ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲಿನ ಪ್ರಯಾಣ ದರ ಕಡಿಮೆ ಮಾಡಿ: ಭಾರತ ಕಮ್ಯುನಿಸ್ಟ್‌ ಪಕ್ಷದಿಂದ ಒತ್ತಾಯ

ಭಾರತ ಕಮ್ಯುನಿಸ್ಟ್‌ ಪಕ್ಷದಿಂದ ಒತ್ತಾಯ
Published 28 ಜೂನ್ 2023, 19:03 IST
Last Updated 28 ಜೂನ್ 2023, 19:03 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನಿಂದ ಸಂಚರಿಸುವ ಪ್ಯಾಸೆಂಜರ್‌ ರೈಲುಗಳಿಗೆ ವಿಶೇಷ ರೈಲಿನ ಹೆಸರಿನಲ್ಲಿ ದುಪ್ಪಟ್ಟು ಪ್ರಯಾಣ ದರ ವಿಧಿಸಿರುವುದನ್ನು ಖಂಡಿಸಿ ಭಾರತ ಕಮ್ಯುನಿಸ್ಟ್‌ ಪಕ್ಷದ ಕಾರ್ಯಕರ್ತರು ರೈಲು ನಿಲ್ದಾಣದ ಬಳಿ ಬುಧವಾರ ಪ್ರತಿಭಟಿಸಿದರು.

ಮುಖಂಡ ಎಚ್‌.ಆರ್‌.ಶೇಷಾದ್ರಿ ಮಾತನಾಡಿ, ‘ಕೋವಿಡ್‌ ವೇಳೆ ಸ್ಥಗಿತಗೊಳಿಸಿದ್ದ ರೈಲುಗಳನ್ನು ಲಾಕ್‌ಡೌನ್ ತೆರವಾದ ಬಳಿಕ ವಿಶೇಷ ರೈಲುಗಳ ಹೆಸರಿನಲ್ಲಿ ಮರು ಪ್ರಾರಂಭಿಸಿದ್ದಾರೆ. ಮೈಸೂರು ವಿಭಾಗದಿಂದ ಚಾಮರಾಜನಗರ, ಅರಸೀಕೆರೆ, ಬೆಂಗಳೂರಿಗೆ ಹೊರಡುವ ರೈಲುಗಳೂ ಈ ಪಟ್ಟಿಯಲ್ಲಿದ್ದು, ಪ್ರಯಾಣಿಕರು ದುಪ್ಪಟ್ಟು ಹಣ ನೀಡಿ ಪ್ರಯಾಣಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಹಿರಿಯ ನಾಗರಿಕರಿಗೆ, ಕಲಾವಿದರಿಗೆ ನೀಡಲಾಗುತ್ತಿದ್ದ ರಿಯಾಯಿತಿಯನ್ನೂ ರದ್ದುಪಡಿಸಲಾಗಿದೆ’ ಎಂದು ತಿಳಿಸಿದರು.

‘ಈ ರೈಲುಗಳಲ್ಲಿ ನಗರಕ್ಕೆ ದಿನಗೂಲಿಯ ಕೆಲಸಕ್ಕೆ ಬರುವ ಜನರು ಹೆಚ್ಚು ಸಂಚರಿಸುತ್ತಾರೆ. ದೊರೆಯುವ ಕೂಲಿಯ ಮೊತ್ತದ ಹೆಚ್ಚಿನ ಭಾಗವನ್ನು ಪ್ರಯಾಣಕ್ಕೆ ನೀಡಬೇಕಾಗಿದೆ. ಮಾಲ್ಗುಡಿ ಎಕ್ಸ್‌ಪ್ರೆಸ್‌ ಅನ್ನು ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ಎಂದು ಹೇಳಿ ಹೆಚ್ಚಿನ ಪ್ರಯಾಣ ದರ ಪಡೆಯುತ್ತಿದೆ’ ಎಂದು ದೂರಿದರು.

‘ಪ್ಯಾಸೆಂಜರ್‌ ರೈಲಿಗೆ ಕೋವಿಡ್‌ ಪೂರ್ವದ ದರವನ್ನೇ ನಿಗದಿಪಡಿಸಬೇಕು. ಎಕ್ಸ್‌ಪ್ರೆಸ್‌ ಪ್ರಯಾಣ ದರವನ್ನು ₹65ಕ್ಕೆ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು. ಪಕ್ಷದ ಕಾರ್ಯದರ್ಶಿ ಎಚ್‌.ಬಿ.ರಾಮಕೃಷ್ಣ, ಸಹ ಕಾರ್ಯದರ್ಶಿಗಳಾದ ಸೋಮರಾಜೇ ಅರಸ್‌, ಕೆ.ಎಸ್‌.ರೇವಣ್ಣ, ಡಿ.ಜಗನ್ನಾಥ್, ವೈ.ಮಹದೇವಮ್ಮ, ಡಿ.ಸುರೇಶ್, ಎಂ.ಶಿವಣ್ಣ, ರಾಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT