ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜಗಳ ಮಿಲನೋತ್ಸವ...

Last Updated 6 ಅಕ್ಟೋಬರ್ 2014, 8:43 IST
ಅಕ್ಷರ ಗಾತ್ರ

ಮೈಸೂರು: ವೈಭವದ ಜಂಬೂಸವಾರಿ ಶನಿವಾರ ಮುಗಿದ ಬೆನ್ನಲ್ಲೇ ಇಲ್ಲಿಯ ಅರಮನೆಯ ಆವರಣದಲ್ಲಿ ಗಜಪಡೆಯ ಮಿಲನ ಮಹೋತ್ಸವ ನಡೆಯಿತು. ಈ ಮೂಲಕ ಯಶಸ್ವಿಯಾದ ಜಂಬೂಸವಾರಿಯನ್ನು ಗಜಪಡೆ ವಿಜಯೋತ್ಸವ ಆಚರಿಸಿದೆ.

ಇದೆಲ್ಲ ಶುರುವಾಗಿದ್ದು ಜಂಬೂಸವಾರಿ ನಡೆದ ಮೇಲೆ. ಜಂಬೂಸವಾರಿ ನಡೆಯುವ ದಾರಿಯುದ್ದಕ್ಕೂ ವಿಶೇಷ ಕುಸುರೆಯನ್ನು ಆನೆಗಳಿಗೆ ನೀಡಲಾಗಿತ್ತು. ಅಂದರೆ, ಉತ್ತಮ ದರ್ಜೆಯ ಅವಲಕ್ಕಿ, ಗ್ಲುಕೋಸ್, ಹಸಿಹುಲ್ಲು, ತೆಂಗಿನಕಾಯಿ, ಬೆಲ್ಲವನ್ನು ಕಟ್ಟಿಕೊಡಲಾಗುತ್ತಿತ್ತು. ಅವು ವಾಪಸಾದ ಮೇಲೂ ಕೊಡಲು ವ್ಯವಸ್ಥೆಗೊಳಿಸಲಾಗಿತ್ತು. ಇದಕ್ಕೂ ಮೊದಲು ಜಂಬೂಸವಾರಿಯ ದಣಿವು ನೀಗಲಿ, ಮೈನೋವು ಕಡಿಮೆಯಾಗಲಿ ಎನ್ನುವ ಕಾರಣಕ್ಕೆ ಎಲ್ಲ ಆನೆಗಳಿಗೆ ಬಿಸಿನೀರಿನ ಸ್ನಾನ ಮಾಡಿಸಲಾಯಿತು. ಆಮೇಲೆ ವಿಶೇಷ ಕುಸುರೆಯ ಜತೆಗೆ, ಹಸಿಹುಲ್ಲು ಹಾಗೂ ಆಲದ ಸೊಪ್ಪನ್ನು ನೀಡಲಾಯಿತು. ಇದರೊಂದಿಗೆ ಆಗಸ್ಟ್ 14ರಂದು ಮೈಸೂರಿಗೆ ಬಂದ ದಿನದಿಂದ ಹಿಡಿದು ಜಂಬೂಸವಾರಿಯ ದಿನದವರೆಗೂ ನಿರಂತರವಾಗಿ ಪೌಷ್ಟಿಕ ಆಹಾರ ನೀಡಲಾಗುತ್ತದೆ.

ಉತ್ತಮ ಆಹಾರ, ಆರೈಕೆಯ ಪರಿಣಾಮ ಆನೆಗಳು ‘ಹೀಟ್‌’ಗೆ ಬರುತ್ತವೆ. ಆಮೇಲೆ ‘ಕ್ರಾಸಿಂಗ್‌’ಗೆ ಹಾತೊರೆಯುತ್ತವೆ. ಹೀಗಾಗಿ, ಶನಿವಾರ ಆನೆಗಳ ಮಿಲನ ನಡೆದುದು ಆಕಸ್ಮಿಕವಲ್ಲ. ಆನೆಗಾಡಿ ಎಳೆದಿದ್ದ 48 ವರ್ಷದ ‘ಅಭಿಮನ್ಯು’ ಶನಿವಾರ ರಾತ್ರಿ ಮೊದಲಿಗೆ ತನ್ನ ಪಕ್ಕದಲ್ಲಿದ್ದ 59 ವಯಸ್ಸಿನ ‘ವರಲಕ್ಷ್ಮೀ’ಯೊಂದಿಗೆ ಕೂಡಿಕೊಂಡ. ನಂತರ 58 ವಯಸ್ಸಿನ ಮೇರಿಯೊಂದಿಗೆ ಸರಸವಾಡಿದ. ಇದಕ್ಕೆ ಅಡ್ಡ ಬಂದ ‘ಗಜೇಂದ್ರ’ನನ್ನು ತನ್ನ ದಂತದಿಂದ ತಿವಿದು ಹತ್ತಿರ ಬರದಂತೆ ನೋಡಿಕೊಂಡ. ಆಮೇಲೆ ಶನಿವಾರ ರಾತ್ರಿಯಿಡೀ ವರಲಕ್ಷ್ಮೀ’ ಹಾಗೂ ‘ಮೇರಿ’ಯನ್ನು ಮಲಗಲು ಬಿಡಲೇ ಇಲ್ಲ. ಈ ಸಂಗತಿಯನ್ನು ಅಲ್ಲಿಯ ಮಾವುತರು ಹಾಗೂ ಕಾವಾಡಿಗಳು ಹೇಳಿ ಮುಸಿ ಮುಸಿ ನಕ್ಕರು.

ಭಾನುವಾರವು ಅದೇ ‘ಮೂಡ್‌’ನಲ್ಲಿದ್ದ ಅಭಿಮನ್ಯು ಮತ್ತೆ ವರಲಕ್ಷ್ಮೀ ಹತ್ತಿರ ಸುಳಿದಾಡಿ, ಮೇಲೇರಲು ಯತ್ನಿಸಿದ. ಜಂಬೂಸವಾರಿಯಲ್ಲಿ ಸಾಗಿದ್ದಕ್ಕೋ ಅಭಿಮನ್ಯುವಿನ ಬಿಡದ ತುಂಟಾಟಕ್ಕೋ ಸುಸ್ತಾಗಿದ್ದ ‘ವರಲಕ್ಷ್ಮೀ’ ಸಹಕರಿಸಲಿಲ್ಲ. ಇನ್ನೆರಡು ದಿನಗಳಿಗೆ ಕೊಡಗು ಜಿಲ್ಲೆಯ ತಿತಿಮತಿ ಶಿಬಿರಕ್ಕೆ ತೆರಳುವ ಮುನ್ನ ವರಲಕ್ಷ್ಮೀಯೊಂದಿಗೆ ಮತ್ತೆ ಸರಸವಾಗಲಿ ಎನ್ನುವ ದೂರಾಲೋಚನೆಗೆ ಅಭಿಮನ್ಯು ಮರಳಿ ಯತ್ನ ಮಾಡುತ್ತಲೇ ಇದ್ದ. ಕೊನೆಗೂ ಅವನು ಯಶಸ್ವಿಯಾಗಿದ್ದು ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ. ಇದರಿಂದ ಆನೆ ಗಾಡಿ ಎಳೆದು ಅಭಿಮನ್ಯು ಸುಸ್ತಾಗಿ ನಿಂತ ಎನ್ನುವ ಸುದ್ದಿಯನ್ನೂ ಅಲ್ಲಗಳೆದ.

‘ಜಂಬೂ ಸವಾರಿ ಮೆರವಣಿಗೆಯಲ್ಲಿ ಸಂಗೀತ ಕಛೇರಿ ನಡೆಸಿಕೊಡುವ ಗಾಡಿಯನ್ನು ಎಳೆದೊಯ್ಯುತ್ತಿದ್ದ  ಅಭಿಮನ್ಯು, ಹೈವೇ ವೃತ್ತ ತಲುಪುವಷ್ಟರಲ್ಲಿ ಸುಸ್ತಾಗಿ ನಿಂತ ಎನ್ನುವುದೆಲ್ಲ ಸುಳ್ಳು. 14 ಆಸನಗಳ ದೊಡ್ಡ ಗಾಡಿಯನ್ನು ಬನ್ನಿಮಂಟಪ ವೃತ್ತದ ಬಳಿ ತಿರುಗಿಸುವುದು ಕಷ್ಟ ಎನ್ನುವ ಕಾರಣಕ್ಕೆ ಹೈವೇ ವೃತ್ತದಲ್ಲಿಯೇ ನಿಲ್ಲಿಸಿದೆವು. ಆದರೆ, ಆನೆಗಾಡಿಯ ಕಬ್ಬಿಣದ ಪೈಪ್‌ ಕಾಲಿಗೆ ಉಜ್ಜುತ್ತಿರಲಿಲ್ಲ. ಕಳೆದ ವರ್ಷ ಹಾಗೆ ಆಗಿದ್ದರಿಂದ ಕಾಲಿಗೆ ಗಾಯವಾಗಿ ಹುಣ್ಣಾಗಿತ್ತು. ಇದಕ್ಕಾಗಿ ಗಾಡಿಯ ಸೈಡ್ ಬಾರ್‌ ಅನ್ನು ‘ಯು’ ಶೇಪ್‌ಗೆ ನೀಡಲಾಗಿದೆ. ಇದಕ್ಕೂ ಮೊದಲು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ದಸರಾದಲ್ಲಿ ಅಭಿಮನ್ಯು ಭಾಗವಹಿಸಿದ್ದ. ಅರ್ಜುನನ ಬದಲು ಅಂಬಾರಿ ಹೊರುವ ಆನೆ ಅಭಿಮನ್ಯು. ಕಾಡಾನೆ ಹಿಡಿಯಲು, ಹುಲಿ, ಸಿಂಹ ಹಿಡಿಯುವಾಗ ಅಭಿಮನ್ಯು ಹೆದರದೆ ಮುನ್ನುಗ್ಗುತ್ತಾನೆ’ ಎನ್ನುವ ವಿವರ ನೀಡಿದರು ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ. ಕರಿಕಾಳನ್.

ಹೀಗೆ, ದಸರಾ ಮಹೋತ್ಸವ ಆನೆಗಳ ಮಿಲನಕ್ಕೆ ಅವಕಾಶ ಮಾಡಿಕೊಡುವುದರ ಜತೆಗೆ, ಗರ್ಭ ಧರಿಸುವುದಕ್ಕೂ ಅವಕಾಶ ನೀಡುತ್ತಿದೆ. ‘ಪೌಷ್ಟಿಕ ಆಹಾರದ ಜತೆಗೆ ಹೆಚ್ಚು ಶ್ರಮವಿಲ್ಲದ ಕಾರಣ ಆನೆಗಳು ‘ಹೀಟ್‌’ಗೆ ಬರುವುದು ಸಾಮಾನ್ಯ. ಅರ್ಜುನ ಕೂಡಾ ಹೀಟ್‌ಗೆ ಬಂದಿದ್ದಾನೆ’ ಎಂದು ಆನೆ ವೈದ್ಯಾಧಿಕಾರಿ ಡಾ.ನಾಗರಾಜ್ ಹೇಳಿದರು.

‘ಆಗಸ್ಟ್‌ ಮೊದಲ ವಾರದಲ್ಲಿ ದುಬಾರೆ ಶಿಬಿರದಲ್ಲಿ ‘ವಿಜಯಾ’ ಆನೆ ಮರಿ ಹಾಕಿತು. ಇದು 2 ವರ್ಷಗಳ ಹಿಂದೆ ದಸರಾದಲ್ಲಿ ಪಾಲ್ಗೊಂಡಿತ್ತು. ಆಗ ನಡೆದ ಮಿಲನದ ಪರಿಣಾಮ ಗರ್ಭ ಧರಿಸಿತ್ತು. ಆನೆಗಳು 18ರಿಂದ 22 ತಿಂಗಳವರೆಗೆ ಗರ್ಭ ಧರಿಸುತ್ತವೆ. ಈ ಬಾರಿ ನಡೆದ ಆನೆಗಳ ಮಿಲನದಿಂದ ಮುಂದಿನ ವರ್ಷ ಹೆಣ್ಣಾನೆಯೊಂದು ಗರ್ಭ ಧರಿಸುವುದು ಗ್ಯಾರಂಟಿ’ ಎಂದು ಖುಷಿಯಾಗಿ ಹೇಳಿದರು ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT