ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಮಳೆನೀರು ಸಂಗ್ರಹಕ್ಕೆ ನೀಡಲಿ ಒತ್ತು

ಸುಧೀರ್‌ಕುಮಾರ್‌ ಎಚ್‌.ಕೆ
Published 6 ಮೇ 2024, 6:22 IST
Last Updated 6 ಮೇ 2024, 6:22 IST
ಅಕ್ಷರ ಗಾತ್ರ

ಮೈಸೂರು: ತಾಪಮಾನ ಏರಿಕೆ, ಕುಡಿಯುವ ನೀರಿಗೆ ತತ್ವಾರದ ನಡುವೆ ಈಚೆಗೆ ಜೋರು ಮಳೆ ಸುರಿದರೂ ಅಮೂಲ್ಯ ಜೀವಜಲವನ್ನು ಸಂಗ್ರಹಿಸಲು ಜನರು ಒಲವು ತೋರದ ಕಾರಣ, ಮಳೆನೀರು ವ್ಯರ್ಥವಾಗಿ ಹರಿದು ಹೋಯಿತು.

ಮಳೆ ಬರಲಿ ಎಂಬ ಕೋರಿಕೆ ಹಲವರಲ್ಲಿದ್ದರೂ, ಮಳೆ ನೀರನ್ನು ಸಂಗ್ರಹಿಸಬೇಕು ಎಂಬ ಆಲೋಚನೆ ಮಾತ್ರ ನಗರವಾಸಿಗಳಲ್ಲಿ ಇನ್ನೂ ಬಂದಿಲ್ಲ. ನಿಯಮಿತವಾಗಿ ಎದುರಾಗುತ್ತಿರುವ ಬರ ಕೂಡ ಮಳೆನೀರು ಸಂಗ್ರಹದತ್ತ ಜನರನ್ನು ಸೆಳೆಯುವಲ್ಲಿ ಸೋಲುತ್ತಿದೆ.

‘ಮೈಸೂರಿನಲ್ಲಿ ವಾರ್ಷಿಕ 800 ಮಿ.ಮೀ. ಮಳೆಯಾಗುತ್ತದೆ. 10 ಚದರದ ಮನೆಯ ಚಾವಣಿಯಿಂದ ಏನಿಲ್ಲವೆಂದರೂ 72 ಸಾವಿರ ಲೀಟರ್‌ ಮಳೆನೀರು ಸಂಗ್ರಹಿಸಬಹುದು. ಒಬ್ಬ ಮನುಷ್ಯನಿಗೆ ವಾರ್ಷಿಕ 50 ಸಾವಿರ ಲೀಟರ್‌ ನೀರು ಸಾಕು. ಆದರೆ, ಈ ಮಾರ್ಗ ಯಾರಿಗೂ ಬೇಕಿಲ್ಲ. ಮಳೆ ನೀರು ಕೆಆರ್‌ಎಸ್‌ ಸೇರಿಯೇ ಬರಬೇಕು ಎಂಬ ಅಪೇಕ್ಷೆ ಹಲವರದ್ದು’ ಎಂದು ಜಲತಜ್ಞ ಯು.ಎನ್.ರವಿಕುಮಾರ್ ಬೇಸರ ವ್ಯಕ್ತಪಡಿಸಿದರು.

‘ಕಳೆದ ವಾರ 20 ಮಿ.ಮೀ.ನಷ್ಟು ಮಳೆ ಸುರಿದಿದೆ. ಒಂದು ಸಾಧಾರಣ ಮನೆಯಲ್ಲಿ 2 ಸಾವಿರ ಲೀಟರ್‌ ನೀರನ್ನು ಸಂಗ್ರಹಿಸಬಹುದಿತ್ತು. ಮೊದಲ ಮಳೆಯು ಚಾವಣಿಯಲ್ಲಿನ ಕಲ್ಮಶಗಳನ್ನು ಹೆಚ್ಚು ತರುವುದರಿಂದ ಅದನ್ನು ಸಂಗ್ರಹಿಸದೇ ಬಿಡಬಹುದು. ಮುಂದೆ ಬರುವ ಮಳೆಯ ನೀರನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಬೇಕು. ಮಳೆನೀರು ಸಂಗ್ರಹವು ವೈಯಕ್ತಿಕ ನೆಲೆಯಲ್ಲಿ ಪ್ರತಿ ಮನೆಯಲ್ಲೂ ಮಾಡ ಬೇಕಾದ ಕೆಲಸ’ ಎಂದು ಹೇಳಿದರು.

ಕಡಿಮೆ ವೆಚ್ಚದಲ್ಲಿ ನೀರು: ‘ಹೆಚ್ಚಿನ ಖರ್ಚಿಲ್ಲದೇ ಮಳೆ ನೀರನ್ನು ಸಂಗ್ರಹಿಸಬಹುದು. ಬ್ಯಾಂಕ್‌ನಲ್ಲಿ ಹಣವಿರುವುದಕ್ಕಿಂದ ಮನೆಯಲ್ಲಿ ನೀರಿನ ಬ್ಯಾಂಕ್‌ ಇಟ್ಟುಕೊಳ್ಳುವುದು ಭವಿಷ್ಯದಲ್ಲಿ ಹೆಚ್ಚು ಅನುಕೂಲ ಮಾಡಲಿದೆ. 10 ಸಾವಿರ ಲೀಟರ್‌ನ ಟ್ಯಾಂಕ್‌, ₹5 ಸಾವಿರದಿಂದ ₹10 ಸಾವಿರ ವೆಚ್ಚದಲ್ಲಿ ದೊರೆಯುವ ಫಿಲ್ಟರ್‌ ಕಿಟ್‌ ಮತ್ತು ಸರಳವಾದ ಪ್ಲಂಬಿಗ್‌ ಕೆಲಸದ ಮೂಲಕ ಮಳೆ ನೀರು ಸಂಗ್ರಹ ಸಾಧ್ಯ. ಹೆಚ್ಚು ಪರಿಸರಪೂರಕ ಜೀವನವಿದು’ ಎಂದರು.

ನೀರು ಇಂಗಿಸಿ: ‘ಹಿಂದೆ ನಿರ್ಮಾಣ ಚಟುವಟಿಕೆಯಲ್ಲಿ ನೀರನ್ನು ಹರಿದು ಹೋಗಿಸುವುದೇ ಗುರಿಯಾಗಿತ್ತು. ಇಂದು ಸ್ವಲ್ಪ ಭಿನ್ನವಾಗಿದೆ. ಯೋಜನೆ ಗಳಲ್ಲಿ ನೀರನ್ನು ಇಂಗಿಸುವ ಮಾತುಗಳ ನ್ನಾಡುತ್ತಿದ್ದಾರೆ. ಆದರೆ, ಇದು ದೊಡ್ಡ ಮಟ್ಟದಲ್ಲಿ ನಡೆಯುತ್ತಿಲ್ಲ. ಪಾಲಿಕೆ ಯಿಂದ ಉದ್ಯಾನ, ವಾಹನ ನಿಲುಗಡೆ ಸ್ಥಳ, ಪಾದಚಾರಿ ಮಾರ್ಗದಲ್ಲಿ ನೀರನ್ನು ಇಂಗಿಸಲು ಅವಕಾಶ ಮಾಡಬೇಕು. ನಗರದಲ್ಲಿ ಕಾಂಕ್ರೀಟೀಕರಣ ಹೆಚ್ಚುತ್ತಿದ್ದು, ಹಸಿರು ಸ್ಥಳಗಳು ಮಾಯವಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನೀರು ಕೆಡುವ ಆತಂಕ ಬೇಡ’

‘ಉತ್ತಮ ಫಿಲ್ಟರ್‌ ಬಳಸಿ ಸಂಗ್ರಹಿಸುವ ಮಳೆ ನೀರಿಗೆ ಬಿಸಿಲು, ಗಾಳಿ ಹಾಗೂ ಜೈವಿಕ ವಸ್ತು ಸೇರದಂತೆ ನೋಡಿಕೊಂಡರೆ ಅದನ್ನು ವರ್ಷಗಳವರೆಗೂ ಬಳಸಬಹುದು’ ಎಂದು ಪರಿಸರ ತಜ್ಞ ರಮೇಶ್‌ ಕಿಕ್ಕೇರಿ ತಿಳಿಸಿದರು.

‘ಮನೆಯ ಚಾವಣಿ ಅಳತೆಗಳನ್ನು ಗಮನಿಸಿ ಅದಕ್ಕೆ ತಕ್ಕ ಹಾಗೆ ಸಂಗ್ರಹ ವ್ಯವಸ್ಥೆ ಮಾಡಬಹುದು. ಜಾಗದ ಕೊರತೆಯಿದ್ದರೂ ಸೂಕ್ತ ಮಾರ್ಗದರ್ಶನದೊಂದಿಗೆ ಮಳೆನೀರು ಸಂಗ್ರಹ ಸಾಧ್ಯ. ಮಳೆನೀರು ಉಳಿಸುವ, ಬಳಸುವ ಇಚ್ಛಾಶಕ್ತಿ ಹೊಂದುವುದೇ ಮುಖ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT