ಮೈಸೂರು: ‘ಚಲನಚಿತ್ರ ಕ್ಷೇತ್ರವೆಂಬುದು ಬಹಳಷ್ಟು ಆಯ್ಕೆಗಳಿರುವ ಕ್ಷೇತ್ರ. ನಮ್ಮ ಪ್ರತಿಭೆಗೆ ಮತ್ತು ಪರಿಶ್ರಮಕ್ಕೆ ತಕ್ಕಂತೆ ಅವಕಾಶಗಳು ಸಿಗುತ್ತಾ ಹೋಗುತ್ತವೆ’ ಎಂದು ಖ್ಯಾತ ನಟ, ನಿರ್ಮಾಪಕ ಧನಂಜಯ ತಿಳಿಸಿದರು.
ಇಲ್ಲಿನ ಬೋಗಾದಿಯಲ್ಲಿರುವ ಅಮೃತ ವಿಶ್ವವಿದ್ಯಾಪೀಠಂನ ದೃಶ್ಯ ಸಂವಹನ ವಿಭಾಗದಿಂದ ಶನಿವಾರ ಆಯೋಜಿಸಿದ್ದ ‘ಸಿನಿರಮಾ-2023’ ರಾಷ್ಟ್ರೀಯ ಕಿರುಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ, ಕಿರುಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
‘ಚಿತ್ರರಂಗದಲ್ಲಿ ಆಸಕ್ತಿ ಇರುವ ಯಾರೇ ಆದರೂ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಂಥದ್ದೇ ಪಾತ್ರ ಬೇಕು ಎಂದು ಕಾಲ ಕಳೆದರೆ ಸಿಗಬಹುದಾದ ಸುವರ್ಣಾವಕಾಶಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ನಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬಹುದಾದ ಯಾವುದೇ ಸಂದರ್ಭ ಬಂದರೂ ಅದನ್ನು ಬಿಡಬಾರದು’ ಎಂದು ಸಲಹೆ ನೀಡಿದರು.
‘ಇಂದಿನ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಒಂದು ದೊಡ್ಡ ವರದಾನವಾಗಿದೆ. ಎಲ್ಲ ಆಯ್ಕೆಗಳು, ಸೌಲಭ್ಯಗಳು, ಸಾಧ್ಯತೆಗಳು ಮೊಬೈಲ್ ಪೋನ್‌ಗಳಲ್ಲಿವೆ. ಇಡೀ ಸಿನಿಮಾವನ್ನು ಮೊಬೈಲ್ ಫೋನ್‌ನಲ್ಲಿಯೇ ಚಿತ್ರೀಕರಿಸಬಹುದಾಗಿದೆ. ಇವು ಅತ್ಯಂತ ವಿಸ್ತಾರವಾದ ಹರವನ್ನು ಪರಿಚಯಿಸಿದ್ದು ದೊಡ್ಡ ದೊಡ್ಡ ಸಿನಿಮಾಗಳ ನಿರ್ಮಾಣಕ್ಕೆ ಇದು ಭದ್ರ ಬುನಾದಿಯಾಗಬಲ್ಲದು’ ಎಂದು ಹೇಳಿದರು.
ಮೈಸೂರಿನ ಡಿಆರ್‌ಸಿ ಸಿನೆಮಾಸ್ ಮಾಲೀಕರಾದ ವೈಶಾಲಿ ಹನುಮಂತ್ ಹಾಗೂ ಹನುಮಂತ್ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ತೀರ್ಪುಗಾರರಾಗಿ ಪಾಲ್ಗೊಂಡಿದ್ದ ನಟ ಹಾಗೂ ಲೆನ್ಸ್ ಬೇಸ್ಡ್ ಛಾಯಾಚಿತ್ರಗ್ರಾಹಕ ಪವನ್ ಕೆ.ಜೆ. ಅವರನ್ನು ಹಾಗೂ ಪ್ರಾಯೋಜಕರನ್ನು ಸನ್ಮಾನಿಸಲಾಯಿತು. ಮುಂಬೈನ ಫಿಲ್ಮ್ ಕಂಪ್ಯಾನಿಯನ್‌ನ ಸಿನಿಮಾ ಪತ್ರಕರ್ತ ಹಾಗೂ ವಿಮರ್ಶಕ ಸುಚಿನ್ ಮೆಹ್ರೋತ್ರಾ ಫಿಲ್ಮ ಕ್ರಿಟಿಸಿಸಂ ಕುರಿತ ಗೋಷ್ಠಿಯನ್ನು ನಡೆಸಿಕೊಟ್ಟರು.
ಅಮೃತ ಮೈಸೂರು ಕ್ಯಾಂಪಸ್‌ನ ಪ್ರಾಂಶುಪಾಲ ಡಾ.ಜಿ.ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಕ್ಯಾಂಪಸ್‌ನ ನಿರ್ದೇಶಕ ಅನಂತಾನಂದ ಚೈತನ್ಯ, ದೃಶ್ಯ ಸಂವಹನ ವಿಭಾಗದ ಮುಖ್ಯಸ್ಥೆ ಡಾ.ಮೌಲ್ಯ ಬಾಲಾಡಿ ಇದ್ದರು.
‘ಸಿನಿರಮಾ’ಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ದೇಶದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳು ಹಾಗೂ ಫಿಲ್ಮ್ ಮೇಕಿಂಗ್ ಸ್ಕೂಲ್‌ಗಳು ಭಾಗವಹಿಸಿದ್ದವು. 50ಕ್ಕೂ ಹೆಚ್ಚು ಸಿನಿಮಾಗಳು ಈ ಕಿರುಚಿತ್ರೋತ್ಸವದಲ್ಲಿ ನೋಂದಾಯಿಸಿದ್ದವು. ಟಾಪ್ ಏಳು ಕಿರುಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು.
ಪ್ರಶಸ್ತಿ ವಿಜೇತರು
* ಪ್ರಥಮ ಅತ್ಯುತ್ತಮ ಕಿರುಚಿತ್ರ - ಸಂಜಯ್ ಚಂದ್ರಶೇಖರನ್ - ಕ್ಯಾನ್‌ವಾಸ್ (ತಮಿಳು) - ₹ 10ಸಾವಿರ ನಗದು, ಟ್ರೋಫಿ ಹಾಗೂ ಪ್ರಮಾಣಪತ್ರ.
* ದ್ವಿತೀಯ ಅತ್ಯುತ್ತಮ ಕಿರುಚಿತ್ರ - ಪ್ರಣವ್ ಕೃಷ್ಣನ್ - ಅಕ್ರೋಸ್ (ಮಲಯಾಳಂ) - ₹ 7ಸಾವಿರ ನಗದು, ಟ್ರೋಫಿ ಹಾಗೂ ಪ್ರಮಾಣಪತ್ರ.
* ತೃತೀಯ ಕಿರುಚಿತ್ರ - ಸಂಪತ್ ಕುಮಾರ್ ರೈ - ಇಲಿಬೋನು (ಕನ್ನಡ) - ₹ 5ಸಾವಿರ ನಗದು, ಟ್ರೋಫಿ ಹಾಗೂ ಪ್ರಮಾಣಪತ್ರ.
ವಿಶೇಷ ವಿಭಾಗ ಪ್ರಶಸ್ತಿಗಳು: (ತಲಾ ₹4ಸಾವಿರ ನಗದು, ಟ್ರೋಫಿ ಹಾಗೂ ಪ್ರಮಾಣಪತ್ರ)
ಅತ್ಯುತ್ತಮ ಸಂಕಲನಕಾರ - ಶ್ರೀರಾಮ್ ರಾಮಸ್ವಾಮಿ - ಕ್ಯಾನ್‌ವಾಸ್ (ತಮಿಳು)
ಅತ್ಯುತ್ತಮ ನಿರ್ದೇಶಕ - ಸಂಜಯ್ ಚಂದ್ರಶೇಖರನ್ - ಕ್ಯಾನ್‌ವಾಸ್ (ತಮಿಳು)
ಅತ್ಯುತ್ತಮ ಛಾಯಾಗ್ರಾಹಕ - ಕಾರ್ತಿಕ್ ಸಿಪ್ಪಿ - ಕ್ಯಾನ್‌ವಾಸ್ (ತಮಿಳು)
ಅತ್ಯುತ್ತಮ ಉತ್ತಮ ನಟ - ಆದರ್ಶ್ ಕೃಷ್ಣದಾಸ್ - ಅಕ್ರೋಸ್ (ಮಲಯಾಳಂ)
ಉತ್ತಮ ನಟಿ - ಸ್ನೇಹ ರೆಜಿ - ಚೆರಿಲ್ (ಮಲಯಾಳಂ)
* ಪ್ರಥಮ ಅತ್ಯುತ್ತಮ ಮೊಬೈಲ್ ಫೋನ್ ಚಿತ್ರ - ಟು ಕೊಕನಟ್ - ರಿಥಿಕ್ ನಾಯರ್
* ದ್ವಿತೀಯ ಅತ್ಯುತ್ತಮ ಮೊಬೈಲ್ ಫೋನ್ ಚಿತ್ರ - ಹೀಲ್ ವಿಥಿನ್ - ಆದಿತ್ಯ ಯಲಿಗಾರ್
ಎಲ್ಲ ಪಾತ್ರಗಳೂ ಅಡಿಪಾಯ
ನಾನು ಈ ಹಂತವನ್ನು ತಲುಪಲು, ಸಿನಿಮಾದಲ್ಲಿ ನಿರ್ವಹಿಸಿದ ಎಲ್ಲ ಪಾತ್ರಗಳೂ ದೊಡ್ಡ ಅಡಿಪಾಯವನ್ನು ಹಾಕಿಕೊಟ್ಟಿವೆ.
–ಧನಂಜಯ, ನಟ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.