ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವರುಣದಲ್ಲಿ ಮುಡಾ ಹಣ ಬಳಕೆ: ವಿವರಣೆ ಕೇಳಿದ ರಾಜ್ಯಪಾಲ

Published : 19 ಸೆಪ್ಟೆಂಬರ್ 2024, 19:36 IST
Last Updated : 19 ಸೆಪ್ಟೆಂಬರ್ 2024, 19:36 IST
ಫಾಲೋ ಮಾಡಿ
Comments

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಮುಡಾದಿಂದ ಕೈಗೆತ್ತಿಕೊಳ್ಳಲಾದ ₹387 ಕೋಟಿ ವೆಚ್ಚದ ಕಾಮಗಾರಿಗಳ ವಿವರ ನೀಡುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಸೂಚಿಸಿದ್ದಾರೆ.

‘ಮುಡಾ ವ್ಯಾಪ್ತಿಯಲ್ಲಿ ಇಲ್ಲದಿದ್ದರೂ ಮುಖ್ಯಮಂತ್ರಿಯ ಮೌಖಿಕ ಸೂಚನೆ ಮೇರೆಗೆ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮುಡಾ ಆರ್ಥಿಕ ಸಂಕಷ್ಟದಲ್ಲಿ ಇದ್ದರೂ ಭಾರಿ ಮೊತ್ತದ ಕಾಮಗಾರಿ ಕೈಗೊಂಡು ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು’ ಎಂದು ಕೋರಿ ಮುಡಾದ ನಿವೃತ್ತ ಅಧಿಕಾರಿ ಪಿ.ಎಸ್. ನಟರಾಜು, ರಾಜ್ಯಪಾಲರಿಗೆ ಆ.27ರಂದು ದೂರು ನೀಡಿದ್ದರು.

‘ಈ ದೂರು ಗಂಭೀರ ಸ್ವರೂಪದ್ದಾಗಿದ್ದು, ಪ್ರಕರಣವನ್ನು ಸಮಗ್ರವಾಗಿ ಪರಿಶೀಲಿಸಬೇಕು. ಈ ಸಂಬಂಧ ಅಗತ್ಯ ದಾಖಲೆಗಳೊಂದಿಗೆ ಆದಷ್ಟು ಶೀಘ್ರದಲ್ಲಿ ವಿಸ್ತೃತ ವರದಿಯನ್ನು ಸಲ್ಲಿಸಬೇಕು’ ಎಂದು ರಾಜ್ಯಪಾಲರು ಸೆ.5ರಂದು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ನಿರ್ದೇಶನ ನೀಡಿದ್ದಾರೆ.

ಏನಿದೆ ದೂರಿನಲ್ಲಿ?

‘ಮುಖ್ಯಮಂತ್ರಿ ಮೌಖಿಕ ಸೂಚನೆ ಮೇರೆಗೆ ವರುಣ ಕ್ಷೇತ್ರದ 24 ಗ್ರಾಮಗಳಲ್ಲಿ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ₹377 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಅಲ್ಲದೆ ವರುಣ ಕ್ಷೇತ್ರಕ್ಕೆ ₹40 ಕೋಟಿ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ₹15 ಕೋಟಿ ಬಳಕೆ ಸಂಬಂಧ 2023ರ ಸೆ.6ರಂದು ನಡೆದ ಮುಡಾ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಲಾಗಿತ್ತು. ಈ ಸಂಬಂಧ ಸರ್ಕಾರದ ಮಾರ್ಗದರ್ಶನ ಕೋರಿ ಮುಡಾದಿಂದ ಪ್ರಸ್ತಾವ ಸಲ್ಲಿಸಲಾಗಿತ್ತು. ಈ ಕಾಮಗಾರಿಗಳನ್ನು ನಿರ್ವಹಿಸಲು ಸರ್ಕಾರವು ಎರಡೇ ತಿಂಗಳಲ್ಲಿ ಅನುಮೋದನೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ’ ಎಂದು ನಟರಾಜು ದೂರಿನಲ್ಲಿ ವಿವರಿಸಿದ್ದಾರೆ.

‘ಮುಡಾ ವ್ಯಾಪ್ತಿಯಲ್ಲಿ ಬರದ ಪ್ರದೇಶಗಳ ಕಾಮಗಾರಿಗೆ ಅನುದಾನ ವಿನಿಯೋಗಿಸುವುದು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಪರಿಚ್ಛೇದ 15 ಮತ್ತು 25ಕ್ಕೆ ವಿರುದ್ಧವಾಗಿದೆ. ಈ ಕಾಮಗಾರಿಗಳಿಗೆ ಒಪ್ಪಿಗೆ ನೀಡುವಾಗ ಅಧಿಕಾರಿಗಳು ‘ಮುಖ್ಯಮಂತ್ರಿಯವರ ಮೌಖಿಕ ಸೂಚನೆ ಮೇರೆಗೆ’ ಎಂದು ಉಲ್ಲೇಖಿಸಿದ್ದಾರೆ. ಇದು ಕಾನೂನುಬಾಹಿರವಾಗಿದ್ದು ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಅವರು ಕೋರಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಟರಾಜು ‘ಮುಖ್ಯಮಂತ್ರಿ ಸೂಚನೆ ಮೇರೆಗೆ ಎಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು. ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT