್ಕೆ ದೊರೆಯುತ್ತಿದೆ.ಜಯಶೀಲನ್, ಗಾಯಿತ್ರಿಪುರಂ
‘ಒಂದು ಟ್ರಾಕ್ಟರ್ ಜೇಡಿ ಮಣ್ಣಿಗೆ ₹6 ಸಾವಿರ ಹೇಳುತ್ತಾರೆ, ಹದ ಮಾಡಲು ಕಾರ್ಮಿಕರಿಗೆ ₹ 6 ಸಾವಿರ ಕೊಡಬೇಕು. ಎಲ್ಲವೂ ದುಬಾರಿಯಾಗಿದ್ದು, ಶೇ ₹20ರಷ್ಟು ದರ ಹೆಚ್ಚಳ ಅನಿವಾರ್ಯವಾಗಿದೆ’ ಎಂದರು. ‘ಕಳೆದ ಬಾರಿಗಿಂತ ಶೇ 30ರಷ್ಟು ದರ ಹೆಚ್ಚಳವಾಗಿದೆ’ ಎಂದು ಕುಂಬಾರಗೇರಿಯಲ್ಲಿನ ಮೂರ್ತಿ ತಯಾರಕ ಸುಬ್ಬಯ್ಯ ಹೇಳುತ್ತಾರೆ.
ಪಿಒಪಿ ಗಣಪತಿ ಲಭ್ಯ !
‘ಈಗಲೂ ಮಾರುಕಟ್ಟೆಯಲ್ಲಿ ಶೇ 50ಕ್ಕೂ ಹೆಚ್ಚು ಪಿಒಪಿ ಗಣಪನ ಮೂರ್ತಿಗಳಿವೆ. ಹೆಬ್ಬಾಳದಲ್ಲಿ ಹೆಚ್ಚು ಮಾರಾಟ ನಡೆದಿದೆ. ಬಸವನಗುಡಿ ಸರ್ಕಲ್ ಬಳಿಯೂ ಮಾರಾಟವಾಗುತ್ತದೆ. ಕದ್ದು ಮುಚ್ಚಿ ಮಾರುತ್ತಾರೆ. ಫಿನಿಶಿಂಗ್ ಚೆನ್ನಾಗಿರುತ್ತದೆ. ಬೇಕಾದ ಡಿಸೈನ್ ಇರುತ್ತದೆ. ಪಿಒಪಿಗೆ ವಾಟರ್ ಪೇಂಟ್ ಆಗುವುದಿಲ್ಲ ಆಯಿಲ್ ಬಳಸುತ್ತಾರೆ. 6 ಅಡಿಗಿಂತ ಎತ್ತರವಿದ್ದರೆ ಆ ಮೂರ್ತಿ ಒಂದೋ ಪಿಒಪಿ ಅಥವಾ ಪೇಪರ್ ಮೌಲ್ಡ್ ಆಗಿರುತ್ತದೆ’ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು. ‘ಪೇಪರ್ ಮೌಲ್ಡ್ ಮೂರ್ತಿಗಳು ಪರಿಸರ ಸ್ನೇಹಿಯಾದರೂ ಅಲ್ಲಿಯೂ ಗಟ್ಟಿಬರಲು ಪಿಒಪಿ ಮಿಕ್ಸ್ ಮಾಡುವುದಿದೆ. ಮಣ್ಣಿನ ಮೂರ್ತಿಗಳಲ್ಲೂ ಮಣ್ಣು ಒಡಕು ಬಾರದಂತೆ ಕೆಲವರು ಕೆಮಿಕಲ್ ಬಳಸುತ್ತಾರೆ. ವಾಟರ್ ಕಲರ್ ಬಳಸಿದ್ದರೂ ಆಭರಣಗಳು ಮತ್ತು ಬಟ್ಟೆಯ ಹೊಳಪಿಗಾಗಿ ಕೆಮಿಕಲ್ ವಾರ್ನಿಶ್ ಬಳಸುವುದಿದೆ. ಯಾವುದೇ ಬಣ್ಣ ಬಳಸದ ಮೂರ್ತಿ ಮಾತ್ರ ಶೇ 100 ಪರಿಸರ ಸ್ಷೇಹಿ’ ಎಂದರು.
ಒಂದು ಪ್ರಕರಣ; ಎಚ್ಚರಿಕೆ
‘ಸುಮಾರು 20 ಸ್ಥಳಗಳಲ್ಲಿ ಪಿಒಪಿ ಹಾಗೂ ಆಯಿಲ್ ಪೇಂಟೆಡ್ ಗಣಪತಿಗಳಿಗಾಗಿ ತಪಾಸಣೆ ಮಾಡಿದ್ದೇವೆ. ಇರ್ವಿನ್ ರಸ್ತೆಯಲ್ಲಿ 2 ಪಿಒಪಿ ಮೂರ್ತಿಗಳು ಸಿಕ್ಕಿದ್ದವು. ನೋಟಿಸ್ ನೀಡಿ ಎಚ್ಚರಿಸಿದ್ದೇವೆ’ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಹೆಬ್ಬಾಳದಲ್ಲಿ ಪಿಒಪಿ ಗಣಪತಿ ಮಾರಾಟದ ಬಗ್ಗೆ ಮಾಹಿತಿ ದೊರೆತಿದ್ದು ಅದು ಪಾಲಿಕೆ ವ್ಯಾಪ್ತಿಯಲ್ಲಿಲ್ಲ. ಕ್ರಮ ಕೈಗೊಳ್ಳಲು ಹೂಟಗಳ್ಳಿ ಪಂಚಾಯಿತಿಗೆ ಮಾಹಿತಿ ನೀಡಲಾಗಿದೆ. ನಿಯಮಗಳನ್ನು ಪಾಲಿಸದಿದ್ದರೆ ₹5 ಸಾವಿರದಿಂದ ₹25 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ. ದೂರು ನೀಡಲು ಮೊ.ಸಂ.96204 49505 ಸಂಪರ್ಕಿಸಬಹುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.