ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಖಾಲಿ: ಸಾಯುತ್ತಿವೆ ಮೀನು!

ಬೇಸಿಗೆಯಲ್ಲಿ ಕೆರೆಕೋಡಿ ಕಾಮಗಾರಿ
Last Updated 23 ಏಪ್ರಿಲ್ 2013, 6:55 IST
ಅಕ್ಷರ ಗಾತ್ರ

ಸಾಲಿಗ್ರಾಮ: ಒಂದೆಡೆ ಮಳೆಯಿಲ್ಲ. ಇನ್ನೊಂದೆಡೆ ಕೆರೆಯಲ್ಲಿ ಇದ್ದ ನೀರೂ ಇಲ್ಲ. ಕಾಮಗಾರಿ ನೆಪದಲ್ಲಿ ಕೆರೆಕೋಡಿ ಒಡೆದು ಇದ್ದಬದ್ದ ನೀರನ್ನೆಲ್ಲಾ ಬರಿದು ಮಾಡಿರುವ ಪರಿಣಾಮ ಪರಿಸ್ಥಿತಿ ಬಿಗಡಾಯಿಸಿದೆ.

ಹೌದು. ಕೆ.ಆರ್.ನಗರದ ಮಂಡೂರು ಗ್ರಾಮದ ಹುಣಸೇಕಟ್ಟೆಯಲ್ಲಿ ಈ ಸ್ಥಿತಿ ನಿರ್ಮಾಣವಾಗಿದೆ. ವರುಣನ ಅವಕೃಪೆಯಿಂದ ಜಾನುವಾರುಗಳಿಗೂ ಕುಡಿಯಲು ನೀರಿಲ್ಲ ಎಂದು ರೈತ ಸಮುದಾಯ ಪರಿತಪ್ಪಿಸುವ ಈ ದಿನಗಳಲ್ಲಿ ಕಾಮಗಾರಿ ನೆಪದಲ್ಲಿ ಕೆರೆ ಕೋಡಿ ಒಡೆಸಿರುವ ಪರಿಣಾಮ ಸಂಗ್ರಹವಾಗಿದ್ದ ನೀರು ಪೋಲಾಗಿದ್ದು, ಜಾನುವಾರುಗಳು ನೀರಿಲ್ಲದೇ ಪರಿತಪಿಸುತ್ತಿವೆ. ಇರುವ ನೀರಿನಲ್ಲಿಯೇ ಜೀವ ಹಿಡಿದುಕೊಂಡಿದ್ದು ಮೀನುಗಳು ಸತ್ತು ಹಕ್ಕಿಗಳಿಗೆ ಆಹಾರವಾಗಿವೆ.

ಹುಣಸೇಕಟ್ಟೆ ಕೆರೆಯಲ್ಲಿ ಹೆಚ್ಚಾದ ನೀರು ಕೋಡಿಯ ಮೂಲಕ ಹರಿದು ಹೋಗುತ್ತಿತ್ತು. ಈ ನೀರನ್ನು ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೇಸಾಯ ಮಾಡಲು ಸರಬರಾಜು ಮಾಡಿ ಉಳಿದ ನೀರನ್ನು ಹಾರಂಗಿ ನಾಲೆಗೆ ಬಿಡಲಾಗುತ್ತಿತ್ತು.

ಈ ನಾಲೆಯ ಕೊನೆ ಭಾಗದ ರೈತರಿಗೆ ಬೇಸಾಯ ಮಾಡಲು ನೀರು ಒದಗಿಸುವ ಯಾೀಜನೆಯ ರೂಪಿಸುವಂತೆ ಶಾಸಕ ಸಾ.ರಾ.ಮಹೇಶ್ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ ಮೇರೆಗೆ  ರೂ. 70ಲಕ್ಷ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಿ 2010ರಲ್ಲಿ ರೈತರು ಬೇಸಾಯ ಮಾಡಲು ನೀರು ಸಿಗುವಂತೆ ಮಾಡಲಾಗಿತ್ತು.

ಕೆರೆಯಲ್ಲಿ ಹೆಚ್ಚು ಹೂಳು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಒಂದು ವರ್ಷದ ಹಿಂದೆಯೇ ರೂ. 28 ಲಕ್ಷ ಹಣದಲ್ಲಿ ಹೂಳು ತೆಗೆಯಲು ಟೆಂಡರ್ ಕರೆಯಲಾಗಿತ್ತು. ಮಂಡ್ಯ ಜಿಲ್ಲೆಯ ಗುತ್ತಿಗೆದಾರರೊಬ್ಬರು ಟೆಂಡರ್ ಮೂಲಕ ಕಾಮಗಾರಿ ಪಡೆದುಕೊಂಡಿದ್ದರೂ ಕಾಮಗಾರಿ ಮಾಡಿರಲಿಲ್ಲ.

ಆದರೆ, ಈಗ ಹುಣಸೇಕಟ್ಟೆ ಕೆರೆಯಲ್ಲಿ ಹೂಳು ತೆಗೆಯುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕೆರೆ ಕೋಡಿ ಒಡೆದು ನೀರು ಪೋಲು ಮಾಡಲಾಗಿದೆ. ಇದರಿಂದ ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಂತೆ ಆಗಿದೆ ಎಂದು ದೂರುತ್ತಾರೆ ಮುಂಡೂರು ಗ್ರಾಮದ ರೈತರು.

`ಹುಣಸೇಕಟ್ಟೆ ಕೆರೆಯಲ್ಲಿ ಮೀನು ಬೇಸಾಯ ಮಾಡಲು ಒಂದು ಲಕ್ಷಕ್ಕೂ ಅಧಿಕ ಬೆಲೆಯ ಮೀನುಗಳನ್ನು ಕೆರೆಯಂಗಳದಲ್ಲಿ ಬಿಟ್ಟಿದ್ದೆವು. ಈಗ ಕೋಡಿ ಒಡೆದು ನೀರನ್ನು ಪೋಲು ಮಾಡಿದ ಮೇರೆಗೆ ಮೀನು ಸತ್ತಿವೆ. ಇದರಿಂದ ನಮಗೆ ತುಂಬಾ ನಷ್ಟವಾಗಿದೆ' ಎಂದು ಹುಣಸೇಕಟ್ಟೆ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ಇಲಾಖೆಯಿಂದ ಗುತ್ತಿಗೆ ಪಡೆದು ಕೊಂಡಿರುವ ಜೆಸಿಬಿ ಸೀನೇಗೌಡ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT