ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣಾ: ಸಿದ್ದರಾಮಯ್ಯ ಕಣಕ್ಕೆ, ಸಂಚಲನ

ಹಳೆ ಮೈಸೂರಿನ ಕಾರ್ಯಕರ್ತರಲ್ಲಿ ಹುರುಪು; ಮೈಸೂರು, ಚಾಮರಾಜನಗರದ ಎಲ್ಲ ಕ್ಷೇತ್ರ ಗೆಲ್ಲುವ ಶಕ್ತಿ
Last Updated 25 ಮಾರ್ಚ್ 2023, 15:48 IST
ಅಕ್ಷರ ಗಾತ್ರ

ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚಿತ್ರದುರ್ಗದಲ್ಲಿ ಹೇಳಿಕೆ ನೀಡುತ್ತಿದ್ದಂತೆ ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಸಂಚಲನ ಮೂಡಿದೆ.

2008ರ ಕ್ಷೇತ್ರ ವಿಭಜನೆ ನಂತರ ವರುಣಾದಿಂದಲೇ ಎರಡು ಬಾರಿ ಆಯ್ಕೆಯಾಗಿದ್ದ ಸಿದ್ಧರಾಮಯ್ಯ, 2013ರಲ್ಲಿ ಮುಖ್ಯಮಂತ್ರಿಯಾಗಿದ್ದರು. 2018ರ ಚುನಾವಣೆಯಲ್ಲಿ ಕ್ಷೇತ್ರವನ್ನು ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟು, ಚಾಮುಂಡೇಶ್ವರಿ ಹಾಗೂ ಬಾದಾಮಿ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಆದರೆ, ಬಾದಾಮಿ ಯಲ್ಲಷ್ಟೇ ಗೆಲುವಿನ ಸಿಹಿ ಸಿಕ್ಕಿತ್ತು.

ಇದೀಗ ಮತ್ತೆ ವರುಣಾ ಕ್ಷೇತ್ರದಿಂದ ಕಣಕ್ಕಿಯುತ್ತಿರುವುದಾಗಿ ಹೇಳಿರುವುದು ಕಾರ್ಯಕರ್ತರಲ್ಲಿ ಹುರುಪು ತಂದಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್‌.ಧ್ರುವನಾರಾಯಣ ನಿಧನದ ಬಳಿಕ ಜಿಲ್ಲೆಯ ಕಾಂಗ್ರೆಸ್‌ ಸಂಘಟನೆಯಲ್ಲಿ ನಿರ್ವಾತ ಸೃಷ್ಟಿಯಾಗಿದ್ದು, ಕಾರ್ಯ ಕರ್ತರು ದುಃಖದ ಮಡುವಿನಲ್ಲಿದ್ದಾರೆ. ಮೈಸೂರು ಹಾಗೂ ಚಾಮರಾಜನಗರ ಪಕ್ಷ ಸಂಘಟನೆ ಉಸ್ತುವಾರಿ ಆರ್‌.ಧ್ರುವನಾರಾಯಣ ಅವರ ಹೆಗಲ ಮೇಲಿತ್ತು. ಸಿದ್ದರಾಮಯ್ಯ ವರುಣಾದಲ್ಲಿ ಸ್ಪರ್ಧಿಸಿದರೆ ಅದರ ಪ್ರಭಾವ ಮೈಸೂರು ಹಾಗೂ ಚಾಮರಾಜನಗರದ 15 ಕ್ಷೇತ್ರಗಳ ಮೇಲೂ ಬೀರಲಿದೆ.

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಎರಡೂ ಜಿಲ್ಲೆಗಳಲ್ಲಿ 12 ಕ್ಷೇತ್ರದಲ್ಲಿ ಜಯಗಳಿಸಿದ್ದರೆ, ಜೆಡಿಎಸ್‌ ಚಾಮುಂಡೇಶ್ವರಿ, ಎಚ್‌.ಡಿ.ಕೋಟೆ, ಕೆ.ಆರ್‌.ನಗರದಲ್ಲಿ ಜಯಗಳಿಸಿತ್ತು. ಬಿಜೆಪಿ ಎರಡೂ ಜಿಲ್ಲೆಗಳಲ್ಲಿ ಖಾತೆ ತೆರೆದಿರಲಿಲ್ಲ. 2006ರ ಉಪ ಚುನಾವಣೆ ನಂತರ 2018 ವಿಧಾನಸಭೆ ಚುನಾವಣೆ ಯಲ್ಲಿ ಚಾಮುಂಡೇಶ್ವರಿ ಮೂಲಕ ಸಿದ್ದರಾಮಯ್ಯ ಮತ್ತೆ ಕಣಕ್ಕಿಳಿದಿದ್ದರು. ಅವರ ವಿರುದ್ಧ ಜೆಡಿಎಸ್‌ನ ಜಿ.ಟಿ.ದೇವೇಗೌಡ 36,042 ಮತಗಳ ಜಯ ದಾಖಲಿಸಿದ್ದರು.

ಕಳೆದ ಚುನಾವಣೆಯಲ್ಲಿ ಎರಡೂ ಜಿಲ್ಲೆಗಳಲ್ಲಿ ಎಚ್‌.ಡಿ.ಕೋಟೆ, ವರುಣಾ, ನರಸಿಂಹರಾಜ, ಚಾಮರಾಜನಗರ, ಹನೂರಿನಲ್ಲಿ ಮಾತ್ರ ಕಾಂಗ್ರೆಸ್‌ ಗೆದ್ದಿತ್ತು. ಬಿಜೆಪಿ 4 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ, ಜೆಡಿಎಸ್‌ 5ರಲ್ಲಿ, ಬಿಎಸ್‌‍ಪಿ ಕೊಳ್ಳೇಗಾಲ ದಲ್ಲಿ ಜಯಭೇರಿ ಬಾರಿಸಿತ್ತು.

ಒಬ್ಬರೇ ಅರ್ಜಿ: ವರುಣಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ಗಾಗಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಅರ್ಜಿ ಸಲ್ಲಿಸಿದ್ದರೂ ಕ್ಷೇತ್ರದ ಹೆಸರು ನಮೂದಿಸಿರಲಿಲ್ಲ.

ಹಳೆ ಮೈಸೂರು ಭಾಗದ ಶಕ್ತಿ: ‘ಸಿದ್ದರಾಮಯ್ಯ ಅವರನ್ನು ರಾಜ್ಯದ 25 ಕ್ಷೇತ್ರಗಳ ಮುಖಂಡರು ಆಹ್ವಾನಿಸಿ ದ್ದಾರೆ. ಎಲ್ಲೇ ನಿಂತರೂ ಗೆಲ್ಲುವ ಜನನಾಯಕ ಅವರು. ವರುಣಾದಲ್ಲಿ ನಿಂತರೆ ರಾಜ್ಯದ 223 ಕ್ಷೇತ್ರಗಳಿಗೂ ಪ್ರವಾಸ ಮಾಡಬಹುದು. ಕಾಂಗ್ರೆಸ್‌ ಮುಖಂಡರು ಸಂಘಟನೆಯಲ್ಲಿ ತೊಡಗಿಸಿಕೊಂಡು ಗೆಲ್ಲಿಸುತ್ತೇವೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹತ್ವದ ನಿರ್ಧಾರಗಳಿಗೆ ಧ್ರುವನಾರಾಯಣ ಅವರ ಬಳಿ ಕೇಳುತ್ತಿದ್ದೆವು. ನಿಧನದಿಂದ ಕಾರ್ಯಕರ್ತರು ಚೇತರಿಸಿಕೊಂಡಿಲ್ಲ. ಇನ್ನು ಸಿದ್ದರಾಮಯ್ಯ ಅವರೇ ಎಲ್ಲ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಮೈಸೂರು, ಚಾಮರಾಜನಗರದ 15 ಕ್ಷೇತ್ರಗಳ ಪೈಕಿ 14ರಲ್ಲಿ ಕಾಂಗ್ರೆಸ್‌ ಜಯ ಗಳಿಸುವುದಾಗಿ ಆಂತರಿಕ ಸಮೀಕ್ಷೆಯೂ ಹೇಳಿದೆ’ ಎಂದರು.

ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳೂ ಸಿದ್ದರಾಮಯ್ಯ ವಿರುದ್ಧ ಗೆಲ್ಲುವ ಅಭ್ಯರ್ಥಿಯ ಹುಡುಕಾಟದಲ್ಲಿವೆ. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರ ಅವರಿಗೆ ಕ್ಷೇತ್ರದ ಮೇಲೆ ಹಿಡಿತವಿದ್ದು, ಶರತ್‌ ಪುಟ್ಟಬುದ್ಧಿ, ಕಾ.ಪು.ಸಿದ್ದಲಿಂಗಸ್ವಾಮಿ ಸೇರಿದಂತೆ ಟಿಕೆಟ್‌ ಆಕಾಂಕ್ಷಿಗಳ ದಂಡೇ ಇದೆ.

‘ವರುಣಾದಲ್ಲೇ ಸ್ಪರ್ಧಿಸುವಂತೆ ಸೂಚನೆ’: ‘ವರುಣಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೈಕಮಾಂಡ್‌ ಸೂಚನೆಯಿದೆ. ಕೋಲಾರದಿಂದ ಸ್ಪರ್ಧೆಗೆ ಜನರ ಒತ್ತಾಯವೂ ಇದೆ. ಹೀಗಾಗಿ ಎರಡೂ ಕ್ಷೇತ್ರಗಳಿಂದಲೂ ಸಿದ್ದರಾಮಯ್ಯ ಅವರು ಸ್ಪರ್ಧಿಸಬಹುದು’ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

‘ಯಾವುದೇ ಕ್ಷೇತ್ರದಲ್ಲಿ ನಿಂತರೂ ಸೋಲಿಸಲು ಎದುರಾಳಿ ಪಕ್ಷಗಳು ಒಂದಾಗುತ್ತವೆ. ಹಣದ ಹೊಳೆಯನ್ನೇ ಹರಿಸುತ್ತವೆ. ನಾವು ಹೆದರುವುದಿಲ್ಲ. ಸಾಮಾಜಿಕ ನ್ಯಾಯದ ಪರ ಕೆಲಸ ಮಾಡುವ ಅವರನ್ನು ಸಹಿಸಲು ಬಲಪಂಥೀಯರಿಗೆ ಆಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT