ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿ.ನರಸೀಪುರ: ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳ ಪರದಾಟ

ಶಾಲಾ ಸಮಯದಲ್ಲಿ ಹೆಚ್ಚುವರಿ ಸರ್ಕಾರಿ ಬಸ್ಸು ಓಡಾಟಕ್ಕೆ ಆಗ್ರಹ
Published 24 ಜೂನ್ 2023, 6:24 IST
Last Updated 24 ಜೂನ್ 2023, 6:24 IST
ಅಕ್ಷರ ಗಾತ್ರ

ತಿ.ನರಸೀಪುರ: ಶಕ್ತಿ ಯೋಜನೆ ಜಾರಿಯ ಬಳಿಕ ಕೆಎಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಉಚಿತ ಪ್ರಯಾಣಕ್ಕೆ ನೂಕುನುಗ್ಗಲು ಇರುವುದರಿಂದ ವಿದ್ಯಾರ್ಥಿಗಳಿಗೆ ಬಸ್ಸು ಹತ್ತಲಾಗದೆ, ಸರಿಯಾದ ಸಮಯಕ್ಕೆ ಶಾಲಾ, ಕಾಲೇಜುಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ.

ಬೆಳಿಗ್ಗೆ ಶಾಲೆಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಪಟ್ಟಣದ ಸರ್ಕಾರಿ ಬಸ್ಸು ನಿಲ್ದಾಣದಲ್ಲಿ ಕಾಣಸಿಗುತ್ತಿದೆ. ಪುಸ್ತಕದ ಹೊರೆಯ ಜೊತೆಗೆ ಪ್ರಯಾಣದ ಹೊರೆ ವಿದ್ಯಾರ್ಥಿಗಳಿಗೆ ಮತ್ತಷ್ಟು ಆಯಾಸ ತಂದೊಡ್ಡಿದೆ. ಈ ಹಿಂದೆ ಕೆಲಸಗಳಿಗೆ ತೆರಳುವ ಮಹಿಳೆಯರು ಖಾಸಗಿ ವಾಹನವನ್ನು ಆಶ್ರಯಿಸಿದ್ದರು. ಆದರೆ ಈಗ ಸರ್ಕಾರಿ ಬಸ್ಸಿನ ಕಡೆ ಮುಖ ಮಾಡಿದ್ದಾರೆ.

ಸರ್ಕಾರಿ ಬಸ್ಸುಗಳಲ್ಲಿ ತೆರಳುವ ಮಹಿಳೆಯರ ಸಂಖ್ಯೆ ಹೆಚ್ಚಾದಂತೆ ವಿದ್ಯಾರ್ಥಿಗಳು ಬಸ್ಸು ಹತ್ತಲು ಪ್ರಯಾಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪುರುಷರಿಗೆ ಶೇಕಡಾ 50ರಷ್ಟು ಸೀಟು ಮೀಸಲಿಡಬೇಕು ಎಂಬ ನಿಯಮವೂ ಪಾಲನೆಯಾಗುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

‘ನಿಲ್ದಾಣಕ್ಕೆ ಬಸ್ ಬರುತ್ತಿದ್ದಂತೆ ಮಹಿಳೆಯರೇ ಸೀಟ್‌ನಲ್ಲಿ ಕುಳಿತುಕೊಳ್ಳಲು ನುಗ್ಗುತ್ತಿದ್ದಾರೆ. ಪುರುಷರು ಹಾಗೂ ವಿದ್ಯಾರ್ಥಿಗಳು ಹತ್ತಲೂ ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ಮಕ್ಕಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಪ್ರತ್ಯೇಕ ಹಾಗೂ ಹೆಚ್ಚುವರಿ ಬಸ್ ನಿಯೋಜಿಸುವಂತೆ ನಿಗಮಕ್ಕೆ ಮನವಿ ಮಾಡಿದ್ದೇವೆ’ ಎಂದು ರಾಜ್ಯ ಜೆಡಿಎಸ್ ವಕ್ತಾರ ತಾಯೂರು ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾರಿಗೆ ಬಸ್‌ಗಳಲ್ಲಿ ವಿದ್ಯಾರ್ಥಿಗಳ ಬಸ್ ಪಾಸ್‌ಗೆ ಮನ್ನಣೆ ನೀಡುತ್ತಿಲ್ಲ. ಸಕಾಲದಲ್ಲಿ ಶಾಲಾ ಕಾಲೇಜು ತಲುಪಲು ಸಾಧ್ಯವಾಗುತ್ತಿಲ್ಲ. ಶಾಲಾ ಸಮಯಕ್ಕೆ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸಿ’ ಎಂದು ಕಾಲೇಜು ವಿದ್ಯಾರ್ಥಿ ಅರುಣ್ ತಿಳಿಸಿದರು.

ಸರ್ಕಾರಿ ಬಸ್ಸು ಹತ್ತಲು ಹರಸಾಹಸ ಶಕ್ತಿ ಯೋಜನೆ ಬಳಿಕ ಹೆಚ್ಚಿದ ಪ್ರಯಾಣಿಕರು ಖಾಸಾಗಿ ಬಸ್ಸುಗಳ ಓಡಾಟವು ಕಡಿತ

ಖಾಸಗಿ ಬಸ್ಸುಗಳ ಓಡಾಟದಲ್ಲಿ ಕುಸಿತ

ಹಿಂದೆ ಪಟ್ಟಣದಿಂದ ಕೊಳ್ಳೇಗಾಲ ಮೈಸೂರು ಚಾಮರಾಜ ನಗರ ಸತ್ತಿ ಕಲ್ಲಿಕೋಟೆ ಮಹದೇಶ್ವರ ಬೆಟ್ಟಕ್ಕೆ ಸುಮಾರು 200ರಷ್ಟುಖಾಸಗಿ ಬಸ್ಸು ಓಡಾಟ ನಡೆಸುತ್ತಿದ್ದವು. ಸರ್ಕಾರಿ ಬಸ್ಸುಗಳು ಬಂದ ಬಳಿಕ ಶೇಕಡಾ 50ರಷ್ಟು ಖಾಸಗಿ ಬಸ್ಸುಗಳು ಓಡಾಟ ನಿಲ್ಲಿಸಿದ್ದವು. ಶಕ್ತಿ ಯೋಜನೆಯ ಪರಿಣಾಮ ಜನರ ಓಡಾಟ ಕಡಿಮೆಯಾಗಿರುವುದರಿಂದ ಈ ಸಂಖ್ಯೆ ಮತ್ತಷ್ಟು ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT