ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಕ್ರೀಡೆಯ ಬೆಳಕಲ್ಲಿ ಹೊಳೆದ ಪ್ರತಿಭೆಗಳು

Published 29 ಆಗಸ್ಟ್ 2024, 7:18 IST
Last Updated 29 ಆಗಸ್ಟ್ 2024, 7:18 IST
ಅಕ್ಷರ ಗಾತ್ರ
ಸಾಂಸ್ಕೃತಿಕ ನಗರಿ ಮೈಸೂರು ಕ್ರೀಡಾಪ್ರಿಯರ ನಗರಿಯಾಗಿಯೂ ಸದ್ದು ಮಾಡತೊಡಗಿದೆ. ಇಲ್ಲಿನ ಸಾಕಷ್ಟು ಯುವ ಕ್ರೀಡಾಪಟುಗಳು ರಾಷ್ಟ್ರೀಯ–ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸತೊಡಗಿದ್ದಾರೆ. 2024ರಲ್ಲಿ ಪದಕಗಳ ಬೇಟೆಯಾಡಿದ್ದಾರೆ. ಕ್ರೀಡಾ ದಿನವಾದ ಇಂದು ಈ ಯುವ ಸಾಧಕರ ಕುರಿತ ಪುಟ್ಟ ಪರಿಚಯ ಇಲ್ಲಿದೆ.
ರಣಜಿಯಲ್ಲಿ ಮಲ್ಲಿಗೆ ಕಂಪಿನ ಹುಡುಗ

ನಿಕಿನ್‌ ಜೋಸ್ ಸದ್ಯ ಕರ್ನಾಟಕ ರಣಜಿ ತಂಡದಲ್ಲಿ ಬೆಳಗುತ್ತಿರುವ ಮೈಸೂರಿನ ಪ್ರತಿಭೆ. 24 ವಯಸ್ಸಿನ ಈ ಯುವ ಬಲಗೈ ಬ್ಯಾಟರ್ ಮೂರು ಋತುವಿನಿಂದ ರಣಜಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಈ ವರ್ಷ ಇದೇ ಮೊದಲ ಬಾರಿಗೆ ತವರು ನೆಲದಲ್ಲಿ ರಣಜಿ ಆಡುವ ಅವಕಾಶ ಪಡೆದಿದ್ದ ನಿಕಿನ್‌, ಶತಕದ ಮೂಲಕ ಆ ಸಂಭ್ರಮವನ್ನು ಇಮ್ಮಡಿಗೊಳಿಸಿಕೊಂಡಿದ್ದಾರೆ.

2014ರಲ್ಲಿ ಕರ್ನಾಟಕ ಜೂನಿಯರ್ ತಂಡಕ್ಕೆ (ಅಂಡರ್‌ 16 ಮತ್ತು 19) ಆರಂಭಿಕ ಆಟಗಾರನಾಗಿ ಪದಾರ್ಪಣೆ ಮಾಡಿದ ಅವರು ಅಲ್ಲಿಂದ ಇಲ್ಲಿವರೆಗೆ ಅನೇಕ ಮೆಟ್ಟಿಲುಗಳನ್ನು ಏರಿದ್ದಾರೆ. ‘ಕರ್ನಾಟಕಕ್ಕೆ ಆಡುವುದು ನನ್ನ ಕನಸು’ ಎನ್ನುತ್ತಿದ್ದ ಕನಸು ನನಸಾಗಿದ್ದು ಮೂರು ವರ್ಷದ ಹಿಂದೆ. 2022ರ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಸರ್ವೀಸಸ್‌ ವಿರುದ್ಧದ ಪಂದ್ಯದ ಮೂಲಕ ರಣಜಿಗೆ ಪದಾರ್ಪಣೆ ಮಾಡಿದ್ದ ಜೋಸ್‌ ಮೊದಲ ಋತುವಿನಲ್ಲೇ 9 ಪಂದ್ಯಗಳಿಂದ 49.72 ರ ಸರಾಸರಿಯಲ್ಲಿ 547 ರನ್‌ ಕಲೆಹಾಕುವ ಮೂಲಕ ಗಮನ ಸೆಳೆದಿದ್ದರು.

ಈವರೆಗೆ 17 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ನಿಕಿನ್‌ 33.12ರ ಸರಾಸರಿಯಲ್ಲಿ 828 ರನ್‌ ಕಲೆಹಾಕಿದ್ದಾರೆ. 24 ಎ ದರ್ಜೆಯ ಪಂದ್ಯಗಳಿಂದ 48.88 ಸರಾಸರಿಯಲ್ಲಿ 880 ರನ್ ಹೊಡೆದಿದ್ದಾರೆ. 2023ರ ಎಮರ್ಜಿಂಗ್ ತಂಡಗಳ ಏಷ್ಯಾ ಕಪ್‌ನಲ್ಲಿ ಆಡಿದ್ದ ಭಾರತ ‘ಎ’ ತಂಡದಲ್ಲೂ ಸ್ಥಾನ ಪಡೆದಿದ್ದರು. ಭಾರತ ತಂಡವನ್ನು ಪ್ರತಿನಿಧಿಸುವುದು ಸದ್ಯ ಅವರ ಮುಂದಿನ ಗುರಿ.

ಭರವಸೆಯ ಪದ್ಮಪ್ರಿಯಾ

ನಗರದ ಟೆನಿಸ್‌ ಆಟಗಾರ್ತಿ 12 ವರ್ಷದ ಪದ್ಮಪ್ರಿಯಾ ರಮೇಶ್‌ಕುಮಾರ್ ಹೈದರಾಬಾದ್‌ನಲ್ಲಿ ನಡೆದ 12 ವರ್ಷದ ಒಳಗಿನವರ ರಾಷ್ಟ್ರಮಟ್ಟದ ಟೆನಿಸ್ ಟೂರ್ನಿಯ ಸಿಂಗಲ್ಸ್‌ ಹಾಗೂ ಡಬಲ್ಸ್‌ ಎರಡೂ ವಿಭಾಗದಲ್ಲೂ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಸಾನಿಯಾ ಮಿರ್ಜಾ ಟೆನಿಸ್‌ ಅಕಾಡೆಮಿಯು ಆಯೋಜಿಸಿದ್ದ ಟೂರ್ನಿಯ ಫೈನಲ್ಸ್‌ನಲ್ಲಿ ಪದ್ಮಪ್ರಿಯಾ ತೆಲಂಗಾಣದ ಜೋಹಾ ಖುರೇಷಿ ಅವರನ್ನು ಮಣಿಸಿ ಅಗ್ರ ಪ್ರಶಸ್ತಿ ಗೆದ್ದಿದ್ದರು. ಡಬಲ್ಸ್‌ನಲ್ಲೂ ಪದ್ಮಪ್ರಿಯಾ ಹಾಗೂ ಮಹಾರಾಷ್ಟ್ರ ಸಾರಾ ಫೆಂಗ್ಸ್ ಜೋಡಿ ತಮಿಳುನಾಡು ತಂಡವನ್ನು ಮಣಿಸಿತ್ತು. ಈ ಗೆಲುವಿನೊಂದಿಗೆ ಪದ್ಮಪ್ರಿಯಾ 12 ವರ್ಷದ ಒಳಗಿನವರ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಮೂರನೇ ರ್‍ಯಾಂಕಿಂಗ್‌ಗೆ ಏರಿದ್ದರು. ಗುವಾಹಟಿ, ಸೇಲಂ, ಜೋರ್ಹಾತ್, ಹೈದರಾಬಾದ್‌ ಹಾಗೂ ಮುಂಬೈ ಸೇರಿದಂತೆ ವಿವಿಧೆಡೆ ನಡೆದ ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಮಿಂಚುತ್ತಿದ್ದಾರೆ. ಗುವಾಹಟಿಯಲ್ಲಿ ನಡೆದ ಏಷ್ಯನ್ ಟೆನಿಸ್‌ ಟೂರ್ನಿಯಲ್ಲಿ 14 ವರ್ಷದೊಳಗಿನವರ ವಿಭಾಗದಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್‌ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಕಜಕ್‌ಸ್ತಾನದ ಶೈಮ್‌ಕೆಂಟ್‌ಮನಲ್ಲಿ ನಡೆದ ಏಷ್ಯನ್‌ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರಿಗೆ ರಘುವೀರ್ ಟೆನಿಸ್‌ ಅಕಾಡೆಮಿಯ ರಘುವೀರ್‌ ತರಬೇತಿ ನೀಡುತ್ತಿದ್ದಾರೆ. ಕೂರ್ಗಳ್ಳಿಯ ಎಕ್ಸೆಲ್ ಪಬ್ಲಿಕ್ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿಯಾದ ಪದ್ಮಪ್ರಿಯಾ, ಅರಣ್ಯ ಇಲಾಖೆಯ ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯಾ ಹಾಗೂ ಹುಲಿ ಯೋಜನೆಯ ಸಿಎಫ್ ಪಿ. ರಮೇಶ್‌ಕುಮಾರ್ ದಂಪತಿಯ ಪುತ್ರಿ.

ಈಜುಕೊಳದ ಚಿನ್ನದ ಮೀನು!

ಈಜುಕೊಳದ ಚಿನ್ನದ ಮೀನು!

ಈಜು ಸ್ಪರ್ಧೆಯಲ್ಲಿ ಅಂತರರಾಷ್ಟ್ರೀಯ ಪದಕಕ್ಕೆ ಕೊರಳೊಡ್ಡಿದ ನಗರದ ಮೊದಲ ಕ್ರೀಡಾಪಟು ಎಂಬ ಖ್ಯಾತಿ ಎಸ್. ತಾನ್ಯಾರದ್ದು.

14 ವರ್ಷದ ಈ ಹುಡುಗಿ ಪಾಲ್ಗೊಳ್ಳುವ ಸ್ಪರ್ಧೆಯಲ್ಲೆಲ್ಲ ಪದಕಗಳ ಬೇಟೆಯಾಡುತ್ತಾ, ಬಂಗಾರದ ಮೀನಾಗಿ ಹೊರಹೊಮ್ಮಿದ್ದಾರೆ. ರಾಷ್ಟ್ರಮಟ್ಟದ ಶಾಲಾ ಕ್ರೀಡಾಕೂಟಗಳಲ್ಲೂ ದಾಖಲೆ ಬರೆದಿದ್ದಾರೆ. ಶಾಲಾ ಹಂತದಲ್ಲೇ ಛಾಪು ಮೂಡಿಸಿದ್ದು, ಭವಿಷ್ಯದ ಭರವಸೆಯಾಗಿ ಬೆಳೆಯುತ್ತಿದ್ದಾರೆ.

ದೆಹಲಿಯಲ್ಲಿ ಕೆಲವು ತಿಂಗಳ ಹಿಂದೆ ನಡೆದ ಬಿಐಎಂಎಸ್‌ಟಿಇಸಿ ಅಂತರರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ 200 ಮೀಟರ್ಸ್‌ ಬ್ರೆಸ್ಟ್‌ ಸ್ಟ್ರೋಕ್, 200 ಮೀಟರ್ಸ್‌ ವೈಯಕ್ತಿಕ ಮೆಡ್ಲೆ, 400 ಮೀಟರ್ಸ್‌ ಮೆಡ್ಲೆಯಲ್ಲಿ ಅವರು ಒಟ್ಟು ಮೂರು ಬಂಗಾರ ಗೆದ್ದಿದ್ದರು. ಚೆನ್ನೈನಲ್ಲಿ ನಡೆದ ರಾಷ್ಟ್ರ ಮಟ್ಟದ ಖೇಲೊ ಇಂಡಿಯಾ ಯೂತ್‌ ಗೇಮ್ಸ್‌–2024 ರಲ್ಲೂ ಬಂಗಾರ ಗೆದ್ದಿದ್ದರು.

ಎಸ್.ಪಿ ಷಡಕ್ಷರಿ ಹಾಗೂ ಶ್ವೇತಾ ಎನ್. ದಂಪತಿಯ ಪುತ್ರಿಯಾದ ತಾನ್ಯಾ, ಶಾರದಾ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿನಿ. ಅವರಿಗೆ ಮೈಸೂರಿನ ಪಿ. ಪವನ್‌ಕುಮಾರ್ ತರಬೇತಿ ನೀಡುತ್ತಿದ್ದಾರೆ.

ಟೆನಿಸ್‌ ತಾರೆ ಪ್ರಜ್ವಲ್‌ದೇವ್

ಮೂರು ವರ್ಷಗಳಿಂದ ದೇಶದಲ್ಲಿ ಮತ್ತು ಹೊರದೇಶಗಳಲ್ಲಿ ಐಟಿಎಫ್‌ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ನಗರದ ಎಸ್‌.ಡಿ. ಪ್ರಜ್ವಲ್‌ ದೇವ್ ಟೆನಿಸ್‌ನಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ಕಾಂಗೊ-ಬ್ರಾಜವಿಲ್‌ನಲ್ಲಿ ನಡೆದ ಐಟಿಎಫ್ ಟೂರ್ನಿಯ ಡಬಲ್ಸ್‌ನಲ್ಲಿ 25 ಸಾವಿರ ಡಾಲರ್ ಪ್ರಶಸ್ತಿ ಗೆದ್ದರು. ಅಲ್ಲದೇ ಇತರ ಮೂರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ವಿವಿಧ ಸುತ್ತುಗಳನ್ನು ಪ್ರವೇಶಿಸಿದ್ದರು. ಡೇವಿಸ್‌ ಕ‍ಪ್‌ ಗೆದ್ದ ಭಾರತ ತಂಡದಲ್ಲಿ ಸಹ ಸದಸ್ಯರಾಗಿದ್ದರು. ಪಾಕಿಸ್ತಾನ ವಿರುದ್ಧ ಆಡಿದ್ದ ಡೇವಿಸ್ ಕಪ್ ತಂಡಕ್ಕೆ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದ ಮೈಸೂರಿನ ಪ್ರಜ್ವಲ್ ದೇವ್, ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೂರ್ನಿಯ ಸಿಂಗಲ್ಸ್‌ ಪ್ರಧಾನ ಸುತ್ತಿಗೆ ವೈಲ್ಡ್‌ ಕಾರ್ಡ್ ನೀಡಲಾಗಿತ್ತು. 28 ವರ್ಷದ ದೇವ್, ಉತ್ತಮ ಲಯದಲ್ಲಿದ್ದಾರೆ. ಥಾಯ್ಲೆಂಡ್‌ನಲ್ಲಿ ಐಟಿಎಫ್‌ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರು.

ನಗರದ ಮಹಾರಾಜ ಕಾಲೇಜಿನ ಟೆನಿಸ್‌ ಕೋರ್ಟ್‌, ಮೈಸೂರು ಟೆನಿಸ್‌ ಕ್ಲಬ್‌ ಅಂಗಳದ ಅಭ್ಯಾಸ ನಡೆಸಿದ್ದರು. ತಂದೆ ಎಸ್‌.ಎನ್‌.ದೇವರಾಜು (ನಿವೃತ್ತ ಡಿಸಿಎಫ್‌), ತಾಯಿ ಡಾ.ಎಂ.ಎಸ್‌.ನಿರ್ಮಲಾ (ಪ್ರಸೂತಿ ತಜ್ಞೆ), ಕೋಚ್‌ ಅರ್ಜುನ್ ಗೌತಮ್ ಅವರ ಪ್ರೋತ್ಸಾಹವನ್ನು ಪ್ರಜ್ವಲ್ ಸ್ಮರಿಸಿದರು. ‘ತಾತ ಪ್ರೊ.ಶಿವಲಿಂಗಯ್ಯ ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲರು. ನನಗೆ 9 ವರ್ಷವಿದ್ದಾಗ ಅವರೊಂದಿಗೆ ಅಲ್ಲಿಗೆ ಟೆನಿಸ್‌ ಆಡಲು ಹೋಗುತ್ತಿದ್ದೆ. ಆಗ, ಆಡುವ ಖುಷಿಯಷ್ಟೇ ಇತ್ತು. ನಂತರ ಸಾಧನೆ ಮಾಡುವ ಕನಸನ್ನು ಪೋಷಕರು ಹಾಗೂ ಕೋಚ್‌ಗಳಾದ ನಾಗರಾಜ್, ರಘುವೀರ್‌ ತುಂಬಿದರು. ಬೆಂಗಳೂರಿನ ಪ್ರಹ್ಲಾದ ಶ್ರೀನಾಥ್ ಹಾಗೂ ರೋಹನ್‌ ಬೋಪಣ್ಣ ಅಕಾಡೆಮಿಗಳಲ್ಲಿ ತರಬೇತಿ ಪಡೆದೆ. ನಿತ್ಯ 4 ಗಂಟೆ ಟೆನಿಸ್‌ ಅಭ್ಯಾಸ ಹಾಗೂ 2 ಗಂಟೆ ಫಿಟ್‌ನೆಸ್‌ಗೆ ಮೀಸಲಿಟ್ಟಿದ್ದೇನೆ’ ಎಂದರು.

ಕ್ರಿಕೆಟ್‌ ಮಿಂಚು ಶುಭಾ ಸತೀಶ್‌

ನವಿ ಮುಂಬೈನ ಡಿ.ವೈ.ಪಾಟೀಲ್‌ ಕ್ರಿಕೆಟ್‌ ಅಂಗಳದಲ್ಲಿ ಇಂಗ್ಲೆಂಡ್‌ ವಿರುದ್ಧದ ಚೊಚ್ಚಲ ಟೆಸ್ಟ್‌ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿ (69) ಮಿಂಚಿದ ಎಡಗೈ ಬ್ಯಾಟರ್‌ ಶುಭಾ ಸತೀಶ್‌ ಕ್ರಿಕೆಟ್‌ ತಾರೆಯಾಗಿ ಹೊಮ್ಮಿದರು.

ರಾಜರಾಜೇಶ್ವರಿ ನಗರ ನಿವಾಸಿ, ಬೆಮೆಲ್‌ ಉದ್ಯೋಗಿ ಎನ್‌.ಸತೀಶ್‌– ಕೆ.ತಾರಾ ದಂಪತಿ ಪುತ್ರಿ. ಪ್ರಾದೇಶಿಕ ಶಿಕ್ಷಣ ಕೇಂದ್ರದ ಆವರಣದಲ್ಲಿರುವ ಡಿಎಂಎಸ್‌ ಶಾಲೆಯಲ್ಲಿ ಪಿಯುವರೆಗೆ ಶಿಕ್ಷಣ ಪಡೆದ ಶುಭಾ, ಲಕ್ಷ್ಮಿಹಯಗ್ರೀವ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದಾರೆ. ವರ್ಷದ ಹಿಂದಷ್ಟೇ ನೈರುತ್ಯ ರೈಲ್ವೆ ಉದ್ಯೋಗಿಯಾಗಿದ್ದಾರೆ.

‘ಮನೆ ಮುಂದೆ ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲಿ ಗಂಟೆಗಟ್ಟಲೆ ಔಟಾಗದೇ ಆಡುತ್ತಿದ್ದನ್ನು ನೋಡಿದ ತಂದೆ, ಕ್ರಿಕೆಟ್‌ ತರಬೇತಿ ಶಾಲೆಗೆ ಸೇರಿಸಿದರು. 12ನೇ ವರ್ಷದಿಂದಲೇ ಆಕೆಯ ಕ್ರಿಕೆಟ್‌ ಪಯಣ ಆರಂಭವಾಯಿತು. ಇದೀಗ ದೇಶವನ್ನು ಪ್ರತಿನಿಧಿಸಿದ್ದಾಳೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡದ ಸದಸ್ಯೆ’ ಎಂದು ಶುಭಾ ತಾಯಿ ತಾರಾ ಹೇಳಿದರು.

ಮಹಾರಾಜ ಕಾಲೇಜು ಮೈದಾನದಲ್ಲಿ ಕ್ರಿಕೆಟ್‌ ನೆಟ್‌ಗಳಲ್ಲಿ ಅಭ್ಯಾಸ ನಡೆಸಿ, ನಂತರ ಜಯಲಕ್ಷ್ಮಿಪುರಂನ ಮಹಾಜನ ಕಾಲೇಜಿನಲ್ಲಿರುವ ಜಗದೀಶ್‌ ಪ್ರಸಾದ್‌ ಕ್ರಿಕೆಟ್‌ ಕ್ರೀಡಾಂಗಣದ ರಜತ್‌ ಅವರ ಬೌಲ್‌ಔಟ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ 8 ವರ್ಷದಿಂದ ತರಬೇತಿ ಪಡೆಯುತ್ತಿರುವ ಶುಭಾ, ಪ್ರತಿನಿಧಿಸಿದ ತಂಡಗಳನ್ನು ಗೆಲ್ಲಿಸಿದ್ದಾರೆ. ‘ಆಕ್ರಮಣಕಾರಿಯಾಗಿ ಆಡುವ, ಗುರಿ ಬೆನ್ನಟ್ಟುವ ಛಾತಿಯ ಆಟಗಾರ್ತಿ. ಈಚೆಗೆ ಆಸ್ಟ್ರೇಲಿಯಾ ‘ಎ’ ತಂಡದ ವಿರುದ್ಧ 44 ರನ್‌ ಬಾರಿಸಿದ್ದಾರೆ.

ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದು ದೊಡ್ಡ ಸಾಧನೆ ಮಾಡಿದ್ದಾರೆ’ ಎಂದು ಬೌಲ್‌ಔಟ್‌ ಅಕಾಡೆಮಿಯ ಕೋಚ್‌ ರಜತ್‌ ಸತೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT