ಮೈಸೂರು: ‘ಸನಾತನ ಧರ್ಮ ಮತ್ತು ಹಿಂದೂ ಧರ್ಮ ಒಂದೇ ಆಗಿದ್ದು, ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವವರೇ ಮೊದಲು ನಿರ್ಮೂಲನೆಯಾಗಲಿದ್ದಾರೆ’ ಎಂದು ಬಿಜೆಪಿ ಮುಖಂಡ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ತಿಳಿಸಿದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ತಮಿಳುನಾಡು ಸರ್ಕಾರದ ಸಚಿವ ಉದಯನಿಧಿ ಸ್ಟಾಲಿನ್ ಅವರು ಡೆಂಗಿ, ಮಲೇರಿಯಾ ನಿರ್ಮೂಲನೆ ಮಾಡುವಂತೆ ಸನಾತನ ಧರ್ಮವನ್ನೂ ಮಾಡಬೇಕು ಎಂದಿರುವುದು ಅಪ್ರಬುದ್ಧ ಹೇಳಿಕೆ. ಸಂವಿಧಾನದ ತಿಳುವಳಿಕೆ ಇಲ್ಲದೇ, ಧರ್ಮಗಳನ್ನು ದೂಷಿಸುತ್ತಿರುವ ಅವರು ಅಧಿಕಾರದಿಂದ ಕೆಳಗಿಳಿಯಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸ್ಟಾಲಿನ್ ಅವರ ಮನೆಯಲ್ಲಿಯೂ ಸನಾತನ ಧರ್ಮದ ಆಚರಣೆ ನಡೆಯುತ್ತಿದ್ದು, ಅವರ ಅಜ್ಜ, ಅಜ್ಜಿಯೂ ಅದೇ ಧರ್ಮವನ್ನು ಅನುಸರಿಸಿದವರೇ. ಇದು ದೇಶದ ಶೇ 85ರಷ್ಟು ಜನರ ಧರ್ಮವಾಗಿದ್ದು, ಬ್ರಾಹ್ಮಣೇತರರೂ ಅದನ್ನು ಬಲಪಡಿಸುವ ಕೆಲಸ ಮಾಡಬೇಕು. ತಾರತಮ್ಯ ಎಲ್ಲ ಧರ್ಮದಲ್ಲಿಯೂ ಇದೆ. ಇಸ್ಲಾಂ, ಕ್ರಿಶ್ಚಿಯನ್, ಸಿಖ್ ಧರ್ಮದಲ್ಲಿಯೂ ಇದ್ದು, ಸನಾತನ ಧರ್ಮದಲ್ಲಷ್ಟೇ ಎತ್ತಿ ತೋರುವ ಅಗತ್ಯವಿಲ್ಲ. ಎಂದರು
ಲೋಕಸಭೆ; ಪಕ್ಷ ಸೂಚಿಸಿದರೆ ಸ್ಪರ್ಧೆಗೆ ಸಿದ್ಧ
ಮೈಸೂರು-ಕೊಡಗು ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ನಾನು ಯಾವುದೇ ಮನವಿಯನ್ನು ಪಕ್ಷಕ್ಕೆ ಮಾಡಿಲ್ಲ. ನಮ್ಮ ಹೈಕಮಾಂಡ್ ನಿರ್ಧರಿಸಿದರೆ ನಾನು ಯಾವ ಕೆಲಸವನ್ನು ನಿರ್ವಹಿಸಲು ಸಮರ್ಥನಿದ್ದೇನೆ. ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿದ್ದು, ಈವರೆಗೆ ಪಕ್ಷ ಸೂಚಿಸಿದ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ ಎಂದರು.
‘ವಿಪ್ರ ಸಮುದಾಯದಲ್ಲಿ ಅನುಕೂಲದಲ್ಲಿರುವ ಜನರಷ್ಟೇ ಸಂಕಷ್ಟದಲ್ಲಿರುವವರೂ ಇದ್ದಾರೆ. ರಾಜ್ಯ ಉಪಾಧ್ಯಕ್ಷನಾಗಿ ಈ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ಸಿಖ್, ಜೈನರಂತೆ ವಿಪ್ರರಲ್ಲಿಯೂ ಒಬ್ಬರೂ, ಮತ್ತೊಬ್ಬರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.