ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೀತಾ ಘೋಷಕ್ಕೆ ಸಾವಿರಾರು ಕಂಠಗಳು!

Last Updated 19 ಜನವರಿ 2011, 8:30 IST
ಅಕ್ಷರ ಗಾತ್ರ

ಮೈಸೂರು: ಗೀತಾ ಗೀತಾ ಭಗವದ್ಗೀತಾ, ನಾವೆಲ್ಲರೂ ಸೇರೋಣ; ಭಗವದ್ಗೀತೆ ಹೇಳೋಣ, ವಿಶ್ವಮಾತಾ; ಭಗವದ್ಗೀತಾ-ಹೀಗೆ ಸಾವಿರಾರು ಕಂಠಗಳು ಒಂದೇ ಬಾರಿಗೆ ಘೋಷ ಮಾಡುತ್ತಿದ್ದವು. ಇದನ್ನು ಕೇಳುವುದು ಮತ್ತು ನೋಡುವುದು ರೋಮಾಂಚಕಾರಿಯಾಗಿತ್ತು.

ನಗರದ ಶ್ರೀಚಾಮರಾಜ ಅರಸು ಬೋರ್ಡಿಂಗ್ ಶಾಲಾ ಮೈದಾನದ ಮೂಲೆ ಮೂಲೆಗಳಿಂದ ‘ಗೀತಾ ಗೀತಾ ಭಗವದ್ಗೀತಾ’ ಘೋಷಣೆ ಮೊಳಗುತ್ತಿತ್ತು. ಸಾವಿರಾರು ವಿದ್ಯಾರ್ಥಿಗಳು ಏಕಕಂಠದಲ್ಲಿ ಘೋಷಣೆ ಕೂಗುತ್ತಿದ್ದರೆ ಹಿರಿಯರು ಪುಳಕಗೊಳ್ಳುತ್ತಿದ್ದರು. ಸತತ ಮೂರೂವರೆ ಗಂಟೆಗಳ ಕಾಲ ಅಲ್ಲಿ ‘ಭಗವದ್ಗೀತೆ..ಭಗವದ್ಗೀತೆ...ಭಗವದ್ಗೀತೆ’.

ಇಂತಹ ಅಪರೂಪದ ಸನ್ನಿವೇಶಕ್ಕೆ ಕಾರಣವಾಗಿದ್ದು ಮೈಸೂರು ಜಿಲ್ಲೆಯ ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಶ್ರೀ ಸೋಂದಾ ಸ್ವರ್ಣವಲ್ಲೆ ಮಹಾಸಂಸ್ಥಾನ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀ ಭಗವದ್ಗೀತಾ ಅಭಿಯಾನ ಪ್ರಯುಕ್ತ ಮೈಸೂರು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವದ್ಗೀತಾ ಸಮರ್ಪಣಾ ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಮಕ್ಕಳು, ಶಿಕ್ಷಕರು ಅಲ್ಲದೇ ಆಸಕ್ತ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಸೇರಿದ್ದರು.

ವೇದಿಕೆಯ ಎರಡು ಬದಿಯಲ್ಲಿಯೂ ಆಯ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ಕುಳಿತುಕೊಳ್ಳಲು ಅವಕಾಶ ಮಾಡಿ ಕೊಡಲಾಗಿತ್ತು. ಅವರು ಉಳಿದವರಿಗೆ ಭಗವದ್ಗೀತೆಯನ್ನು ಹಾಡುವುದಕ್ಕೆ ಮಾರ್ಗದರ್ಶನ ನೀಡಿದರು. ವೇದಿಕೆ ಮುಂದೆ ಇದ್ದ ಸಾವಿರಾರು ವಿದ್ಯಾರ್ಥಿಗಳು ಭಗವದ್ಗೀತಾ ಪುಸ್ತಕ ನೋಡುತ್ತಾ ಗಟ್ಟಿ ಸ್ವರದಲ್ಲಿ 10 ನಿಮಿಷಗಳ ಕಾಲ ಶ್ರೀ   ಭಗವದ್ಗೀತೆಯ 14 ಮತ್ತು 15 ನೇ ಅಧ್ಯಾಯವನ್ನು ಏಕಕಂಠದಲ್ಲಿ ಹಾಡಿದರು. ಅವರೊಂದಿಗೆ ಶಿಕ್ಷಕ ವೃಂದ, ಹಿರಿಯ ನಾಗಕರಿಕರು, ಗಣ್ಯರು ಧ್ವನಿಗೂಡಿಸಿದರು.

ಸಮವಸ್ತ್ರ ತೊಟ್ಟಿದ್ದ ವಿದ್ಯಾರ್ಥಿಗಳು ಸರಿಯಾಗಿ 10.30 ಕ್ಕೆ ಕೈಯಲ್ಲಿ ಭಗವದ್ಗೀತಾ ಪುಸ್ತಕ, ನೀರಿನ  ಬಾಟಲ್ ಹಿಡಿದು ಆಸೀನರಾಗಿದ್ದರು. ತಾವು ಕಂಠಪಾಠ ಮಾಡಿದ ಅಧ್ಯಾಯನವನ್ನು ಎಲ್ಲರೂ ಒಟ್ಟಿಗೆ ಹಾಡಲು ಕಾತರಿಸುತ್ತಿದ್ದರು.

ಎಸ್.ತೇಜಸ್ವಿನಿ ಬಂಡಿಪಾಳ್ಯ ಶ್ರೀ ಗುರುಕೃಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆ ತಂದೆ ಕೃಷಿ ಕಾರ್ಮಿಕ, ತಾಯಿ ಮನೆಯಲ್ಲಿಯೇ ಇದ್ದಾರೆ. ಆದರೆ ಈಕೆ ಭಗವದ್ಗೀತೆಯನ್ನು ಕಂಠಪಾಠ ಮಾಡಿದ್ದು ಅದನ್ನು ಹಾಡಲು ಖುಷಿಯಿಂದಲೇ ಆಗಮಿಸಿದ್ದಳು. ಈಕೆಯನ್ನು ಮಾತನಾಡಿದಾಗ ‘ನಮಗೆ ಪ್ರತಿ ದಿನ ಮಧ್ಯಾಹ್ನ 3 ರಿಂದ 4 ಗಂಟೆ ವರೆಗೆ ಶಾಲೆಯಲ್ಲಿ ಟೇಪ್ ರೆಕಾರ್ಡರ್ ಹಾಕಿ ಕಂಠಪಾಠ ಮಾಡಿಸುತ್ತಿದ್ದರು. ನಾವು 15 ಮಂದಿ ಕಲಿತಿದ್ದೇವೆ. ನಾನೂ ಖುಷಿಯಾಗಿಯೇ ಭಗವದ್ಗೀತೆಯನ್ನು ಕಂಠಪಾಠ ಮಾಡಿದ್ದೇನೆ. ಆದರೆ ಅರ್ಥ ಗೊತ್ತಿಲ್ಲ’ ಎಂದು ಮುಗ್ಧವಾಗಿಯೇ ಹೇಳಿದರು.

ವೇದಿಕೆ ಮುಂಭಾಗ ಅಲಂಕೃತ ಶ್ರೀ ಕೃಷ್ಣನ ವಿಗ್ರಹವನ್ನು ಇಡಲಾಗಿತ್ತು. ಇದು ಎಲ್ಲರ ಗಮನವನ್ನು ಸೆಳೆಯಿತು. ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡುವಾಗ ‘ಗಂಡು ಮಕ್ಕಳೆಲ್ಲ ಶ್ರೀಕೃಷ್ಣರಂತೆಯೂ, ಹೆಣ್ಣು ಮಕ್ಕಳು ಗೀತಾ ಮಾತೆಯಂತೆ ಕಾಣಿಸುತ್ತಿದ್ದಾರೆ’ ಎಂದು ಬಣ್ಣಿಸಿದರು. ಆಗ ಇಡೀ ಸಭಾಂಗಣ ಚಪ್ಪಾಳೆ ಮಯವಾಗಿತ್ತು.

ಇದೇ ಸಮಾರಂಭದಲ್ಲಿ ಮಕ್ಕಳಿಗೆ ಭಗವದ್ಗೀತೆ ಪುಸ್ತಕವನ್ನು ವಿತರಿಸಲಾಯಿತು. ನಂತರದಲ್ಲಿ ವಿದುಷಿ ಕೃಪಾ ಫಡಕೆ ಅವರಿಂದ ಗೀತಾಮೃತದುಹೇ ನಮಃ ನೃತ್ಯ ರೂಪಕವನ್ನು ಪ್ರದರ್ಶಿಸಲಾಯಿತು. ವೇದಿಕೆ ಪ್ರವೇಶ ದ್ವಾರದಲ್ಲಿ ವಿಶ್ವ ಮತ್ತು ದೇಶದ ವಿವಿಧ ಭಾಷೆಗಳಿಗೆ ತರ್ಮುಮೆಗೊಂಡಿರುವ ಭಗವದ್ಗೀತೆಗಳನ್ನು ಪ್ರದರ್ಶಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT