ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಸ್ಮಶಾನದಲ್ಲಿ ಗೋರಿ ಕಟ್ಟುವಂತಿಲ್ಲ

Last Updated 12 ಮೇ 2017, 10:19 IST
ಅಕ್ಷರ ಗಾತ್ರ
ಮೈಸೂರು: ನಗರದಲ್ಲಿ ಇನ್ನು ಮುಂದೆ ಶವಸಂಸ್ಕಾರದ ನಂತರ ನಿಮ್ಮ ಪ್ರೀತಿಪಾತ್ರರ ಗೋರಿ ಕಟ್ಟುವಂತಿಲ್ಲ. ಯಾವುದೇ ಸಮುದಾಯದವರ ಗೋರಿ ಕಟ್ಟಲು ಮಹಾನಗರ ಪಾಲಿಕೆಯು ಅನುಮತಿ ನೀಡುತ್ತಿಲ್ಲ.
 
ಇಂಥದೊಂದು ನಿರ್ಣಯವನ್ನು ಕಳೆದ ವರ್ಷವೇ ಪಾಲಿಕೆ ಕೈಗೊಂಡಿದೆ. ಆದರೆ, ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಗೋರಿ ಕಟ್ಟಿಸುವವರು ರಾಜಕೀಯ ಮುಖಂಡರ ಶಿಫಾರಸು ಬಳಸುತ್ತಿದ್ದರು. ಅದರಲ್ಲೂ 3x5 ಅಡಿ ಗೋರಿ ಕಟ್ಟಿಸುತ್ತೇವೆಂದು ಅನುಮತಿ ಪಡೆದು 5x10 ಅಡಿ ಕಟ್ಟಿಸಿದವರೂ ಇದ್ದಾರೆ.
 
‘3 ತಿಂಗಳಿನಿಂದ ನಮ್ಮ ಸ್ಮಶಾನದ ಕಾವಲುಗಾರರು ಗೋರಿ ಕಟ್ಟಲು ಅವಕಾಶ ಕೊಡುತ್ತಿಲ್ಲ. ಈ ಕುರಿತು ಸಾರ್ವಜನಿಕರು ಅರಿಯಬೇಕು. ಮತ್ತೆ ಮತ್ತೆ ಒತ್ತಡ ತರುವುದನ್ನು ನಿಲ್ಲಿಸಬೇಕು’ ಎಂದು ಮನವಿ ಮಾಡಿಕೊಳ್ಳುತ್ತಾರೆ ಪಾಲಿಕೆಯ ಸಹಾಯಕ ಸಾಂಖಿಕ ಅಧಿಕಾರಿ ಅನಿಲ್‌ ಕ್ರಿಸ್ಟಿ.
 
‘ಈಗಾಗಲೇ ಸ್ಮಶಾನಗಳಲ್ಲಿ ಕಟ್ಟಿಸಿರುವ ಗೋರಿಗಳನ್ನು ಒಡೆದು ಹಾಕಲು ಚಿಂತಿಸಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯವಾಗಬೇಕಿದೆ’ ಎಂದು ಹೇಳಿದರು.
 
ಗಿಡ ನೆಡಲು ಯೋಜನೆ: ಅನೇಕ ಸ್ಮಶಾನಗಳಲ್ಲಿ ನೆರಳಿಲ್ಲದಿರುವುದನ್ನು ಮನಗಂಡಿರುವ ಸಾಂಖಿಕ ವಿಭಾಗ, ಗಿಡ ನೆಡುವ ಯೋಜನೆ ಹಮ್ಮಿಕೊಂಡಿದೆ. ತೋಟಗಾರಿಕೆ ಇಲಾಖೆಯಿಂದ ಸಸಿ ಪಡೆದು, ಪ್ರತಿ ಸ್ಮಶಾನದಲ್ಲಿ ಕನಿಷ್ಠ 20 ಗಿಡ ನೆಡಲಾಗುವುದು. ಅನೇಕ ಸ್ಮಶಾನಗಳಲ್ಲಿನ ನೀರಿನ ಕೊರತೆ ನೀಗಿಸಲು ಪಾಲಿಕೆ ಮುಂದಾಗಿದೆ. ಮಳೆನೀರು ಸಂಗ್ರಹಿಸುವ ಯೋಜನೆಯನ್ನೂ ಹಾಕಿಕೊಂಡಿದೆ.
 
 
‘ಸ್ಮಶಾನದಲ್ಲಿ ಕಸದ ತೊಟ್ಟಿಯ ಅಗತ್ಯವಿದೆ. 2 ಕೊಳವೆ ಬಾವಿಗಳಿದ್ದರೂ ಒಂದರಲ್ಲಿ ನೀರು ಬರುತ್ತಿಲ್ಲ. ದುರಸ್ತಿ ಯಾಗಬೇಕು. ಮಳೆನೀರು ಸಂಗ್ರಹ ವಾದರೆ ಅಂತರ್ಜಲ ಹೆಚ್ಚುತ್ತದೆ. ಆದರೆ, ಒಳಚರಂಡಿ ದುರಸ್ತಿಯಾಗಬೇಕು’ ಎನ್ನುವ ಬೇಡಿಕೆಯನ್ನು ಗಾಂಧಿನಗರ ಸ್ಮಶಾನದ ಕಾವಲುಗಾರ ಪಳನಿಸ್ವಾಮಿ ಮುಂದಿಡುತ್ತಾರೆ.
 
ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಸೌದೆ, ಬೆರಣಿಯಿಂದ ಸುಟ್ಟ ಮೇಲೆ ಮರುದಿನ ಸಂಬಂಧಿಕರು ಸ್ವಲ್ಪ ಬೂದಿ ಒಯ್ಯುತ್ತಾರ. ಉಳಿದ ಬೂದಿ, ಮೂಳೆ ಹಾಗೆಯೇ ಇರುತ್ತವೆ. ನಾಯಿ, ಇತರ ಪ್ರಾಣಿಗಳು ಚೆಲ್ಲಾಪಿಲ್ಲಿ ಮಾಡುತ್ತವೆ. ಇದರ ವಿಲೇವಾರಿ ಅಗತ್ಯವಾಗಿದೆ ಎನ್ನುವ ಮನವಿ ಅಗ್ರಹಾರದ ಸರೋಜಮ್ಮ ಅವರದು.
 
ಕಾವಲುಗಾರರ ಸಮಸ್ಯೆ: 38 ಸ್ಮಶಾನಗಳಿಗೆ ಕೇವಲ 18 ಕಾವಲುಗಾರರಿದ್ದಾರೆ. ತಲಾ ಕಾವಲುಗಾರರಿಗೆ 3–4 ಸ್ಮಶಾನಗಳ ನಿರ್ವಹಣೆಯ ಜವಾಬ್ದಾರಿ ನೀಡಲಾಗಿದೆ. ಇದರಿಂದ ಸರಿಯಾಗಿ ನಿಗಾ ವಹಿಸಲಾಗುತ್ತಿಲ್ಲ. ಸಂಜೆ 6 ಗಂಟೆಯ ನಂತರ ಕಾವಲುಗಾರರು ಇರುವುದಿಲ್ಲ. ಹಾಗಾಗಿ ಶವ ಸಂಸ್ಕಾರಕ್ಕೆ ಮರುದಿನದವರೆಗೆ ಕಾಯಬೇಕು. ಇದಕ್ಕಾಗಿ ರಾತ್ರಿ ಪಾಳಿ ನಿರ್ವಹಿಸುವ ಕಾವಲುಗಾರರ ಅಗತ್ಯವಿದೆ ಎನ್ನುತ್ತಾರೆ ಸಾಂಖಿಕ ಅಧಿಕಾರಿ ಎಚ್‌.ಎಸ್.ಶರ್ಮಾ.
 
ಹೂಳಲು, ಅನಿಲ ಸಂಸ್ಕಾರ ಉಚಿತವಿದೆ. ಸೌದೆ ಹಾಗೂ ಬೆರಣಿಯಿಂದ ಸುಡಲು ₹ 100 ದರ ನಿಗದಿಗೊಳಿಸಲಾಗಿದೆ. ಆದರೆ, ಸೌದೆ, ಬೆರಣಿಯನ್ನು ಸಂಬಂಧಿಕರೇ ತರಬೇಕು.
 
ಸಂಜೆ 6 ಗಂಟೆಯ ನಂತರ ಸಂಸ್ಕಾರ ನಡೆಸಿದರೆ ಮೃತರಾದವರ ಹೆಸರು ದಾಖಲಾಗುವುದಿಲ್ಲ. ಇದಕ್ಕಾಗಿ ರಸೀದಿ ಕೊಡುವ ವ್ಯವಸ್ಥೆ ಜಾರಿಗೊಳಿಸುತ್ತೇವೆ. ಇದರಿಂದ ಖಚಿತವಾಗಿ ಮೃತಪಟ್ಟವರ ಸಂಖ್ಯೆ ದಾಖಲಾಗುತ್ತದೆ ಎಂದು ಅನಿಲ್ ಕ್ರಿಸ್ಟಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT