ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನ್‌ಡ್ರೈವ್‌ ಪ್ರಕರಣ: ನ್ಯಾಯಾಂಗ ತನಿಖೆಗೆ ಜೆಡಿಎಸ್‌ ಒತ್ತಾಯ

Published 7 ಮೇ 2024, 6:45 IST
Last Updated 7 ಮೇ 2024, 6:45 IST
ಅಕ್ಷರ ಗಾತ್ರ

ಮೈಸೂರು: ಪೆನ್‌ಡ್ರೈವ್‌ ಪ್ರಕರಣದ ತನಿಖೆಯನ್ನು ಹಾಲಿ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಪೆನ್‌ಡ್ರೈವ್ ಹಂಚಿದವರನ್ನೂ ಬಂಧಿಸಬೇಕು ಎಂದು ಜೆಡಿಎಸ್‌ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಒತ್ತಾಯಿಸಿದರು.

‘ರಾಜ್ಯ ಸರ್ಕಾರವು ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ್ದನ್ನು ಮೊದಲ ದಿನವೇ ಜೆಡಿಎಸ್‌ ಸ್ವಾಗತಿಸಿದ್ದು, ನ್ಯಾಯ ಸಮ್ಮತ ತನಿಖೆಗೆ ಒತ್ತಾಯಿಸಿದ್ದೆವು. ಆದರೆ ಇಡೀ ಪ್ರಕರಣ ವನ್ನು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ತಮಗೆ ಬೇಕಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಯಾರನ್ನು ಬಂಧಿಸಬೇಕು, ಯಾರನ್ನು ಬಿಡಬೇಕು ಎಂದು ಡಿ.ಕೆ. ಶಿವಕುಮಾರ್ ಅಣತಿಯಂತೆ ಎಸ್‌ಐಟಿ ಅಧಿಕಾರಿಗಳು ನಡೆಯುತ್ತಿದ್ದಾರೆ. ಸಿಬಿಐ ತನಿಖೆಗೆ ಕಾಂಗ್ರೆಸ್ ಒಪ್ಪುವುದಿಲ್ಲ. ಹೀಗಾಗಿ ನ್ಯಾಯಾಧೀಶರಿಂದಲೇ ಪ್ರಕರಣದ ತನಿಖೆ ನಡೆಸಬೇಕು’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣದಲ್ಲಿ ಮಧ್ಯ ಪ್ರವೇಶಿಸಬೇಕು. ಅವರೇ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಜಿ.ಟಿ. ದೇವೇಗೌಡ ಕೋರಿದರು. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ಬುಧವಾರ ರಾಜ್ಯದಾದ್ಯಂತ ಜೆಡಿಎಸ್‌ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

‘ಪ್ರಕರಣದಲ್ಲಿ ಪೆನ್ ಡ್ರೈವ್ ಹಂಚಿದವರು ಸಹ ಶಿಕ್ಷೆಗೆ ಅರ್ಹರು. ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪಿಸಿರುವಂತೆ ಪೆನ್‌ಡ್ರೈವ್ ಬಿಡುಗಡೆಯಲ್ಲಿ ಡಿ.ಕೆ. ಶಿವಕುಮಾರ್ ಪಾತ್ರವೇ ಪ್ರಮುಖವಾಗಿದೆ. ಹೀಗಾಗಿ ಕೂಡಲೇ ಅವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಶಿವರಾಮೇಗೌಡ, ಡಿಕೆಶಿ ಆಡಿಯೊ ಬಗ್ಗೆ ಕೂಡ ನ್ಯಾಯಾಂಗ ತನಿಖೆಯಾಗಬೇಕು’ ಎಂದು ಆಗ್ರಹಿಸಿದರು.

‘ಪೊಲೀಸರು ಮೊಬೈಲ್‌ನಲ್ಲಿ ವಿಡಿಯೊ ಇಟ್ಟುಕೊಂಡವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಕಟಣೆ ನೀಡಿದ್ದಾರೆಯೇ ಹೊರತು ಇದನ್ನು ಹಂಚಿದವರನ್ನು ಈವರೆಗೂ ಬಂಧಿಸಿಲ್ಲ. ವಿಡಿಯೊ ಹಂಚಿದ್ದ‌ ಕಾರ್ತೀಕ್ ಎಂಬುವರನ್ನು ವಿದೇಶಕ್ಕೆ ಕಳುಹಿಸಿದ್ದೇ ಕಾಂಗ್ರೆಸ್ ನಾಯಕರು. ಈ ಪ್ರಕರಣಕ್ಕೂ ಮೋದಿಗೂ, ದೇವೇಗೌಡರಿಗೂ, ಕುಮಾರಸ್ವಾಮಿಗೂ ಏನು ಸಂಬಂಧ?’ ಎಂದು ಪ್ರಶ್ನಿಸಿದರು.

ಪೆನ್‌ಡ್ರೈವ್‌ ಪ್ರಕರಣವು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜೊತೆಗೂಡಿ ಚುನಾವಣೆಗೆ ಮಾಡಿರುವ ಷಡ್ಯಂತ್ರ. ಸಂತ್ರಸ್ಥರಿಗೆ ನಿಜವಾಗಿ ನ್ಯಾಯ‌ ಸಿಗುವುದು ಅವರಿಗೆ ಬೇಕಿಲ್ಲ. ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸುವುದೇ ಅವರ ಮುಖ್ಯ ಗುರಿ ಎಂದು ದೂರಿದರು.

ಪೊಲೀಸರಿಂದಲೂ ಷಡ್ಯಂತ್ರ– ಸಾ.ರಾ. ಆರೋಪ:

‘ರೇವಣ್ಣ ವಿರುದ್ಧ ಆರೋಪ ಮಾಡಿರುವ ಮಹಿಳೆಯನ್ನು ರೇವಣ್ಣ ಆಪ್ತ ರಾಜಗೋಪಾಲ್ ಎಂಬುವರ ತೋಟದ ಮನೆಯಿಂದ ರಕ್ಷಣೆ ಮಾಡಲಾಗಿದೆ ಎಂಬುದು ಸುಳ್ಳು. ಈ ಬಗ್ಗೆ ವಿಡಿಯೊ ಸಮೇತ ಪೊಲೀಸರು ದಾಖಲೆ ನೀಡಿದರೆ ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ’ ಎಂದು ಜೆಡಿಎಸ್‌ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್‌ ಸವಾಲು ಹಾಕಿದರು.

‘ಸುಳ್ಳು ಪ್ರಕರಣ ದಾಖಲಿಸಿ ರೇವಣ್ಣರನ್ನು ಸಿಲುಕಿಸಲು ಹುನ್ನಾರ ನಡೆದಿದೆ. ಸಂತ್ರಸ್ಥೆಯ ಮಗನಿಗೆ ಯಾರು ಹಣ ತಲುಪಿಸಿದ್ದಾರೆ ಗೊತ್ತು. ಅಪಹರಣ ಮಾಡಲಾಗಿದೆ ಎಂದು ಹೇಳಲಾಗಿದ್ದ ಮಹಿಳೆಯು ಹುಣಸೂರಿನ ಕರಿಗೌಡ ಬೀದಿಯಲ್ಲಿ ತನ್ನ ಸಂಬಂಧಿ ಪವಿತ್ರಾ ಹರೀಶ್ ಎಂಬುವರ ಮನೆಯಲ್ಲಿ ಇದ್ದರು. ಅಲ್ಲಿಂದಲೇ ಪೊಲೀಸರು ಆಕೆಯನ್ನು ಕರೆದೊಯ್ದಿದ್ದಾರೆ. ಇದೆಲ್ಲದರ ತನಿಖೆ ನಡೆಯಲಿ’ ಎಂದು ಆಗ್ರಹಿಸಿದರು.

‘ಅಪಹರಣಕ್ಕೆ ಒಳಗಾದ ಮಹಿಳೆಯನ್ನು ರಕ್ಷಣೆ ಮಾಡಿದ ಕೂಡಲೇ ಯಾಕೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿಲ್ಲ. ಆಕೆಯ ಮಗ ಬರುವವರೆಗೆ ಪೊಲೀಸರು ಯಾಕೆ ಕಾದಿದ್ದರು’ ಎಂದು ಪ್ರಶ್ನಿಸಿದರು.

ಎಸ್ಐಟಿಯ ಕೆಲವು ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಯಾಗಿ‌ ಕೆಲಸ ಮಾಡುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಜನತಾದಳ‌ದ ಮುಖಂಡರನ್ನು ಹತ್ತಿಕ್ಕುವ ಕೆಲಸವನ್ಮು ಸರ್ಕಾರ ಹಾಗೂ ಪೊಲೀಸ್‌ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT