ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಕಾಡು: ಚರ್ಚೆಗೆ ಗ್ರಾಸವಾದ ಸೇತುವೆ ನಿರ್ಮಾಣ

ಅರಣ್ಯ ಇಲಾಖೆ ಅನುಮತಿ ಇಲ್ಲದೇ ಕಾಮಗಾರಿ ಆರಂಭ– ಆರೋಪ
ಅಕ್ಷರ ಗಾತ್ರ

ತಲಕಾಡು: ತಲಕಾಡು ಮತ್ತು ಮಾಲಂಗಿ ನಡುವಿನ ಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ನಿರಪೇಕ್ಷಣಾ ಪತ್ರ ನೀಡದೇ ಇದ್ದರೂ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.

ಸದ್ಯ, ಕಾವೇರಿ ನದಿಯ ಮಾಲಂಗಿ ಭಾಗದ ತಟದಲ್ಲಿ ಕಾಮಗಾರಿ ಬಿರುಸು ಪಡೆದಿದೆ. ಅರ್ಧದಷ್ಟು ಕಾಮಗಾರಿ ಮುಗಿಸಿ ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿ ನಿರಪೇಕ್ಷಣಾ ಪತ್ರ ಪಡೆಯುವ ತಂತ್ರಗಾರಿಕೆ ಇದರ ಹಿಂದಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ಉಮೇಶ್‌, ಇದುವರೆಗೂ ಸೇತುವೆ ನಿರ್ಮಾಣಕ್ಕೆ ನಿರಪೇಕ್ಷಣಾ ಪ‍ತ್ರ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಕೆಆರ್‌ಡಿಎಲ್‌’ ವತಿಯಿಂದ ₹ 51 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ನಿರ್ಮಾಣದಿಂದ ಅರಣ್ಯ ಇಲಾಖೆಗೆ ಸೇರಿದ ಭಾಗದಲ್ಲಿ 5ರಿಂದ 6 ಮರಗಳನ್ನು ಕಡಿಯಬೇಕಾಗುತ್ತದೆ. ಜತೆಗೆ, ಸೇತುವೆಯ ಒಂದಿಷ್ಟು ಭಾಗ ಅರಣ್ಯ ಪ್ರದೇಶದಲ್ಲೇ ಹಾದು ಹೋಗುವುದರಿಂದ ನಿರಪೇಕ್ಷಣದ ಅಗತ್ಯ ಇದೆ ಎಂದು ಮೂಲಗಳು ತಿಳಿಸಿವೆ.

ಮಾಲಂಗಿ ಗ್ರಾಮದ ನದಿ ತಟವು ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ‘ಕೆಆರ್‌ಡಿಎಲ್‌’ ಆ ಭಾಗದಿಂದ ಕಾಮಗಾರಿ ಆರಂಭಿಸಿದೆ.

ಮಾಲಂಗಿಗೆ ವರ, ತಲಕಾಡಿಗೆ ಶಾಪ?
ಸೇತುವೆ ನಿರ್ಮಾಣವು ಅಕ್ಷರಶಃ ಮಾಲಂಗಿ ಹಾಗೂ ಇದರ ಸುತ್ತಮುತ್ತಲಿನ 5 ಗ್ರಾಮಗಳಿಗೆ ವರವಾಗುತ್ತದೆ. ಇಲ್ಲಿಂದ ಜನರು ಹೋಬಳಿ ಕೇಂದ್ರವಾದ ಮೈಸೂರಿಗೆ ಬರಬೇಕಿದ್ದರೆ ಬಳಸು ಮಾರ್ಗದಲ್ಲಿ 18 ಕಿ.ಮೀ ಕ್ರಮಿಸಿ ಬರಬೇಕಿತ್ತು. ಇಲ್ಲವೇ ಒಂದು ಕಿ.ಮೀ ದೂರ ಕಾವೇರಿ ನದಿಯಲ್ಲಿ ತೆಪ್ಪದಲ್ಲಿ ಸಾಗಬೇಕಿತ್ತು. ಈ ತಾಪತ್ರಯದಿಂದ ಸೇತುವೆ ಮುಕ್ತಿ ನೀಡಲಿದೆ.

ಸೇತುವೆ ನಿರ್ಮಾಣವು ಕಾವೇರಿ ನದಿ ಸೊಬಗನ್ನು ಕಳೆಗುಂದಿಸಲಿದೆ ಎಂಬ ಆರೋಪವೂ ಕೇಳಿ ಬಂದಿದೆ. ಇದರಿಂದ ತಲಕಾಡಿನ ಕಾವೇರಿ ನದಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ.

ಸೇತುವೆ ನಿರ್ಮಾಣಕ್ಕೆಂದು ನದಿಯಲ್ಲಿ ತೆಗೆಯುವ ಗುಂಡಿಗಳು ಅಪಾಯಕಾರಿಯಾಗಿ ಪರಿಣಮಿಸಬಹುದು. ಸದ್ಯ, ಪ್ರವಾಸಿಗರು ಯಾವುದೇ ಭಯವಿಲ್ಲದೇ ನೀರಿನಲ್ಲಿ ನಡೆದಾಡುತ್ತಿದ್ದಾರೆ. ಸೇತುವೆ ನಿರ್ಮಾಣದಿಂದ ಉಂಟಾಗುವ ಗುಂಡಿಗಳು ಪ್ರವಾಸಿಗಳ ಜೀವಕ್ಕ ಎರವಾಗಬಹುದು ಎಂಬ ಭೀತಿ ಮೂಡಿದೆ.

*
ಜೀವನ ನಿರ್ವಹಣೆಗೆ ದೋಣಿಯನ್ನೇ ಅವಲಂಬಿಸಿರುವ ನಮಗೆ ಇದರಿಂದ ದಿಕ್ಕು ತೋಚದಾಗಿದೆ. ಸೇತುವೆ ನಿರ್ಮಾಣವಾದ ಬಳಿಕ ನಮ್ಮ ದೋಣಿಗೆ ಯಾರು ಬರುತ್ತಾರೆ?
-ಬಂಗಾರು, ದೋಣಿ ನಡೆಸುವವರು

*
ಸೇತುವೆ ಕಾಮಗಾರಿ ಪ್ರಸ್ತಾವದ ಹಂತದಲ್ಲಿದ್ದಾಗ ಸಮಸ್ಯೆ ಉಂಟಾಗಿರಲಿಲ್ಲ. ಈಗ ಸಮಸ್ಯೆಗಳು ಕಾಣಿಸತೊಡಗಿವೆ. ಅಧಿಕಾರಿಗಳು ಇವುಗಳನ್ನು ಪರಿಹಾರ ಮಾಡಬೇಕು.
-ಶಿವಣ್ಣ, ಚುರುಮುರಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT