ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬೇಡಿಕೆಯಂತೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ಶೋಭಾ ಕರಂದ್ಲಾಜೆ

Last Updated 14 ಅಕ್ಟೋಬರ್ 2021, 8:55 IST
ಅಕ್ಷರ ಗಾತ್ರ

ಮೈಸೂರು: 'ಎಂಪಿಎಂಸಿ ಕಾಯ್ದೆ (ತಿದ್ದುಪಡಿ) ರೈತರ ಬೇಡಿಕೆಯಾಗಿತ್ತು. ಅದು ಬಿಜೆಪಿ ಬೇಡಿಕೆಯಾಗಿರಲಿಲ್ಲ' ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಗುರುವಾರ ಇಲ್ಲಿ ಹೇಳಿದರು.

ನಗರದ ಅರಮನೆ ಅಂಗಳದಲ್ಲಿ ಮಾವುತರು ಮತ್ತು ಕಾವಾಡಿಗರಿಗೆ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಭಾಗಿಯಾದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟ ರಾಜಕೀಯ ಪ್ರೇರಿತ' ಎಂದು ಕಿಡಿಕಾರಿದರು.

'ಗುಜರಾತ್‌, ಪಂಜಾಬ್‌, ಉತ್ತರ ಪ್ರದೇಶ, ಮಣಿಪುರದಲ್ಲಿ ಚುನಾವಣೆ ಹತ್ತಿರದಲ್ಲಿದೆ. ಚುನಾವಣೆ ಉದ್ದೇಶವಾಗಿಟ್ಟುಕೊಂಡು ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ. 30-40 ವರ್ಷಗಳ ಹಿಂದೆಯೇ ರೈತರು ಬೇಡಿಕೆ ಇಟ್ಟಿದ್ದರು. ಎಪಿಎಂಸಿ ಕಾಯ್ದೆ ರದ್ದಾಗಬೇಕು, ಅದಕ್ಕೆ ತಿದ್ದುಪಡಿಯಾಗಬೇಕು ಎಂಬುದು ಬಿಜೆಪಿ ಬೇಡಿಕೆಯಲ್ಲ, ರೈತರ ಬೇಡಿಕೆಯಾಗಿತ್ತು. ಈ ಹಿಂದೆಯೇ ಸಂಸತ್‌ನಲ್ಲಿ ಆಗಿದ್ದ ಚರ್ಚೆ, ವಿವಿಧ ಸಮಿತಿಗಳು ಸಲ್ಲಿಸಿದ ವರದಿ ಆಧರಿಸಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಈ ಕಾಯ್ದೆಗಳಿಂದ ರೈತರಿಗೆ ಒಳ್ಳೆಯದಾಗಿ ಬಿಡುತ್ತೆ ಎಂಬ ಕಾರಣಕ್ಕೆ ಅನೇಕ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸುತ್ತಿವೆ. ಅದಕ್ಕೆ ನಮ್ಮಲ್ಲೂ ಕೆಲವರು ಕೈ ಜೋಡಿಸಿದ್ದಾರೆ' ಎಂದು ಶೋಭಾ ಅಸಮಾಧಾನ ವ್ಯಕ್ತಪಡಿಸಿದರು.



'ಹೋರಾಟಕ್ಕೆ ರೈತರು ಹಾಗೂ ಬೇರೆ ಸಂಘಟನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ರೈತರ ಹಿತಕ್ಕೆ ಬದ್ಧವಾಗಿದ್ದು, ಚರ್ಚೆಗೆ ಸಿದ್ಧವಾಗಿದೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

'ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್.‌ ಅಧಿಕಾರದಲ್ಲಿರಲಿ, ಇಲ್ಲದಿರಲಿ ನಿರಂತರವಾಗಿ ಭ್ರಷ್ಟಾಚಾರ ಮಾಡಿಕೊಂಡು ಬಂದಿದೆ. ತಮ್ಮ ಅಧಿಕಾರವಧಿಯಲ್ಲಿ ಲೂಟಿ ಮಾಡಿದೆ. ಕಾಂಗ್ರೆಸ್‌ನ ಹಿರಿಯ ನಾಯಕರೇ ತಮ್ಮ ಪಕ್ಷದ ಬಗ್ಗೆ ಸತ್ಯ ಹೇಳಲು ಮುಂದಾಗಿದ್ದಾರೆ' ಎಂದು ಲೇವಡಿ ಮಾಡಿದರು.

ರಸಗೊಬ್ಬರ ಕೊರತೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶೋಭಾ, 'ರಸಗೊಬ್ಬರವನ್ನು ಹೊರ ದೇಶಗಳಿಂದ ತರಿಸಿಕೊಳ್ಳುತ್ತಿದ್ದು, ಸ್ವಲ್ಪ ಸಮಸ್ಯೆ ಆಗಿದೆ. ಈ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ದೇಶದಲ್ಲೇ ರಸಗೊಬ್ಬರ ಉತ್ಪಾದನೆ ಹೆಚ್ಚುಗೊಳಿಸಿ ಸ್ವಾವಲಂಬಿ ಆಗುವುದಕ್ಕೆ ಒತ್ತು ನೀಡಲಾಗುತ್ತಿದೆ' ಎಂದರು.

ಮಾವುತರು, ಕಾವಾಡಿಗರೊಂದಿಗೆ ಕಾಲಕಳೆಯುವುದು ನನಗೆ ಆನಂದ
2008ರಲ್ಲಿ ನಾನು ಉಸ್ತುವಾರಿ ಸಚಿವೆಯಾಗಿದ್ದಾಗ ಎಲ್ಲ ಮಾವುತರು, ಕಾವಾಡಿಗರಿಗೆ ಉಪಾಹಾರ ನೀಡುವುದನ್ನು ಆರಂಭಿಸಿದ್ದೆವು. ಅದನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಮಾವುತರು, ಕಾವಾಡಿಗರು ನಗರಕ್ಕೆ ಬರುವುದು ವರ್ಷಕ್ಕೆ ಒಮ್ಮೆಯಷ್ಟೆ. ಹಿಂದೆ ಅವರಿಗೆ ಗೌರವಧನವಾಗಿ ಕೇವಲ ₹ 5 ಸಾವಿರ ನೀಡಲಾಗುತ್ತಿತ್ತು. ಉಳಿದಂತೆ ಅವರು ಕಾಡಿನಲ್ಲಿ ಕೂಲಿ ಇನ್ನಿತರ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ಅವರನ್ನು ಸರ್ಕಾರಿ ನೌಕರರು ಎಂದೇ ಪರಿಗಣಿಸಿ ತಿಂಗಳ ಸಂಬಳ ನೀಡಲಾಗುತ್ತಿದೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT