ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಮೂಡಲಹುಂಡಿ ಬಳಿ ಹುಲಿ ಪ್ರತ್ಯಕ್ಷ: ಆತಂಕ

Published 29 ಜೂನ್ 2024, 15:31 IST
Last Updated 29 ಜೂನ್ 2024, 15:31 IST
ಅಕ್ಷರ ಗಾತ್ರ

ಮೈಸೂರು: ತಾಲ್ಲೂಕಿನ ವರಕೋಡು ಮೀಸಲು ಅರಣ್ಯ ವ್ಯಾಪ್ತಿಯೊಳಗೆ ಹಾದು ಹೋಗಿರುವ ಮೂಡಲಹುಂಡಿ ರಸ್ತೆಯಲ್ಲಿ ಶನಿವಾರ ಹುಲಿ ಕಾಣಿಸಿಕೊಂಡಿದ್ದು, ಆ ಭಾಗದಲ್ಲಿ ಸಂಚರಿಸುವವರಿಗೆ ಮತ್ತು ಸುತ್ತಮುತ್ತಲ ಗ್ರಾಮದವರಿಗೆ ಆತಂಕ ಮೂಡಿಸಿದೆ. ಸಮೀಪದಲ್ಲೇ ಮೊರಾರ್ಜಿ ದೇಸಾಯಿ ವಸತಿ ಶಾಲೆ ಇದ್ದು, ಅಲ್ಲಿನ ಮಕ್ಕಳು ಮತ್ತು ಸಿಬ್ಬಂದಿಗೆ ಹೆಚ್ಚಿನ ಭೀತಿ ಉಂಟಾಗಿದೆ.

ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್‌ ಸವಾರರಿಗೆ ಹುಲಿ ಕಾಣಿಸಿಕೊಂಡಿದೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಮೈಸೂರು ವಿಭಾಗದ ಡಿಸಿಎಫ್‌ ಬಸವರಾಜ ಕೆ.ಎನ್., ಮೈಸೂರು ಉಪ ವಿಭಾಗದ ಎಸಿಎಫ್‌ ಎನ್. ಲಕ್ಷ್ಮೀಕಾಂತ್, ಮೈಸೂರು ವಲಯದ ಆರ್‌ಎಫ್‌ಒ ಕೆ.ಸುರೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಹುಲಿ ಸೆರೆ ಕಾರ್ಯಾಚರಣೆಗೆ ಚಿರತೆ ಕಾರ್ಯಪಡೆಯ ಸಿಬ್ಬಂದಿ ಹಾಗೂ ಮೈಸೂರು ವಲಯದ ಸಿಬ್ಬಂದಿ ಒಳಗೊಂಡ ತಂಡವನ್ನು ರಚಿಸಲಾಗಿದೆ. ಕಾರ್ಯಾಚರಣೆ ಸ್ಥಳದಲ್ಲಿ ಕ್ಯಾಮೆರಾ (ನೈಟ್ ವಿಷನ್‌ ಐಆರ್‌–ಜಿಎಸ್‌ಎಂ ಕ್ಯಾಮೆರಾ) ಹಾಗೂ ಟ್ರ್ಯಾಪ್‌ ಕ್ಯಾಮೆರಾ ಅಳವಡಿಸಲಾಗಿದೆ. ಜತಗೆ ಡ್ರೋನ್‌ ಕ್ಯಾಮೆರಾದಿಂದ ಸ್ಥಳ ಪರಿಶೀಲನೆ ನಡೆಸಲಾಗಿದೆ’ ಎಂದು ಬಸವರಾಜ ಕೆ.ಎನ್. ಮಾಹಿತಿ ನೀಡಿದ್ದಾರೆ.

‘ಹುಲಿಯ ಚಲನ-ವಲನ ಗಮನಿಸಲು, ಅದು ಕಾಣಿಸಿಕೊಂಡಿರುವ ಅರಣ್ಯದ ಅಂಚಿನ ಗ್ರಾಮಗಳಲ್ಲಿ ಗಸ್ತು ವಾಹನ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಾಡಂಚಿನಲ್ಲಿರುವ ವರಕೋಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಒಂದು ವಿಶೇಷ ತಂಡವನ್ನು ನಿಯೋಜಿಸಿ ಶಾಲಾ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಕಾಡಂಚಿನ ಗ್ರಾಮಗಳ ಜನರಿಗೆ ರಾತ್ರಿ ಮತ್ತು ನಸುಕಿನ ವೇಳೆಯಲ್ಲಿ ಅನಗತ್ಯವಾಗಿ ಓಡಾಡದಂತೆ ತಿಳಿಸಲಾಗುತ್ತಿದೆ. ಕರಪತ್ರಗಳನ್ನು ನೀಡಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

‘ವರಕೋಡು ಮೀಸಲು ಅರಣ್ಯದ ಬಳಿಯ ಗ್ರಾಮಗಳ ಜನರು ರಾತ್ರಿ ವೇಳೆ ಓಡಾಡದಂತೆ, ವದಂತಿಗಳಿಂದ ಭೀತರಾಗದಂತೆ ಮತ್ತು ಹುಲಿ ಸೆರೆ ಕಾರ್ಯಾಚರಣೆ ಮುಗಿಯುವವರೆಗೆ ಸಂಪೂರ್ಣ ಸಹಕಾರ ನೀಡುವಂತೆ ಕೋರಲಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT