ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮನುಕುಲದ ಒಳಿತಿಗೆ ಶಿಕ್ಷಣದಿಂದ ಶಕ್ತಿ: ಬಾಬರ್ ಅಲಿ

ಗೋಪಾಲಸ್ವಾಮಿ ಪಿಯು ಕಾಲೇಜು: ‘ವಿಶ್ವದ ಕಿರಿಯ ಮುಖ್ಯ ಶಿಕ್ಷಕ’ ಪ್ರಸಿದ್ಧಿಯ ಬಾಬರ್‌ ಅಲಿ ಸಂವಾದ
Published : 26 ಸೆಪ್ಟೆಂಬರ್ 2024, 4:06 IST
Last Updated : 26 ಸೆಪ್ಟೆಂಬರ್ 2024, 4:06 IST
ಫಾಲೋ ಮಾಡಿ
Comments

ಮೈಸೂರು: ‘ಶಿಕ್ಷಣವೆಂದರೆ ಪುಸ್ತಕದ ಜ್ಞಾನ ಮಾತ್ರವಲ್ಲ.‌ ಅದು ಮನುಕುಲದ ಒಳಿತಿಗೆ ನಮ್ಮನ್ನು ಸಿದ್ಧಗೊಳಿಸುವ ಶಕ್ತಿ’ ಎಂದು ‘ವಿಶ್ವದ ಕಿರಿಯ ಮುಖ್ಯ ಶಿಕ್ಷಕ’ ಎಂಬ ಪ್ರಸಿದ್ಧಿ ಹೊಂದಿರುವ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯ ಬಾಬರ್ ಅಲಿ ಹೇಳಿದರು.

ಇಲ್ಲಿನ ಗೋಪಾಲಸ್ವಾಮಿ ಶಿಶುವಿಹಾರ ಶಿಕ್ಷಣ ಸಂಸ್ಥೆಯ ಪಿಯು ಕಾಲೇಜಿನಲ್ಲಿ ಬುಧವಾರ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘9ನೇ ವರ್ಷದವನಾಗಿದ್ದಾಗ ನಾನು ಕಲಿತ ಶಿಕ್ಷಣವನ್ನು ಇತರರಿಗೂ ಕಲಿಸಬೇಕು ಎಂಬ ಆಲೋಚನೆ ಬಂತು. ನನ್ನ ತಂದೆಯಿಂದ ನಾನು ಶಿಕ್ಷಣ ಪಡೆಯುತ್ತಿದ್ದೇನೆ. ನನ್ನಿಂದ ಯಾರಾದರೂ ಇದನ್ನು ಪಡೆಯಬೇಕಲ್ಲವೇ ಎಂಬುದು ನನ್ನನ್ನು ಕಾಡಿದ ಪ್ರಶ್ನೆ. ಈ ಆಲೋಚನೆಯೇ ನನ್ನನ್ನು ‘ಆನಂದ ಶಿಕ್ಷಾ ನಿಕೇತನ್ ಶಾಲೆ’ ಆರಂಭಕ್ಕೆ ಪ್ರೇರೇಪಿಸಿತು. ಕಿರಿಯ ಮುಖ್ಯಶಿಕ್ಷಕನನ್ನಾಗಿಸಿತು’ ಎಂದರು.

‘ಯಾವುದೇ ಕೆಲಸ ಮಾಡಬೇಕಾದರೆ ನಮಗೆ ಎರಡು ವಿಷಯಗಳಲ್ಲಿ ಸ್ಪಷ್ಟತೆ ಇರಬೇಕು. ಒಂದು ಕೆಲಸದಿಂದ ದೊರೆಯುವ ಲಾಭ, ಮತ್ತೊಂದು ನಾವು ಗಳಿಸುವ ಸಾಕ್ಷಾತ್ಕಾರದ ಕುರಿತು. ಶಿಕ್ಷಕನಾಗುವುದು ನನ್ನನ್ನು ಹೆಚ್ಚು ವಿದ್ಯಾವಂತನನ್ನಾಗಿಸುತ್ತದೆ ಮತ್ತು ಈ ಕೆಲಸದಿಂದಾಗಿ ಅಕ್ಷರ ವಂಚಿತ ಮಕ್ಕಳಿಗೆ ಉತ್ತಮ ಭವಿಷ್ಯ ದೊರೆಯುತ್ತದೆ ಎಂಬುದು ನನಗೆ ಮನದಟ್ಟಾಗಿತ್ತು. ಹಾಗಾಗಿ ಎಲ್ಲ ಕಷ್ಟಗಳ ನಡುವೆಯೂ ಶಾಲೆ ಆರಂಭಿಸಿದೆ. ಇಂದಿಗೆ 22 ವರ್ಷಗಳಾಗಿದ್ದು, ಸುಮಾರು 8 ಸಾವಿರ ಮಕ್ಕಳು ಶಿಕ್ಷಣ ಪಡೆದಿದ್ದಾರೆ’ ಎಂದು ತಮ್ಮ ಸಾಧನೆ ಹಾದಿಯನ್ನು ನೆನಪಿಸಿಕೊಂಡರು.

‘ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಹೊಂದಿದ್ದೇನೆ. ಸ್ವಯಂ ಆಸಕ್ತಿಯಿಂದ ನಾನು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ತಮ್ಮದೇ ಆದ ಗುರಿ ಇದ್ದು ಪರಿಶ್ರಮದಿಂದ ಅದನ್ನು ಸಾಧಿಸಬೇಕು. ಪ್ರತಿ ಕ್ಷೇತ್ರದಲ್ಲೂ ಸಾಕಷ್ಟು ಅವಕಾಶವಿದ್ದು, ನಕಾರಾತ್ಮಕ ಮನೋಭಾವ ಬಿಟ್ಟು ಅಭಿವೃದ್ಧಿಯತ್ತ ಸಾಗಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯದ ಹಲವು ವ್ಯಕ್ತಿಗಳು ನನ್ನ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಕರ್ನಾಟಕ ನನ್ನ ಎರಡನೇ ಮನೆಯಿದ್ದಂತೆ’ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಎನ್.ಆರ್.ಮಂಜುನಾಥ್, ಕಾಲೇಜಿನ ಜ್ಞಾನಧ್ವನಿ 90.8 ಕಮ್ಯುನಿಟಿ ರೇಡಿಯೊ ಕಾರ್ಯಕ್ರಮ ಅಧಿಕಾರಿ ಪಾಂಡುರಂಗ ವಿಠ್ಠಲ್, ಲಕ್ಷ್ಮೀಪುರಂ ಪಿಯು ಕಾಲೇಜು ಇಂಗ್ಲಿಷ್ ಪ್ರಾಧ್ಯಾಪಕಿ ಕೆ.ವಸುಂಧರಾ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೇಮ್ ಅಶ್ವಿನ್ ಕುಮಾರ್ ಇದ್ದರು.

ಮೈಸೂರಿನ ಗೋಪಾಲಸ್ವಾಮಿ ಪಿಯು ಕಾಲೇಜಿನಲ್ಲಿ ಬುಧವಾರ ನಡೆದ ಸಂವಾದ ಕ್ರಾಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ
ಮೈಸೂರಿನ ಗೋಪಾಲಸ್ವಾಮಿ ಪಿಯು ಕಾಲೇಜಿನಲ್ಲಿ ಬುಧವಾರ ನಡೆದ ಸಂವಾದ ಕ್ರಾಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ

9ನೇ ವಯಸ್ಸಿನಲ್ಲಿ ಶಾಲೆ ಆರಂಭಿಸಿದ್ದ ಬಾಬರ್‌ ಅಲಿ ಕೂಲಿಕಾರರ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶ ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ: ಬಾಬರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT