ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುರೂಪಿ ಚಲನಚಿತ್ರೋತ್ಸವ: ವನ್ಯಜೀವಿ ಛಾಯಾಗ್ರಾಹಕ ಲೋಕೇಶ ಮೊಸಳೆ ಚಾಲನೆ

Published 7 ಮಾರ್ಚ್ 2024, 9:17 IST
Last Updated 7 ಮಾರ್ಚ್ 2024, 9:17 IST
ಅಕ್ಷರ ಗಾತ್ರ

ಮೈಸೂರು: ‘ಕನ್ನಡ ಭಾಷೆ ಬೆಳವಣಿಗೆಯಲ್ಲಿ ಸಿನಿಮಾ ಕ್ಷೇತ್ರ ಪ್ರಮುಖವಾಗಿ ನೆರವಾಗಿದೆ. ಸಾಹಿತ್ಯ–ರಂಗಭೂಮಿ–ಸಿನಿಮಾ ಅಂತರ್‌ಸಂಬಂಧ ಹೊಂದಿವೆ’ ಎಂದು ವನ್ಯಜೀವಿ ಛಾಯಾಗ್ರಾಹಕ ಲೋಕೇಶ ಮೊಸಳೆ ಹೇಳಿದರು.

ರಂಗಾಯಣದ ಭೂಮಿಗೀತದಲ್ಲಿ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ಪ್ರಯುಕ್ತ ಗುರುವಾರ ‘ಬಹುರೂಪಿ ಚಲನಚಿತ್ರೋತ್ಸವ’ಕ್ಕೆ ಚಾಲನೆ ನೀಡಿ ಮಾತನಾಡಿ, ‘ಸಾಹಿತ್ಯದ ನೂರಾರು ಕೃತಿಗಳು ಸಿನಿಮಾವಾಗಿವೆ. ರಂಗಭೂಮಿ, ಸಿನಿಮಾದಲ್ಲಿ ಸಾಹಿತಿಗಳೂ ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ’ ಎಂದರು.

‘ಕನ್ನಡಿಗರಲ್ಲಿ ಸದಭಿರುಚಿ, ಕಲಾತ್ಮಕತೆಯನ್ನು ಸಾಹಿತ್ಯದಷ್ಟೇ ರಂಗಭೂಮಿ, ಸಿನಿಮಾಗಳು ಕಟ್ಟಿಕೊಟ್ಟಿವೆ. 1931ರಲ್ಲಿ ಮೂಕಿ ಚಿತ್ರಗಳು ಬಂದಾಗ ರಂಗಭೂಮಿಗೆ ಉಳಿಗಾಲವಿಲ್ಲವೆಂದು ಕಲಾವಿದರು ಅಂದುಕೊಂಡಿದ್ದರು. ಸಿನಿಮಾವನ್ನು ರಂಗಭೂಮಿಯೇ ಬೆಳೆಸಿದೆ’ ಎಂದು ತಿಳಿಸಿದರು.

‘ರಂಗಭೂಮಿ ಹಿನ್ನೆಲೆಯಿಂದ ಬಂದ ನಟರು ಸಿನಿಮಾ ಕ್ಷೇತ್ರವನ್ನು ಕಟ್ಟಿದ್ದಾರೆ. ರಂಗಾಯಣದ ಕಲಾವಿದರೇ ಆದ ರಂಗಾಯಣ ರಘು, ಅರುಣ್ ಸಾಗರ್, ಮಂಡ್ಯರಮೇಶ್‌ ದೊಡ್ಡ ಹೆಸರು ಮಾಡಿದ್ದಾರೆ. ನೂರಾರು ಕಲಾವಿದರು ತಂತ್ರಜ್ಞರಾಗಿಯೂ ಮನ್ನಣೆ ಗಳಿಸಿದ್ದಾರೆ’ ಎಂದು ಉದಾಹರಿಸಿದರು.

‘1934ರಲ್ಲಿ ಮೊದಲ ವಾಕ್ಚಿತ್ರ ಸತಿ ಸುಲೋಚನ ಬೆಂಗಳೂರಿನ ಕೆ.ಆರ್‌.ಮಾರುಕಟ್ಟೆ ಎದುರು ಕುಸ್ತಿ ಪಂದ್ಯಗಳು, ಸಂಗೀತ ಕಛೇರಿಗಳು ನಡೆಯುತ್ತಿದ್ದ ಗಯಾಟೆ ಎಂಬಲ್ಲಿ ಪ್ರದರ್ಶನಗೊಂಡಿತು. ಅಲ್ಲಿಂದ 90 ವರ್ಷದಲ್ಲಿ ಕನ್ನಡ ಸಿನಿಮಾ ಲೋಕ ವಿಸ್ತಾರವಾಗಿದೆ. ಇತ್ತೀಚೆಗೆ ಪ್ರತಿಯೊಬ್ಬರ ಬಳಿಯಲ್ಲೂ ಕ್ಯಾಮೆರಾಗಳಿವೆ. ಚಿತ್ರಗಳ ಚೌಕಟ್ಟು ವಿಸ್ತರಣೆಯಾಗಿದೆ. ಅಭಿವ್ಯಕ್ತಿಯು ಸಾಧ್ಯವಾಗಿದೆ’ ಎಂದರು.

ಚಲನಚಿತ್ರೋತ್ಸವದ ಸಂಯೋಜಕ ಕೆ.ಮನು ಮಾತನಾಡಿ, ‘ಚಲನಚಿತ್ರೋತ್ಸವಗಳಲ್ಲಿ ಸಾಕ್ಷ್ಯಚಿತ್ರಗಳ ಪ್ರದರ್ಶನ ಕಡಿಮೆ. ಕೆಲವು ಸಾಕ್ಷ್ಯಚಿತ್ರಗಳಲ್ಲಿ ಪಾತ್ರವಿರದಿದ್ದರೂ ವಿಷಯ, ವಿಚಾರ, ಭಾವನೆಗಳೂ ಇರುತ್ತದೆ. ಪಾತ್ರಗಳಿಗಿಂತ ಚಿತ್ರಗಳು, ಅಕ್ಷರ, ಸಂಖ್ಯೆಗಳು, ನಕ್ಷೆಗಳ ಮೂಲಕವೂ ಸಮರ್ಥವಾಗಿ ಅಭಿವ್ಯಕ್ತಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂಥ ಮಾದರಿ ಚಿತ್ರಗಳಿಗೂ ನಾವು ತೆರೆದುಕೊಳ್ಳಬೇಕಿದೆ’ ಎಂದರು.

‘ಬಹುರೂಪಿ ಚಲನಚಿತ್ರೋತ್ಸವಕ್ಕೆ ರಾಷ್ಟ್ರಮಟ್ಟದಲ್ಲಿ ವಿಶಿಷ್ಟವಾದ ಸ್ಥಾನ ಪಡೆದಿದೆ. ಮೊದಲೆಲ್ಲ ಸಿನಿಮಾ ಸಿಗಲು ಕಷ್ಟಪಡಬೇಕಿತ್ತು. ಅಂತರ್ಜಾಲ ತೆರೆದುಕೊಂಡ ಮೇಲೆ ಜನರು ಉತ್ಸವಗಳಿಗೆ ಬರುವುದು ಕಡಿಮೆಯಾಗಿದೆ. ಆದರೆ, ರಂಗಾಯಣದಲ್ಲಿ ತೋರಿಸುವ ಚಿತ್ರಗಳು ನೂರಾರು ಫಿಲ್ಮ್‌ಕ್ಲಬ್‌ಗಳಲ್ಲಿ ಚರ್ಚೆಯಾಗುತ್ತವೆ. ಇಲ್ಲಿನ ಚಿತ್ರಗಳ ಪಟ್ಟಿಯನ್ನು ತೆಗೆದಿರಿಸಿಕೊಳ್ಳುತ್ತಾರೆ. ಚರ್ಚಿಸುತ್ತಾರೆ’ ಎಂದು ತಿಳಿಸಿದರು.

‘ರಂಗಾಯಣದಲ್ಲಿ ಕಲಿತು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ಕಲಾವಿದರು ತಯಾರಿಸಿದ ಚಿತ್ರವನ್ನೂ ಈ ಬಾರಿಯ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತಿರುವುದು ವಿಶೇಷ’ ಎಂದರು.

ನಾಟಕೋತ್ಸವದ ಸಂಚಾಲಕ ಪ್ರೊ.ಎಚ್.ಎಸ್.ಉಮೇಶ್, ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ರಂಗಾಯಣ ನಿರ್ದೇಶಕಿ ನಿರ್ಮಲಾ ಮಠಪತಿ‌‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT