ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಜಿಲ್ಲೆಯಾದ್ಯಂತ ಸಂಭ್ರಮದ ತುಳಸಿ ಪೂಜೆ

ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಉಚಿತವಾಗಿ ಸಸಿ ವಿತರಣೆ
Last Updated 5 ನವೆಂಬರ್ 2022, 14:49 IST
ಅಕ್ಷರ ಗಾತ್ರ

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಹಿಳೆಯರು ತುಳಸಿ ವಿವಾಹ ಹಾಗೂ ಪೂಜಾ ಕಾರ್ಯಕ್ರಮವನ್ನು ಸಡಗರ–ಸಂಭ್ರಮ ಮತ್ತು ಭಕ್ತಿ ಭಾವದಿಂದ ಶನಿವಾರ ಆಚರಿಸಿದರು.

ತುಳಸಿ ಕಟ್ಟೆಯನ್ನು ಹೂವು, ಹುಣಸೆಕಾಯಿ, ಬಾಳೆ ದಿಂಡು, ಮಾವು, ಕಬ್ಬು, ಹಸಿರುಬಳೆ, ಕಂಕಣ, ಹಸಿರು ವಸ್ತ್ರದಿಂದ ಅಲಂಕರಿಸಿದ್ದರು. ಕಟ್ಟೆಯ ಮುಂದೆ ಆಕರ್ಷಕವಾಗಿ ರಂಗೋಲಿ ಬಿಡಿಸಿ, ತುಳಸಿ ವಿವಾಹ ನೆರವೇರಿಸಿದರು. ವಿಶೇಷ ಪೂಜೆ ಸಲ್ಲಿಸಿ ಇರ್ಷಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು. ಸಿಹಿ ತಿಂಡಿಗಳನ್ನು ಒಳಗೊಂಡ ಆಹಾರ ಪದಾರ್ಥವನ್ನು ನೈವೇದ್ಯವಾಗಿ ಅರ್ಪಿಸಿದರು. ನೆರೆ–ಹೊರೆಯ ಮುತ್ತೈದೆಯರನ್ನು ಆಹ್ವಾನಿಸಿ ಅರಿಸಿನ–ಕುಂಕುಮ ನೀಡಿ ಸಂಭ್ರಮ ಹಂಚಿಕೊಂಡರು.

ತುಳಸಿಕಟ್ಟೆಯನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಿದ್ದೂ ಕಂಡುಬಂತು.

‘ತುಳಸಿ ಪವಿತ್ರವಾದ ಗಿಡ’
ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ದೇವಸ್ಥಾನ ಆವರಣದಲ್ಲಿ ತುಳಸಿ ಪೂಜೆ (ವಿವಾಹ) ಕಾರ್ಯಕ್ರಮ ಶನಿವಾರ ಸಂಭ್ರಮದಿಂದ ಜರುಗಿತು.

ತುಳಸಿ ಕಟ್ಟೆಯನ್ನು ಶುಚಿಗೊಳಿಸಿ ಬಣ್ಣ ಹಚ್ಚಲಾಗಿತ್ತು. ಕಬ್ಬು, ಮಾವು, ತಳಿರು-ತೋರಣ ಹಾಗೂ ಹೂಗಳಿಂದ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ಬಳಿಕ ಸಾರ್ವಜನಿಕರಿಗೆ ತುಳಸಿ ಗಿಡವನ್ನು ವಿತರಿಸಿ ಅದರ ಮಹತ್ವಗಳನ್ನು ತಿಳಿಸಲಾಯಿತು.

ಮೈಸೂರು ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷ ಎಸ್.ಕೃಷ್ಣಮೂರ್ತಿ ಮಾತನಾಡಿ, ‘ಹಿಂದೂಗಳಿಗೆ ತುಳಸಿ ಗಿಡ ಎಂದರೆ ಅತ್ಯಂತ ಪವಿತ್ರವಾದುದಾಗಿದೆ. ಅದಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಶ್ರೀಕೃಷ್ಣನ ಕಾಲದಿಂದಲೂ ತುಳಸಿಗೆ ಎಲ್ಲಾ ಗಿಡಕ್ಕಿಂತ ಶ್ರೇಷ್ಠವಾದ ಸ್ಥಾನವನ್ನು ನೀಡಲಾಗಿದೆ’ ಎಂದು ತಿಳಿಸಿದರು.

‘ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶ ಪ್ರತಿಯೊಂದರಲ್ಲೂ ವಿಭಿನ್ನತೆಯನ್ನು ಹೊಂದಿದೆ. ನಮ್ಮ ಸಂಸ್ಕೃತಿ–ಸಂಪ್ರದಾಯ ಶ್ರೀಮಂತವಾಗಿದ್ದು, ನಾವು ಆಚರಿಸುವ ಪ್ರತಿಯೊಂದು ಹಬ್ಬ ಹರಿದಿನವೂವಿಭಿನ್ನತೆಯೊಂದಿಗೆ ವಿಶೇಷತೆಯನ್ನು ಹೊಂದಿದೆ. ತುಳಸಿ ಮದುವೆಯನ್ನು ಪ್ರತಿ ವರ್ಷ ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನದಂದು ನೆರವೇರಿಸಲಾಗುತ್ತದೆ’ ಎಂದು ಹೇಳಿದರು.

ನಂತರ ಮಾತನಾಡಿದ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ‘ತುಳಸಿ ಗಿಡವು ಹಿಂದೂಗಳ ಜೀವನದ ಅವಿಭಾಜ್ಯ ಅಂಗವಾಗಿದೆ. ಇದನ್ನು ಮನೆಯಲ್ಲಿ ಬೆಳೆಸಿ–ಬಳಸಿದರೆ ಕಾಯಿಲೆಗಳು ಬರುವುದಿಲ್ಲ. ಅಲ್ಲದೇ, ಆಮ್ಲಜನಕವನ್ನೂ ಒದಗಿಸುತ್ತದೆ’ ಎಂದರು.

250ಕ್ಕೂ ಹೆಚ್ಚು ಭಕ್ತರಿಗೆ ಉಚಿತವಾಗಿ ತುಳಸಿ ಗಿಡಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT