ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಲೋಕ ಅದಾಲತ್‌ ನ.12ರಂದು: 50 ಸಾವಿರ ಪ್ರಕರಣ ರಾಜಿ -ಸಂಧಾನದ ಗುರಿ

Last Updated 14 ಅಕ್ಟೋಬರ್ 2022, 8:24 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ನ.12ರಂದು ಜಿಲ್ಲೆಯ ಎಲ್ಲ 64 ನ್ಯಾಯಾಲಯಗಳಲ್ಲೂ ರಾಷ್ಟ್ರೀಯ ಲೋಕ ಅದಾಲತ್‌ ನಡೆಸಲಾಗುವುದು’ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಎಂ.ಎಲ್.ರಘುನಾಥ್‌ ತಿಳಿಸಿದರು.

‘ಬಾಕಿ ಇರುವವುಗಳಲ್ಲಿ ರಾಜಿ–ಸಂಧಾನದ ಮೂಲಕ ಇತ್ಯರ್ಥಗೊಳಿಸಬಹುದಾದವುಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುವುದು. ಈ ಬಾರಿ 50ಸಾವಿರ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಗುರಿ ಹೊಂದಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.

‘ಮೈಸೂರು ನಗರ ಮತ್ತು ತಾಲ್ಲೂಕುಗಳ ನ್ಯಾಯಾಲಯಗಳಲ್ಲಿ ಒಟ್ಟು 1,12,443 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಅವುಗಳಲ್ಲಿ 59,555 ಸಿವಿಲ್ ಹಾಗೂ 52,888 ಕ್ರಿಮಿನಲ್‌ ಪ್ರಕರಣಗಳಾಗಿವೆ. ಅವುಗಳಲ್ಲಿ 38,752 ಇತ್ಯರ್ಥಗೊಳ್ಳುವ ಸಂಭವವಿದೆ’ ಎಂದರು.

ಸಹಕಾರದಿಂದ:‘3,954 ಮೋಟಾರು ವಾಹನ ಅಪಘಾತ ಪ್ರಕರಣಗಳು, 2,533 ರಾಜಿಯಾಗಬಹುದಾದ ಕ್ರಿಮಿನಲ್‌ ಪ್ರಕರಣಗಳು, 4,418 ಚೆಕ್‌ ಬೌನ್ಸ್ ಹಾಗೂ 742 ವ್ಯಾಜ್ಯಪೂರ್ವ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗುವುದು. ನಗರಪಾಲಿಕೆಯ ತೆರಿಗೆ, ಕಂದಾಯ ಇಲಾಖೆಗೆ ಸಂಬಂಧಿಸಿದವನ್ನೂ ರಾಜಿ ಮೂಲಕ ಇತ್ಯರ್ಥಪಡಿಸಲು ಯೋಜಿಸಲಾಗಿದೆ. ಅದಾಲತ್‌ಗೆ ವಕೀಲರ ಸಂಘದವರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ’ ಎಂದು ಹೇಳಿದರು.

‘ಈ ವರ್ಷದ ಕೊನೆಯ ಅದಾಲತ್ ಇದಾಗಿದೆ. ಮಾರ್ಚ್‌ನಲ್ಲಿ 54,893, ಜೂನ್‌ನಲ್ಲಿ 75,562 ಹಾಗೂ ಆಗಸ್ಟ್‌ನಲ್ಲಿ ನಡೆದ ಅದಾಲತ್‌ನಲ್ಲಿ 52,548 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಸರ್ಕಾರಕ್ಕೆ ₹ 2 ಕೋಟಿಯಷ್ಟು ದಂಡದ ಮೊತ್ತವು ಪಾವತಿ ಆಗುವಂತೆ ಮಾಡಿದ್ದು ವಿಶೇಷ ಸಾಧನೆ’ ಎಂದರು.

ಅರ್ಜಿ ಸಲ್ಲಿಸಬೇಕು:‘ರಾಜಿಯಾಗುವಂತಹ ಯಾವುದೇ ಪ್ರಕರಣವನ್ನು ಕಕ್ಷಿಗಾರರ ವಿನಂತಿಯ ಮೇರೆಗೆ ಸಂಬಂಧಿಸಿದ ನ್ಯಾಯಾಲಯದಲ್ಲಾಗಲಿ ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಾಗಲೀ ಅರ್ಜಿ ಸಲ್ಲಿಸಿದಲ್ಲಿ, ಇತ್ಯರ್ಥಕ್ಕೆ ತೆಗೆದುಕೊಳ್ಳಲಾಗುವುದು’ ಎಂದು ವಿವರಿಸಿದರು.

‘ಕಂದಾಯ ಇಲಾಖೆ ಹಾಗೂ ಮುಡಾ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದವುಗಳಲ್ಲಿ ₹ 20 ಲಕ್ಷದೊಳಗಿನ ಪರಿಹಾರದ ಪ್ರಕರಣಗಳನ್ನು ಪರಿಗಣಿಸಲಾಗುತ್ತದೆ. ಅಂತಹ 300ಕ್ಕೂ ಹೆಚ್ಚು ಪ್ರಕರಣಗಳಿವೆ. ಇತ್ಯರ್ಥವಾದಲ್ಲಿ ಪರಿಹಾರ ಪಾವತಿಗೆ ಸಿದ್ಧವಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ’ ಎಂದರು.

ಅನುಕೂಲಗಳೇನು?:‘ಅದಾಲತ್‌ನಲ್ಲಿ ರಾಜಿಯಾದಂತ ಪ್ರಕರಣಗಳಲ್ಲಿ ಮಾಡಿದ ಅವಾರ್ಡ್‌/ ಆದೇಶಕ್ಕೆ ನ್ಯಾಯಾಲಯಗಳಲ್ಲಿ ಇತ್ಯರ್ಥವಾದ ಪ್ರಕರಣಗಳಲ್ಲಿನ ಆದೇಶದಷ್ಟೆ ಮಹತ್ವ ಇರುತ್ತದೆ. ವ್ಯಾಜ್ಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಹಾಗೂ ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಬಹುದು. ಸಮಯವೂ ಉಳಿಯುತ್ತದೆ. ಕಕ್ಷಿಗಾರರ ಸಂಬಂಧವೂ ಕೆಡುವುದಿಲ್ಲ. ನ್ಯಾಯಾಲಯ ಶುಲ್ಕ ಪಾವತಿಸಬೇಕಿಲ್ಲ. ಪಕ್ಷಗಾರರು ನೇರವಾಗಿ ಭಾಗವಹಿಸಹುದು. ಸಂಧಾನಕಾರರು ಸೂಚಿಸುವ ಪರಿಹಾರ ತೃಪ್ತಿಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು. ಪ್ರಕರಣಗಳು ರಾಜಿಯಾದಲ್ಲಿ ಶೇ 100ರಷ್ಟು ನ್ಯಾಯಾಲಯ ಶುಲ್ಕ ಹಿಂದಿರುಗಿಸಲಾಗುವುದು. ಹೀಗಾಗಿ, ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕೋರಿದರು.

ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇವಸ್ವಾಮಿ ಮಾತನಾಡಿ, ‘ಅದಾಲತ್‌ಗೆ ಸಂಪೂರ್ಣ ಸಹಕಾರ ಕೊಡಲಾಗುವುದು. ರಾಜಿಗೆ ಮುಂದಾಗುವಂತೆ ಕಕ್ಷಿಗಾರರಿಗೂ ತಿಳಿಸುತ್ತಿದ್ದೇವೆ. ಹೊಸ ಪ್ರಕರಣಗಳ ಜೊತೆಗೆ ಹಳೆಯವನ್ನೂ ಇತ್ಯರ್ಥಪಡಿಸಲು ಆದ್ಯತೆ ಕೊಡುವಂತೆ ‍ಪ್ರಾಧಿಕಾರವನ್ನು ಕೋರಿದ್ದೇವೆ’ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ದೇವರಾಜ ಭೂತೆ ಮತ್ತು ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT