ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಮಳಿಗೆಗೆ ನಿಧಾನವೇ ಪ್ರಧಾನ

Last Updated 9 ಸೆಪ್ಟೆಂಬರ್ 2017, 8:37 IST
ಅಕ್ಷರ ಗಾತ್ರ

ಮೈಸೂರು: ದಸರಾ ಅಂಗವಾಗಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮೈದಾನದಲ್ಲಿ ನಿರ್ಮಿಸುವ ಮಳಿಗೆಗಳಿಗೆ ಈ ವರ್ಷ ಸ್ಪಂದನೆಯೇ ಇಲ್ಲವಾಗಿದೆ. ಕೇವಲ 35 ಸಂಸ್ಥೆಗಳು ಮಾತ್ರ ಮಳಿಗೆ ನಿರ್ಮಿಸಲು ಅರ್ಜಿ ಸಲ್ಲಿಸಿವೆ.

ಪ್ರತಿ ವರ್ಷ ವಸ್ತುಪ್ರದರ್ಶನ ಪ್ರಾಧಿಕಾರ ಮೈದಾನದಲ್ಲಿ ದಸರೆಗೂ ಮುನ್ನವೇ ಸರ್ಕಾರಿ ಮಳಿಗೆಗಳು ನಿರ್ಮಾಣಗೊಂಡಿರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡುತ್ತದೆ. ಆದರೆ, ದಸರೆ ಉದ್ಘಾಟನೆಯ ನಂತರವೇ ಮಳಿಗೆಗಳು ಮೇಲೇಳುತ್ತವೆ.

ಸಾರ್ವಜನಿಕರಿಗೆ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲು, ವಿವಿಧ ಕ್ಷೇತ್ರಗಳ ಅರಿವು ಮೂಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು, ಜಿಲ್ಲಾ ಪಂಚಾಯಿತಿಗಳು ಮಳಿಗೆಗಳನ್ನು ನಿರ್ಮಿಸುತ್ತವೆ. ಇದಕ್ಕಾಗಿ ಪ್ರಾಧಿಕಾರದ ಆವರಣದಲ್ಲಿ ಸಾಕಷ್ಟು ಜಾಗವೂ ಇದೆ. ಆದರೆ, ಪ್ರತಿ ವರ್ಷ ಮಳಿಗೆ ನಿರ್ಮಿಸಲು ಅರ್ಜಿ ಸಲ್ಲಿಸುವುದರಿಂದ ಹಿಡಿದು ನಿರ್ಮಿಸುವವರೆಗೂ ವಿಳಂಬವೇ ಪ್ರಧಾನವಾಗಿರುತ್ತದೆ.

ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ: ಸೆ. 19ರೊಳಗೆ ಎಲ್ಲ ಮಳಿಗೆಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ 3 ಸುತ್ತಿನ ಸಭೆಗಳನ್ನು ಈಗಾಗಲೇ ನಡೆಸಿದ್ದಾರೆ. ಸೆ. 10ರೊಳಗೆ ಮಳಿಗೆ ನಿರ್ಮಾಣ ಆರಂಭಗೊಳ್ಳದೆ ಇದ್ದಲ್ಲಿ ಮಳಿಗೆಯನ್ನೇ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

14 ರಾಜ್ಯ ಸರ್ಕಾರ, 2 ಕೇಂದ್ರ ಸರ್ಕಾರ, 16 ನಿಗಮ ಮಂಡಳಿಗಳು, 3 ಜಿಲ್ಲಾ ಪಂಚಾಯಿತಿಗಳು ಅರ್ಜಿ ಸಲ್ಲಿಸಿವೆ. ಈ ಪೈಕಿ ರಾಜ್ಯ ಸರ್ಕಾರದ 9 ಹಾಗೂ ನಿಗಮ ಮಂಡಳಿಗಳ 3 ಮಳಿಗೆಗಳ ನಿರ್ಮಾಣ ಆರಂಭವಾಗಿದೆ. ಮಿಕ್ಕಂತೆ 23 ಮಳಿಗೆಗಳ ನಿರ್ಮಾಣ ಇನ್ನೂ ಆರಂಭಗೊಂಡಿಲ್ಲ. ಜಿಲ್ಲಾಧಿಕಾರಿ ತಿಳಿಸಿರುವಂತೆ ಗಡುವಿಗೆ ಕೇವಲ 1 ದಿನ ಬಾಕಿ ಇದೆ.

ಕಳೆದ ವರ್ಷ 69 ಮಳಿಗೆಗಳು ಇಲ್ಲಿದ್ದವು. ಈ ವರ್ಷ 35 ಅರ್ಜಿ ಮಾತ್ರ ಸಲ್ಲಿಕೆಯಾಗಿದ್ದು, ಪೂರ್ಣಗೊಳ್ಳುವ ಸಂಖ್ಯೆ ತಿಳಿದಿಲ್ಲ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ವರ್ಷ ಖುದ್ದಾಗಿ ಪತ್ರ ಬರೆದಿದ್ದರೂ ಸಂಸ್ಥೆಗಳಿಂದ ಸ್ಪಂದನೆಯೇ ಇಲ್ಲದಂತಾಗಿದೆ ಎಂದು ಪ್ರಾಧಿಕಾರದ ಸಿಇಒ ಶಶಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರವು ನೀತಿಗಳನ್ನು ಬಿಗಿಗೊಳಿಸಿದೆ. ಟೆಂಡರ್‌ ಪದ್ಧತಿ ಇರುವುದರಿಂದ ಈ ರೀತಿ ಆಗುತ್ತಿದೆ. ಅಲ್ಲದೇ, ಅನೇಕ ಸಂಸ್ಥೆಗಳಿಗೆ ಹಣದ ಕೊರತೆ ಇರುತ್ತದೆ. ಇದರಿಂದ ಮಳಿಗೆ ನಿರ್ಮಾಣ ವಿಳಂಬವಾಗುತ್ತಿದೆ. ಈಗಿನ ಮಳಿಗೆ ನಿರ್ಮಾಣದ ಪ್ರಗತಿ ಗಮನಿಸಿದರೆ ಶೇ 80ರಷ್ಟು ಮಳಿಗೆಗಳು ಸೆ. 19ರೊಳಗೆ ನಿರ್ಮಾಣ ಆಗಬಹುದು ಎಂಬ ವಿಶ್ವಾಸವಿದೆ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT