ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಬೀನ್ಸ್‌ ಬೆಲೆ ಇಳಿಕೆ; ಟೊಮೆಟೊ ದುಬಾರಿ

ಸೊಪ್ಪು ಇನ್ನಷ್ಟು ತುಟ್ಟಿ; ಬೆಲೆ ಏರಿಸಿಕೊಂಡ ಬಾಳೆ
Published 10 ಜೂನ್ 2024, 14:43 IST
Last Updated 10 ಜೂನ್ 2024, 14:43 IST
ಅಕ್ಷರ ಗಾತ್ರ

ಮೈಸೂರು: ದ್ವಿಶತಕ ದಾಟಿದ್ದ ಬೀನ್ಸ್‌ ಬೆಲೆಯು ಈ ವಾರ ಅರ್ಧದಷ್ಟು ಇಳಿಕೆ ಆಗಿದ್ದು, ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಟೊಮೆಟೊ ಧಾರಣೆ ಏರುಮುಖವಾಗಿದೆ.

ವಾರದ ಹಿಂದಷ್ಟೇ ಬೀನ್ಸ್‌ ಪ್ರತಿ ಕೆ.ಜಿ.ಗೆ ₹200ರವರೆಗೆ ಮಾರಾಟವಾಗಿ ಕೊಳ್ಳುವವರ ಕಣ್ಣಲ್ಲಿ ನೀರು ತರಿಸಿತ್ತು. ರಾಜ್ಯದಾದ್ಯಂತ ಕಳೆದೊಂದು ತಿಂಗಳಿಂದ ಹದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಬೀನ್ಸ್‌ ಬೆಳೆಯಲು ಆರಂಭಿಸಿದ್ದು, ಮಾರುಕಟ್ಟೆಗೆ ಉತ್ಪನ್ನದ ಆವಕ ಏರತೊಡಗಿದೆ. ಈ ಹಿನ್ನೆಲೆಯಲ್ಲಿ ಇದರ ಬೆಲೆ ಗಣನೀಯ ಇಳಿಕೆ ಕಂಡಿದೆ. ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೀನ್ಸ್‌ನ ಸಗಟು ದರ ಪ್ರತಿ ಕೆ.ಜಿ.ಗೆ ₹65ಕ್ಕೆ ಇಳಿಕೆ ಆಗಿದೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ ನಾಟಿ ಬೀನ್ಸ್ ₹80 ಹಾಗೂ ನಾರುರಹಿತ ಬೀನ್ಸ್‌ ₹100ರಂತೆ ಮಾರಾಟ ನಡೆದಿದೆ.

ಟೊಮೆಟೊ ಬೆಲೆ ಕ್ರಮೇಣ ಏರಿಕೆ ಆಗತೊಡಗಿದ್ದು, ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ₹50ರಂತೆ ವ್ಯಾಪಾರ ನಡೆದಿದೆ. ತರಕಾರಿ ಬೆಳೆಯುವ ಪ್ರದೇಶಗಳಲ್ಲಿ ನಿರಂತರ ಮಳೆಯಿಂದಾಗಿ ಬೆಳೆ ಹಾಳಾಗಿರುವುದೂ ಬೆಲೆ ಏರಿಕೆಗೆ ಕಾರಣ. ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಇಳಿಯಬಹುದು ಎನ್ನುತ್ತಾರೆ ಎಂ.ಜಿ. ರಸ್ತೆ ತರಕಾರಿ ಮಾರುಕಟ್ಟೆಯಲ್ಲಿನ ವರ್ತಕರು.

ಮಳೆಗಾಲದ ಹಿನ್ನೆಲೆಯಲ್ಲಿ ಸೌತೆ ಹಾಗೂ ನಿಂಬೆಗೆ ಬೇಡಿಕೆ ಕುಸಿದಿದ್ದು, ಬೆಲೆ ಸಹ ಇಳಿಕೆ ಆಗಿದೆ. ಸೌತೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹20ಕ್ಕೆ ಕುಸಿದಿದೆ. ಉಳಿದ ತರಕಾರಿಗಳ ಬೆಲೆಯಲ್ಲಿ ಈ ವಾರ ಹೆಚ್ಚು ವ್ಯತ್ಯಾಸ ಆಗಿಲ್ಲ. ಹೆಚ್ಚಿನ ತರಕಾರಿಗಳು ಇನ್ನೂ ತುಟ್ಟಿಯಾಗಿಯೇ ಇವೆ.

ಸೊಪ್ಪು ದುಬಾರಿ: ಸೊಪ್ಪು ಎಂದಿನಂತೆ ದುಬಾರಿಯಾಗಿಯೇ ಉಳಿದಿದ್ದು, ಸದ್ಯಕ್ಕೆ ಬೆಲೆ ಇಳಿಕೆ ಲಕ್ಷಣಗಳು ಕಾಣುತ್ತಿಲ್ಲ. ಮಾರುಕಟ್ಟೆಯಲ್ಲಿ ನಾಟಿ ಕೊತ್ತಂಬರಿಯ ಘಮ ಇಲ್ಲದಾಗಿದೆ. ಮಳೆಗೆ ಸೊಪ್ಪೆಲ್ಲ ಕೊಳೆತ ಕಾರಣ ಬೇಡಿಕೆಯಷ್ಟು ಪ್ರಮಾಣದಲ್ಲಿ ಉತ್ಪನ್ನ ಮಾರುಕಟ್ಟೆಗೆ ಬರುತ್ತಿಲ್ಲ. ಕೊತ್ತಂಬರಿ ಅತ್ಯಂತ ದುಬಾರಿ ಆಗಿದ್ದು, ನಾಲ್ಕೇ ಕಡ್ಡಿಯ ಸಣ್ಣ ಕಟ್ಟು ₹10ರಂತೆ ಮಾರಾಟ ನಡೆದಿದೆ. ಸಬ್ಬಸ್ಸಿಗೆ ದೊಡ್ಡ ಕಟ್ಟು ₹50 ಹಾಗೂ ಮೆಂತ್ಯ ₹80ರವರೆಗೆ ಬೆಲೆ ಏರಿಸಿಕೊಂಡಿದ್ದು, ಎರಡೇ ಬೇರುಗಳ ಪಾಲಕ್ ಸಣ್ಣ ಕಟ್ಟು ₹10ಕ್ಕೆ ಮಾರಾಟ ನಡೆದಿದೆ. ಕೀರೆ, ಕಿಲ್‌ಕೀರೆ, ದಂಟು ₹20ಕ್ಕೆ 3 ಸಣ್ಣ ಕಟ್ಟು ಸಿಗುತ್ತಿವೆ.

ಏಲಕ್ಕಿ ಬಾಳೆ ದುಬಾರಿ: ಏಲಕ್ಕಿ ಬಾಳೆಯ ಬೆಲೆಯಲ್ಲಿ ಜಿಗಿತ ಕಂಡಿದ್ದು, ₹70ರವರೆಗೆ ಬೆಲೆ ಏರಿದೆ. ಸೇಬಿನ ಧಾರಣೆ ಸಹ ₹200ರ ಗಡಿ ದಾಟಿದೆ. ಪಪ್ಪಾಯ, ಕಲ್ಲಂಗಡಿ ಮಾತ್ರ ಕೊಳ್ಳುವವರಿಗೆ ಅಗ್ಗವಾಗಿವೆ. ಮಾರುಕಟ್ಟೆಯಲ್ಲಿ ಮಾವಿನ ಘಮ ಕಡಿಮೆ ಆಗಿದ್ದು, ಆ ಜಾಗಕ್ಕೆ ನೇರಳೆ ಲಗ್ಗೆ ಇಡುತ್ತಿದೆ. ಈಗಷ್ಟೇ ಹಣ್ಣು ಮಾರುಕಟ್ಟೆ ಪ್ರವೇಶಿಸಿದ್ದು, ಪ್ರತಿ ಕೆ.ಜಿ.ಗೆ ಸರಾಸರಿ ₹300ರ ದರದಲ್ಲಿ ಮಾರಾಟ ನಡೆದಿದೆ.

ಸಮುದ್ರ ಮೀನು ದುಬಾರಿ

ಆಳ ಸಮುದ್ರ ಮೀನುಗಾರಿಕೆ ನಿಷೇಧದ ಬೆನ್ನಲ್ಲೇ ಸಮುದ್ರ ಮೀನುಗಳ ಬೆಲೆಯು ತುಟ್ಟಿಯಾಗಿದ್ದು, ಮತ್ಸ್ಯಪ್ರಿಯರಿಗೆ ನಿರಾಸೆ ಮೂಡಿಸಿದೆ. ಅಂಜಲ್‌ ಫಿಶ್ ₹1500ಕ್ಕೆ ಏರಿಕೆ ಆಗಿದ್ದರೆ, ಬಂಗುಡೆ ಸಹ ₹300–350 ಸರಾಸರಿಯಲ್ಲಿ ಮಾರಾಟ ನಡೆದಿದೆ. ವೈಟ್‌ ಪಾಂಪ್ರೆಟ್‌, ಬ್ಲಾಕ್‌ ಪಾಂಪ್ರೆಟ್‌, ಡಿಸ್ಕೊ, ಸಿಲ್ವರ್‌, ಮತ್ತಿ ಸಹ ಬಹುತೇಕ ಸಮುದ್ರ ಮೀನುಗಳ ಬೆಲೆ ಏರಿದ್ದು, ಮಾರುಕಟ್ಟೆಯಲ್ಲಿ ಅಪರೂಪವಾಗಿದೆ.

ಕೋಳಿಮಾಂಸದ ದರ ಎಂದಿನಂತೆ ಕೊಂಚ ದುಬಾರಿಯಾಗಿಯೇ ಇದ್ದು, ರೆಡಿ ಚಿಕನ್‌ ಕೆ.ಜಿ.ಗೆ ₹240–250ರಂತೆ ಮಾರಾಟ ನಡೆದಿದೆ. ಮೊಟ್ಟೆ ಬೆಲೆಯಲ್ಲೂ ಏರಿಕೆ ಕಾಣುತ್ತಿದ್ದು, ₹6ಕ್ಕೆ 1ರಂತೆ ಸಿಗುತ್ತಿದೆ. ಕುರಿ–ಮೇಕೆ ಮಾಂಸದ ಬೆಲೆಯಲ್ಲಿ ಹೆಚ್ಚು ವ್ಯತ್ಯಾಸ ಆಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT