ಮೈಸೂರು: ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಟ್ಟು, ತನಿಖೆಯು ಮುಕ್ತವಾಗಿ ನಡೆಯಲು ಸಹಕರಿಸಬೇಕು’ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರಘು ಆರ್. ಕೌಟಿಲ್ಯ ಒತ್ತಾಯಿಸಿದ್ದಾರೆ.
‘ಮುಡಾ ಹಗರಣದಲ್ಲಿ ಮುಖ್ಯಮಂತ್ರಿಯ ಸ್ವಜನ ಪಕ್ಷಪಾತ, ಅಕ್ರಮಗಳಿಗೆ ದೊರೆತಿರುವ ಸಾಕ್ಷಿ–ಪುರಾವೆಗಳ ಆಧಾರದ ಮೇಲೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದನ್ನು ಸ್ವಾಗತಿಸುತ್ತೇನೆ’ ಎಂದು ಹೇಳಿದ್ದಾರೆ.
‘ವಿರೋಧ ಪಕ್ಷಗಳು ಹಾಗೂ ಸಮಾಜಮುಖಿ ಸಂಘಟನೆಗಳು ಸಾಕ್ಷಿ–ಆಧಾರಗಳನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿದ್ದವು. ಈ ಬಗ್ಗೆ ನೈತಿಕತೆ ಮೆರೆಯದೆ ಅಧಿಕಾರಕ್ಕೆ ಅಂಟಿಕೊಂಡು ಹಿಂದುಳಿದ ವರ್ಗದವರ ಹೆಸರಿನಲ್ಲಿ ರಕ್ಷಣೆ ಪಡೆಯಲು ಸಮಾವೇಶ ಸಂಘಟಿಸಿದ್ದ ಸಿದ್ದರಾಮಯ್ಯ ರಾಜ್ಯ ಕಂಡ ಭ್ರಷ್ಟ ಮುಖ್ಯಮಂತ್ರಿ ಎನ್ನುವುದು ಇಷ್ಟರಲ್ಲೇ ಸಾಬೀತಾಗಲಿದೆ’ ಎಂದಿದ್ದಾರೆ.
‘ಅತಿ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವನ್ನು ಎಸಗಿದ ಮುಖ್ಯಮಂತ್ರಿ ಇದ್ದರೆ ಅವರು ಸಿದ್ದರಾಮಯ್ಯ ಮಾತ್ರ. ಹಿಂದುಳಿದ ವರ್ಗದವರ ಹೆಸರನ್ನು ಹೇಳುವ ಯಾವ ನೈತಿಕತೆಯನ್ನೂ ಅವರು ಉಳಿಸಿಕೊಂಡಿಲ್ಲ. ಭ್ರಷ್ಟತನಕ್ಕೆ ಹಿಂದುಳಿದ ವರ್ಗದವರು ಹಾಗೂ ಶೋಷಿತ ಸಮುದಾಯಗಳ ಹೆಸರು ಬಳಸಿಕೊಳ್ಳುವ ಪ್ರವೃತ್ತಿಯನ್ನು ಕಾಂಗ್ರೆಸ್‌ನವರು ಕೈಬಿಡಬೇಕು. ಕ್ಲಾಸಿಕ್ ಕಂಪ್ಯೂಟರ್ ಹಗರಣದಲ್ಲಿ ಬಂಗಾರಪ್ಪ ಅವರಿಂದ ರಾಜೀನಾಮೆ ಕೊಡಿಸುವಾಗ ಹಿಂದುಳಿದ ವರ್ಗಗಳ ಬಗ್ಗೆ ಕಾಂಗ್ರೆಸ್‌ನವರ ಕಾಳಜಿ ಎಲ್ಲಿ ಹೋಗಿತ್ತು’ ಎಂದು ಪ್ರಶ್ನಿಸಿದ್ದಾರೆ.
‘ಕರ್ನಾಟಕದ ರಾಜಕಾರಣಕ್ಕೆ ಭವ್ಯ ಪರಂಪರೆ ಹಾಗೂ ಆದರ್ಶಪೂರ್ಣ ಘನತೆ ಇದೆ. ಅದಕ್ಕೆ ಮಸಿ ಬಳಿಯುವ ಹೆಜ್ಜೆಯನ್ನು ಸಿದ್ದರಾಮಯ್ಯ ಇಡಬಾರದು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.