ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿಗಾಗಿ ಯದುವೀರ್ ಭರ್ಜರಿ ರೋಡ್‌ ಶೋ, ಪ್ರಚಾರ

ಅರಮನೆಯ ಎಸಿ ಕೊಠಡಿಯಿಂದ ಹೊರಬಂದು ಬಿಸಿಲಿನಲ್ಲಿ ಪ್ರಚಾರ
Published 17 ಏಪ್ರಿಲ್ 2024, 5:42 IST
Last Updated 17 ಏಪ್ರಿಲ್ 2024, 5:42 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ರಾಜಕಾರಣದಲ್ಲಿ ಭವಿಷ್ಯ ಕಂಡುಕೊಳ್ಳಲು ಮತ್ತು ಪಕ್ಷದ ವರಿಷ್ಠರ ವಿಶ್ವಾಸ ಉಳಿಸಿಕೊಳ್ಳಲು ಬೆವರು ಹರಿಸುತ್ತಿದ್ದಾರೆ.

ಅರಮನೆಯ ಹವಾನಿಯಂತ್ರಿತ ಕೊಠಡಿಯಿಂದ ಹೊರ ಬಂದು, ಬಿರುಬಿಸಿಲನ್ನೂ ಲೆಕ್ಕಿಸದೇ ಬೀದಿ ಸಭೆ, ರೋಡ್‌ ಶೋ, ಪ್ರಚಾರ ಸಭೆಗಳಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ನಿರಂತರವಾಗಿ ಭಾಗವಹಿಸುತ್ತಿದ್ದಾರೆ. ‘ನಾನೂ ಸಾಮಾನ್ಯ’ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಮಠ, ದೇಗುಲಗಳಿಗೆ ಭೇಟಿಗೆ ಆದ್ಯತೆ ನೀಡುತ್ತಿದ್ದಾರೆ.

ಎನ್‌ಡಿಎ ಮೈತ್ರಿಕೂಟದ ಬಿಜೆಪಿ–ಜೆಡಿಎಸ್‌ ಕಾರ್ಯಕರ್ತರೊಂದಿಗೆ ಬೆರೆಯುತ್ತಿದ್ದಾರೆ. ರಸ್ತೆ ಬದಿ ನಿಂತು ಉಪಾಹಾರ ಸೇವಿಸಿ ಚಹಾ, ಎಳನೀರು ಕುಡಿಯುತ್ತಿದ್ದಾರೆ. ಗಲ್ಲಿಗಳಿಗೂ ಹೋಗುತ್ತಿದ್ದಾರೆ. ನಗು ಮೊಗದಿಂದಲೇ ಸೆಲ್ಫಿ, ಫೋಟೊಗೆ ಪೋಸು ಕೊಡುತ್ತಿದ್ದಾರೆ. ಕೈಮುಗಿದು ಮತ ಕೇಳುತ್ತಿದ್ದಾರೆ. ಜನರು ಮಹಾರಾಜರ ಕೊಡುಗೆಗಳನ್ನು ಸ್ಮರಿಸುವುದನ್ನು ಕಂಡು ಪುಳಕಗೊಳ್ಳುತ್ತಿದ್ದಾರೆ. 

ಸಹಾಯಕ ಸಿಬ್ಬಂದಿಯೊಂದಿಗೆ ಹೊರಟ ಅವರು ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಅಲ್ಲಿನ ಜೆಡಿಎಸ್‌ ಶಾಸಕ ಜಿ.ಡಿ.ಹರೀಶ್‌ ಗೌಡರೊಂದಿಗೆ ದಿನವಿಡೀ ಪ್ರಚಾರ ನಡೆಸಿದರು.

ಬೆಳಿಗ್ಗೆ 9.30ರ ಸುಮಾರಿಗೆ ಉಕ್ಕಿನಕಂತೆ ಮಾದಹಳ್ಳಿ ಮಠದಿಂದ ಶುರುವಾದ ಪ್ರಚಾರಕ್ಕೆ ಸಾಂಬಸದಾಶಿವ ಸ್ವಾಮೀಜಿ ಹಾಗೂ ಭಕ್ತರು, ಮುಖಂಡರಿಂದ ಆತ್ಮೀಯ ಸ್ವಾಗತ ದೊರೆಯಿತು. ಮಠದ ಗರ್ಭಗುಡಿಯಲ್ಲಿ ಸಂಕಲ್ಪ ಪೂಜೆ ಬಳಿಕ, ಶ್ರೀಗಳ ಆಶೀರ್ವಾದ ಪಡೆದರು. ಚಿಕ್ಕ ಸಭೆಯನ್ನೂ ನಡೆಸಿ, ಹುಣಸೂರಿನ ನಂಟನ್ನು ಸ್ಮರಿಸಿ, ‘ನಾನು ಈ ತಾಲ್ಲೂಕಿಗೆ ಮೊಮ್ಮಗ’ನೆಂದು ಹೇಳಿ ಬೆಂಬಲ ಕೋರಿದರು. ಪ್ರಧಾನಿ ನರೇಂದ್ರ ಮೋದಿ‌ ಕೊಡುಗೆಗಳನ್ನು ಪ್ರಸ್ತಾಪಿಸಿದರು.

ಮಾರ್ಗದಲ್ಲಿ ಮಾದಹಳ್ಳಿ ಗ್ರಾಮಸ್ಥರು ಸನ್ಮಾನಿಸಿದರು. ಮರಳಯ್ಯನ‌ ಕೊಪ್ಪಲು ಗ್ರಾಮದವರು ಕಾರನ್ನು ತಡೆದು, ಅರಳಿಮರದ ನೆರಳಲ್ಲಿ ಸನ್ಮಾನಿಸಿದರು. ದೊಡ್ಡೇಗೌಡನ‌ಕೊಪ್ಪಲುನಲ್ಲಿ ಮೈಸೂರು ಪೇಟ ತೊಡಿಸಿ ಅಭಿಮಾನ ತೋರಿದರೆ, ಬನ್ನಿಕುಪ್ಪೆ, ಕಟ್ಟೆಮಳಲವಾಡಿಯಲ್ಲೂ ‘ಸನ್ಮಾನ’ದ ಪ್ರೀತಿ ವ್ಯಕ್ತಪಡಿಸಿದರು.

ಗಾವಡಗೆರೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡ ಅವರಿಗೆ ಪೂರ್ಣಕುಂಭ ಸ್ವಾಗತ ದೊರೆಯಿತು. ಮರಾಠಾ ಚೌಲ್ಟ್ರಿಯಲ್ಲಿ ನಡೆದ ಪ್ರಚಾರ ಸಭೆಯ ವೇಳೆ, ಕೆಲ ಹಿರಿಯರೂ ಅವರ ಕಾಲಿಗೆರಗಿ ನಮಸ್ಕರಿಸಿದರು. ನಂತರ ಸಮೀಪದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಡೆದ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾದರು. ಛತ್ರಪತಿ ‌ಶಿವಾಜಿ ರಸ್ತೆಯಲ್ಲಿರುವ ವಿಠೋಬಾ ರುಕ್ಮಿಣಿ, ಬಸವೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಉತ್ಸಾಹದಿಂದಲೇ...

ಗಾವಡಗೆರೆಯಲ್ಲಿ ಗಾವಡಗೆರೆಯಮ್ಮ ದೇಗುಲಕ್ಕೆ ತೆರಳಿ ಪೂಜೆಯ ನಂತರ ಗ್ರಾಮದ ಗುರುಲಿಂಗ ಜಂಗಮದೇವರ ಮಠದಲ್ಲಿ ನಟರಾಜ ಸ್ವಾಮೀಜಿ ಆಶೀರ್ವಾದ ಪಡೆದರು. ಅಲ್ಲೇ ಮಧ್ಯಾಹ್ನದ ಊಟ ಮಾಡಿದರು. ಬಳಿಕ ಹುಣಸೂರಿನಲ್ಲಿ ಪ್ರಚಾರ ಸಭೆಗೆ ಬಂದ ಅವರನ್ನು ಕಾರ್ಯಕರ್ತರು ಮಂಗಳವಾದ್ಯದ ಮೂಲಕ ಸ್ವಾಗತಿಸಿದರು. ತೆರೆದ ವಾಹನದಲ್ಲಿ ಮೆರವಣಿಗೆಯೂ ನಡೆಯಿತು. ಅಲ್ಲಿ ಪ್ರಚಾರ ಸಭೆ ಮುಗಿಯುವ ವೇಳೆಗೆ ಸಂಜೆಯಾಗಿತ್ತು. ಬಳಿಕ ಅದೇ ತಾಲ್ಲೂಕಿನಲ್ಲಿ ಚಿಲ್ಕುಂದದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾದರು. ಅಲ್ಲಿಂದ ಹೊರಡುವ ವೇಳೆಗೆ ಕತ್ತಲಾಗಿತ್ತು. ನಂತರ ಮೈಸೂರಿನ ಎನ್.ಆರ್. ಮೊಹಲ್ಲಾದಲ್ಲಿ ರಾತ್ರಿ ನಡೆದ ಒಕ್ಕಲಿಗ ಸಮಾಜದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT