ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಘೋಷಿಸಿ, ಪರಿಹಾರ ತ್ವರಿತಗೊಳಿಸಿ: ರೈತ ಸಂಘದ ಅಧ್ಯಕ್ಷ ನಾಗೇಂದ್ರ ಒತ್ತಾಯ

Published 27 ಆಗಸ್ಟ್ 2023, 19:28 IST
Last Updated 27 ಆಗಸ್ಟ್ 2023, 19:28 IST
ಅಕ್ಷರ ಗಾತ್ರ

ಮೈಸೂರು: ‘ಮಳೆ ಕೊರತೆ ಇರುವುದರಿಂದಾಗಿ ಬರಪೀಡಿತ ಪ್ರದೇಶಗಳ ಘೋಷಣೆಯನ್ನು ತ್ವರಿತವಾಗಿ ಮಾಡಿ ಪರಿಹಾರ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘130 ತಾಲ್ಲೂಕುಗಳಲ್ಲಿ ಬರದ ಛಾಯೆ ಇದೆ ಎಂದು ಸಚಿವರೇ ಹೇಳಿದ್ದಾರೆ. ಹೀಗಾಗಿ, ರೈತರಿಗೆ ನೆರವಾಗುವ ಕೆಲಸವನ್ನು ತ್ವರಿತವಾಗಿ ಆರಂಭಿಸಬೇಕು’ ಎಂದು ಆಗ್ರಹಿಸಿದರು.

‘ಅತಿವೃಷ್ಟಿ ಹಾಗೂ ಅನಾವೃಷ್ಟಿ ವಿಷಯದಲ್ಲಿ ಎನ್‌ಡಿಆರ್‌ಎಫ್‌ (ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ) ಮಾನದಂಡವನ್ನು ಬದಲಿಸಬೇಕು. ಭಿಕ್ಷೆಯ ರೂಪದಲ್ಲಿ ಪರಿಹಾರ ಕೊಡುವುದನ್ನು ನಿಲ್ಲಿಸಬೇಕು. ವೈಜ್ಞಾನಿಕವಾಗಿ ಪರಿಹಾರ ನೀಡಬೇಕು. ಒಮ್ಮೆ ಬರಗಾಲ ಉಂಟಾದರೆ ಅದರ ಪರಿಣಾಮ ಮುಂದಿನ ಮೂರು ವರ್ಷಗಳವರೆಗೂ ಇರುತ್ತದೆ. ಹೀಗಾಗಿ, ಪರಿಹಾರ ಕ್ರಮವು ಭವಿಷ್ಯವನ್ನು ರೂಪಿಸುವ ರೀತಿಯಲ್ಲಿ ಇರಬೇಕು’ ಎಂದರು.

200 ದಿನ ಕೆಲಸ ಕೊಡಿ: ‘ಮೈಸೂರು ಪ್ರದೇಶವೂ ಸೇರಿದಂತೆ ಎಲ್ಲೆಡೆ ಬರ ಎದುರಾಗಿದೆ. ಇನ್ಮುಂದೆ ಮಳೆ ಬಿದ್ದರೂ ಬೆಳೆ ಹಾಕಲಾಗುವುದಿಲ್ಲ. ಆದ್ದರಿಂದ ಬರ ಪರಿಸ್ಥಿತಿಯ ಘೋಷಣೆಯನ್ನು ಕೇಂದ್ರ ಸರ್ಕಾರ ಕೂಡಲೇ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷಕ್ಕೆ 100 ದಿನಗಳ ಬದಲಿಗೆ 200 ದಿನಗಳವರೆಗೆ ಕೆಲಸ ನೀಡಬೇಕು. ಫಸಲು ನಷ್ಟ ಅಂದಾಜು ಮಾಡಿ ವೈಜ್ಞಾನಿಕ ಪರಿಹಾರ ಕಲ್ಪಿಸಬೇಕು. ಹೈನುಗಾರಿಕೆಗೂ ನೆರವಾಗಬೇಕು. ಸಮಗ್ರವಾಗಿ ಜನರ ಜೀವನ ಕೇಂದ್ರಿತವಾಗಿ ಪರಿಹಾರ ಕಾರ್ಯಕ್ರಮ ರೂಪಿಸಬೇಕು’ ಎಂದು ಒತ್ತಾಯಿಸಿದರು.

‘ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ಜಾಸ್ತಿ ಇದೆ. ಪಂಪ್‌ಸೆಟ್‌ಗಳನ್ನೇ ನಂಬಿರುವ ತೋಟಗಾರಿಕೆ ಬೆಳೆ ನಷ್ಟವಾಗುವ ಸಾಧ್ಯತೆ ಇದೆ‌. ಆದ್ದರಿಂದ, ವಿದ್ಯುತ್ ವ್ಯತ್ಯಯ‌ ನಿಲ್ಲಿಸಿ ಕೃಷಿ ಚಟುವಟಿಕೆಗೆ ಉತ್ತೇಜನ ನೀಡಬೇಕು. ಇದೆಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮೈಸೂರಿನಲ್ಲಿ ಆ.28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

‘ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಹಾಗೂ ಟನ್‌ ಕಬ್ಬಿಗೆ ಹೆಚ್ಚುವರಿಯಾಗಿ ಘೋಷಿಸಿದ್ದ ₹ 150 ಬಾಕಿ ಕೊಡಿಸುವಂತೆ ಆಗ್ರಹಿಸಿ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯದಲ್ಲಿ ಹೋರಾಟ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು ಆ.30ರಂದು ಸಭೆ ಕರೆದಿತ್ತು. ಆದರೆ ಅಂದು ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ನೀಡುವ  ಕಾರ್ಯಕ್ರಮದ ಕಾರಣದಿಂದ ಸಭೆ ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ’ ಎಂದು ಹೇಳಿದರು.

ಪ್ರತಿ ವರ್ಷ ಸಭೆ ನಡೆಸಿ: ‘ಪ್ರತಿ ವರ್ಷ, ಸಕ್ಕರೆ ಕಾರ್ಖಾನೆಗಳ ಪ್ರಾರಂಭಕ್ಕೆ ಮುನ್ನವೇ ರೈತ ಮುಖಂಡರ ಸಭೆ ಕರೆಯಬೇಕು. ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಕಾರ್ಖಾನೆಗಳನ್ನು ನಿಯಂತ್ರಿಸಬೇಕು. ಕಬ್ಬು ನಿಯಂತ್ರಣ ಕಾಯ್ದೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಬೇಕು’ ಎಂದು ಒತ್ತಾಯಿಸಿದರು.

‘ಋಣ ಮುಕ್ತ ಕಾಯ್ದೆಯನ್ನು ಜಾರಿಗೊಳಿಸಿ ರೈತರಿಗೆ ನೆಮ್ಮದಿ ನೀಡಬೇಕು. ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಕರೆಯುವಂತೆ ಮುಖ್ಯಮಂತ್ರಿಯನ್ನು ಕೋರಿದ್ದೇವೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.

‘ಕಾವೇರಿ ನದಿ‌ ನೀರು ಹಂಚಿಕೆ ವಿಷಯದಲ್ಲಿ ಸ್ಪಷ್ಟವಾದ ಕಾನೂನು ರೂಪಿಸಬೇಕು. ರಾಜ್ಯದ ರೈತರ ಹಿತ ಕಾಯಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಹೊಸಕೋಟೆ ಬಸವರಾಜ್, ಪ್ರಸನ್ನ ಎನ್. ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT