ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆಗೆ ವೈಜ್ಞಾನಿಕ ದರ: ಪರ, ವಿರೋಧವಾಗಿ ಧರಣಿ

ನಾನು ರೈತರಿಂದ ಹಣ ಪಡೆದಿಲ್ಲ: ರೇಷ್ಮೆ ಇಲಾಖೆ ಡಿಡಿ ಮಂಜುಳಾ
Published 19 ಏಪ್ರಿಲ್ 2024, 16:23 IST
Last Updated 19 ಏಪ್ರಿಲ್ 2024, 16:23 IST
ಅಕ್ಷರ ಗಾತ್ರ

ಮೈಸೂರು: ರೇಷ್ಮೆಗೂಡಿಗೆ ವೈಜ್ಞಾನಿಕ ದರ ನಿಗದಿಪಡಿಸುವ ವಿಚಾರವಾಗಿ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿರುವ ರೇಷ್ಮೆ ಮಾರುಕಟ್ಟೆ ಮುಂಭಾಗ ಜಮಾವಣೆಗೊಂಡ ರೈತ ಸಂಘದ ಎರಡು ಗುಂಪುಗಳು ಇಲಾಖೆ ಪರ ಹಾಗೂ ವಿರೋಧವಾಗಿ ಪ್ರತಿಭಟಿಸಿದವು.

ಸಾಮೂಹಿಕ ನಾಯಕತ್ವದ ಧರಣಿ: ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಯಿತು.

ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ‘ಸದರಿ ಮಾರುಕಟ್ಟೆಯಲ್ಲಿ ಎರಡನೇ ಅವಧಿಗೆ ರೈತರಿಗೆ ಮೊದಲ ಗ್ರೇಡ್‌ಗಿಂತಲೂ ಕಡಿಮೆ ಬೆಲೆ ನಿಗದಿ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ. ಇಂತಹ ಅವೈಜ್ಞಾನಿಕ ಪದ್ಧತಿಯನ್ನು ಕೈಬಿಟ್ಟು ನಿರ್ದಿಷ್ಟ ದರ ನಿಗದಿಗೆ ಅಧಿಕಾರಿಗಳು ಕ್ರಮವಹಿಸಬೇಕು. ಇನ್ನೂ ಅನೇಕ ಕಡೆಗಳಲ್ಲಿ ರೇಷ್ಮೆ ಮನೆಗಳ ಅನುದಾನ ಬಿಡುಗಡೆಯಾಗಿಲ್ಲ. ಬ್ಲೀಚಿಂಗ್ ಪೌಂಡರ್ ನೀಡಿಲ್ಲ’ ಎಂದು ದೂರಿದರು.

‘ಕಿರಿಯ ಮಟ್ಟದ ಅಧಿಕಾರಿಗಳು ರೈತರ ಹಣ ಬಿಡುಗಡೆಗೆ ಪರೋಕ್ಷವಾಗಿ ಲಂಚಕ್ಕೆ ಬೇಡಿಕೆಯಿಟ್ಟಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ರೇಷ್ಮೆ ಬೆಳೆಗಾರರಾದ ನಟರಾಜು ಚಾಮರಾಜನಗರ, ಬಸವನಪುರ ಸದಾನಂದ, ಚಿನಂಬಲ್ಲಿ ಮಹೇಶ್, ಬೀರಿಹುಂಡಿ ಮಹೇಶ್, ದೊಡ್ಡುಂಡಿ ಕೃಷ್ಣ, ರೈತ ಸಂಘದ ಮುಖಂಡರಾದ ರಾಮೇಗೌಡ, ಹೊನ್ನೂರು ಪ್ರಕಾಶ್, ಮಂಜು ಕಿರಣ್, ರಘು ಇಮ್ಮಾವು, ಸತೀಶ್ ರಾವ್, ವೆಂಕಟೇಶ್ ಗಳಿಗರಹುಂಡಿ, ಮಹೇಶ್ ಗುಂಡ್ಲುಪೇಟೆ, ಅಹಲ್ಯಾ ನಾಗರಾಜು, ನಟರಾಜು, ಕಳ್ಳಿಪುರ ಮಹದೇವಸ್ವಾಮಿ, ಅಲ್ಗಂಚಿ ದೊಡ್ಡಯ್ಯ, ಶೈಲಜಾ ಇದ್ದರು.

ಇದೇ ವೇಳೆ ಕೆಲ ರೈತ ಮುಖಂಡರು ಸಾಮೂಹಿಕ ನಾಯಕತ್ವದ ರೈತ ಮುಖಂಡರ ಪ್ರತಿಭಟನೆಯನ್ನು ಖಂಡಿಸಿದರು. ‘ನಾವು ಅಧಿಕಾರಿಗಳ ಪರವಾಗಿ ಅಲ್ಲ. ನ್ಯಾಯಯುತವಾಗಿ ಮಾರುಕಟ್ಟೆ ನಡೆಯುತ್ತಿದೆ. ಸಹಜವಾಗಿ ನಡೆಯಲು ಬಿಡಿ’ ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಎರಡೂ ಗುಂಪಿನ ಮನವಿ ಆಲಿಸಿದ ರೇಷ್ಮೆ ಇಲಾಖೆ ಡಿಡಿ ಮಂಜುಳಾ ಮಾತನಾಡಿ, ‘ನಾನು ರೈತರಿಂದ ಹಣ ಪಡೆದಿಲ್ಲ. ಪಡೆದಿರುವುದನ್ನು ಸಾಬೀತು ಮಾಡಿದರೆ ಹುದ್ದೆಗೆ ರಾಜೀನಾಮೆ ಕೊಡುತ್ತೇನೆ. ಎರಡನೇ ಹರಾಜಿನಲ್ಲಿ ಬೆಲೆ ಕಡಿಮೆ ಆಗುತ್ತಿರುವ ಬಗ್ಗೆ ಇಂದು ಗಮನಕ್ಕೆ ತಂದಿದ್ದು, ಅದನ್ನು ಸರಿಪಡಿಸುತ್ತೇವೆ. ‌ರೇಷ್ಮೆ ಮನೆಗಳ ಅನುದಾನಕ್ಕೆ ಎರಡು ತಿಂಗಳ ಹಿಂದೆಯೇ ಕೇಂದ್ರಕ್ಕೆ ದಾಖಲೆ ಸಲ್ಲಿಸಿದ್ದು, ಈ ಬಗ್ಗೆ ಮತ್ತಷ್ಟು ಒತ್ತಡ ತರುವ ಪ್ರಯತ್ನ ಮಾಡಲಾಗುವುದು’ ಎಂದು ತಿಳಿಸಿದರು.

ಜಂಟಿ ನಿರ್ದೇಶಕಿ ಪ್ರತಿಮಾ, ಮೈಸೂರು ಮಾರುಕಟ್ಟೆಯ ಎಡಿ ಸೋಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT