ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿ.ನರಸೀಪುರ: ಸೌಲಭ್ಯ ವಂಚಿತ ಬಂಗಾರಪ್ಪ ಬಡಾವಣೆ

3 ದಶಕಗಳ ಹಿಂದೆ ಬಡಜನರಿಗೆ ಆಶ್ರಯ ಯೋಜನೆಯಡಿ ನಿವೇಶನ ವಿತರಣೆ
Last Updated 7 ಫೆಬ್ರುವರಿ 2022, 4:41 IST
ಅಕ್ಷರ ಗಾತ್ರ

ತಿ.ನರಸೀಪುರ: ಮೂರು ದಶಕಗಳ ಹಿಂದೆ ಬಡಜನರಿಗಾಗಿ ಆಶ್ರಯ ಯೋಜನೆಯಡಿ ಮೀಸಲಿಟ್ಟ ‘ಬಂಗಾರಪ್ಪ ಬಡಾವಣೆ’ಗೆ ಅಗತ್ಯ ಮೂಲಸೌಕರ್ಯ ಇಲ್ಲದೇ ನಿವೇಶನದಾರರು ಪರದಾಡು ವಂತಾಗಿದೆ.

ಎಸ್.ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಪಟ್ಟಣದ ಅನೇಕ ಬಡಜನರು ವಸತಿ ಯೋಜನೆಯಡಿ ನಿವೇಶನಗಳನ್ನು ನೀಡುವಂತೆ ಮನವಿ ಮಾಡಿ ಒತ್ತಾಯಸಿದ್ದ ಹಿನ್ನೆಲೆಯಲ್ಲಿ ಹಾಲಿ ವರುಣಾ ವಿಧಾನಸಭಾ ಕ್ಷೇತ್ರದ ಹೆಳವರಹುಂಡಿ – ಈಶ್ವರಗೌಡನಹಳ್ಳಿ ಮಧ್ಯದಲ್ಲಿರುವ ಸರ್ವೆ ನಂ 462ರಲ್ಲಿ ಮೊದಲ ಹಂತದಲ್ಲಿ 221 ಹಾಗೂ ಎರಡನೇ ಹಂತದಲ್ಲಿ 66 ಮಂದಿಗೆ ಅಂದಾಜು 20 ಎಕರೆ ಜಾಗದಲ್ಲಿ ನಿವೇಶನಗಳನ್ನು ಮಂಜೂರು ಮಾಡಿ ಅರ್ಜಿದಾರರಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿತ್ತು.

30 ವರ್ಷಗಳ ಹಿಂದೆ ಪಟ್ಟಣ ದಿಂದ ಈ ಬಡಾವಣೆ ಬಹಳ ದೂರ ದಲ್ಲಿದ್ದ, ಸೌಕರ್ಯಗಳಿಲ್ಲದ ಕಾರಣ ಹಕ್ಕುದಾರರು ಹಾಗೆ ಬಿಟ್ಟಿದ್ದರು. ಕೆಲವರು ಮನೆ ನಿರ್ಮಿಸಿ ಕೊಂಡಿದ್ದರೂ ಯಾವುದೇ ಮೂಲಸೌಲಭ್ಯ ಹಾಗೂ ಸುರಕ್ಷತೆ ಇಲ್ಲದ ಕಾರಣ ವಾಸ ಮಾಡಲಾಗದೇ ಪಟ್ಟಣಕ್ಕೆ ವಾಪಸಾಗಿದ್ದರು. ಈಗ ಪಟ್ಟಣ ವಿಸ್ತರಣೆ ಗೊಳ್ಳುತ್ತಿರುವ ಜತೆಗೆ ಆಲಗೂಡು ಗ್ರಾ.ಪಂ ಪಟ್ಟಣ ಪಂಚಾಯಿತಿಯೊಂದಿಗೆ ವಿಲೀನ ಗೊಂಡು ಪುರಸಭೆ ಯಾದ ಕಾರಣ ವಸತಿ ನಿರ್ಮಿಸಿ ಕೊಳ್ಳಲು ಮುಂದಾಗಿದ್ದಾರೆ.

ಬಡಾವಣೆಯಲ್ಲಿ ಗಿಡಗಂಟಿಗಳು ಬೆಳೆದಿವೆ, ಅದನ್ನು ಸ್ವಚ್ಛಮಾಡಿ ಮನೆ ನಿರ್ಮಿಸಿ ವಾಸ ಮಾಡಲು ಹಕ್ಕುದಾರರು ಸಿದ್ಧರಿದ್ದಾರೆ. ಆದರೆ, ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿನ ಸೌಲಭ್ಯ, ಚರಂಡಿ ಹಾಗೂ ವಿದ್ಯುತ್ ಸಂಪರ್ಕ ಒದಗಿಸಬೇಕಿದೆ. ಇದಕ್ಕಾಗಿ ತಾಲ್ಲೂಕು ಆಡಳಿತಕ್ಕೆ ನಿವೇಶನದಾರರು ಮನವಿ ಮಾಡುತ್ತಿದ್ದಾರೆ.

‘ಬಡಾವಣೆ ಪ್ರದೇಶವು ಪಹಣಿ ಯಲ್ಲಿ ಸರ್ಕಾರಿ ಗೋಮಾಳ ಎಂದೇ ತೋರಿಸುತ್ತಿದ್ದು, ಜಿಲ್ಲಾಡಳಿತ ಅದನ್ನು ತಿದ್ದುಪಡಿ ಮಾಡಿ ಬಡಾವಣೆ ಹೆಸರನ್ನು ನಮೂದಿಸಬೇಕಿದೆ. ಆಲಗೂಡು ಪಂಚಾಯಿತಿಗೆ ಅನೇಕ ಹಕ್ಕುದಾರರು ನಿವೇಶನ ಕಂದಾಯ ವನ್ನು ಪಾವತಿಸಿ ದ್ದಾರೆ. ಪುರಸಭೆ ವ್ಯಾಪ್ತಿಗೆ ಸೇರಿದ ನಂತರ ಈ ನಿವೇಶನಕ್ಕೆ ಪುರಸಭೆಯವರು ಕಂದಾಯ ಪಾವತಿಸಿಕೊಳ್ಳುತ್ತಿಲ್ಲ. ನಿವೇಶನದಾರರು ಮೃತಪಟ್ಟಿದ್ದಲ್ಲಿ ಅವರ ಕುಟುಂಬದವರಿಗೆ ಖಾತೆ ಮಾಡುತ್ತಿಲ್ಲ. ಇ- ಸ್ವತ್ತು ಸಿಗುತ್ತಿಲ್ಲ’ ಎಂದು ನಿವೇಶನ ಹಕ್ಕುದಾರರು ಅಳಲು ತೋಡಿಕೊಂಡರು.

‘ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಪಟ್ಟಣದ ಎಲ್ಲಾ ಸಮುದಾಯದವರಿಗೂ ವಸತಿ ಕಲ್ಪಿಸುವ ಉದ್ದೇಶದಿಂದ ಸುಮಾರು 280ಕ್ಕೂ ಹೆಚ್ಚು ಮಂದಿಗೆ ನಿವೇಶನ ನೀಡಲಾಗಿತ್ತು. ಆ ಅವಧಿಯಲ್ಲಿ ಮೂಲಸೌಲಭ್ಯ ಒದಗಿಸಬಹುದಿತ್ತು, ಆದರೆ ಮಾಡಲಿಲ್ಲ. ಈಗ ಮನೆ ನಿರ್ಮಿಸಿಕೊಳ್ಳಲು ಜನರು ಮುಂದಾಗಿದ್ದಾರೆ. ಸ್ಥಳೀಯ ಆಡಳಿತ ಸೌಲಭ್ಯ ಕಲ್ಪಿಸಬೇಕಿದೆ’ ಎಂದು ನಿವೇಶನ ಹಕ್ಕುದಾರ ಪ್ರಶಾಂತ್ ಈಡಿಗರ್ ಆಗ್ರಹಿಸುತ್ತಾರೆ.

***

ನಿವೇಶನದ ಕಂದಾಯ ಪಾವತಿಸಿಕೊಳ್ಳಲು ಪುರಸಭೆ ಆಡಳಿತ ಕ್ರಮ ಕೈಗೊಳ್ಳಬೇಕು. ಖಾತೆ ಮಾಡುವುದರ ಜತೆಗೆ ಮನೆ ನಿರ್ಮಿಸಿಕೊಳ್ಳಲು ಅಗತ್ಯ ದಾಖಲೆ ನೀಡಲು ಗಮನಹರಿಸಬೇಕು.
-ಮಂಜು, ಬಡಾವಣೆ ನಿವೇಶನದಾರ

***

ಬಡಾವಣೆ ಸೌಲಭ್ಯಕ್ಕಾಗಿ ಅರ್ಜಿ ಬಂದಿದ್ದಲ್ಲಿ ನಿವೇಶನ ದಾಖಲಾತಿಗಳನ್ನು ಪರಿಶೀಲಿಸಿ ಆಡಳಿತ ಮಂಡಳಿಯ ಸಭೆಯಲ್ಲಿಟ್ಟು ಚರ್ಚಿಸಿ ಮುಂದಿನ ಕ್ರಮ ವಹಿಸುತ್ತೇವೆ.
-ಬಸವರಾಜು, ಮುಖ್ಯಾಧಿಕಾರಿ, ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT