ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ ಬಾಯ್ ಗಳಿಗೆ ಕ್ರಿಕೆಟ್ ಪಾಠ!

Last Updated 26 ಸೆಪ್ಟೆಂಬರ್ 2013, 9:51 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಕಳೆದ ವರ್ಷ ಆರಂಭಿಸಿರುವ ತರಬೇತಿ ಅಕಾಡೆಮಿಯ ಆಟಗಾರರಿಗೆ ಈಗ ಹೊಸದೊಂದು ಅನುಭವ.

ಗಂಗೋತ್ರಿ ಗ್ಲೇಡ್ಸ್ ನಲ್ಲಿ ನಡೆಯುತ್ತಿರುವ ಲೀಸ್ಟ್ ‘ಎ‘ ಟೆಸ್ಟ್ ಪಂದ್ಯದಲ್ಲಿ ಭಾರತ ‘ಎ‘ ಮತ್ತು ವೆಸ್ಟ್ ಇಂಡೀಸ್ ‘ಎ‘ ತಂಡಗಳ ಆಟಗಾರರ ಸಾಮೀಪ್ಯದಿಂದ ಕಲಿಯುವ ಅವಕಾಶ ಅವರಿಗೆ ಸಿಕ್ಕಿದೆ. 14 ವರ್ಷದೊಳಗಿನ 20 ಹುಡುಗರಿಗೆ ಬಾಲ್ ಬಾಯ್ ಆಗಿ ಕಾರ್ಯ ನಿರ್ವಹಿಸುವ ಅವಕಾಶ ಸಿಕ್ಕಿದೆ. ಇದಲ್ಲದೇ ಪಂದ್ಯದ ಆರಂಭಕ್ಕೂ ಮುನ್ನ ಮತ್ತು ದಿನದಾಟ ಮುಗಿದ ನಂತರ ತಂಡಗಳು ನಡೆಸುವ ತಾಲೀಮಿನಲ್ಲಿಯೂ ಭಾಗವಹಿಸುವ ಮತ್ತು ಅದನ್ನು ನೋಡಿ ಕಲಿಯುವ ಅವಕಾಶ ಅವರದ್ದಾಗಿದೆ.

ಬ್ಯಾಟ್ಸ್ ಮನ್ ಗಳು ಬೌಂಡರಿ ಹೊಡೆದಾಗ ಇಬ್ಬರು, ಮೂವರು ಹುಡುಗರು ಪೈಪೋಟಿ ಮಾಡಿ ಚೆಂಡನ್ನು ಹೆಕ್ಕಿ ಮೈದಾನದೊಳಗೆ ಎಸೆಯುತ್ತಾರೆ. ಚೇತೇಶ್ವರ್ ಪೂಜಾರ, ಅಶೋಕ ದಿಂಡಾ, ಕಿರಣ್‌ ಪೊವೆಲ್ ಅವರಿಂದ ಬ್ಯಾಟಿಂಗ್ ಟಿಪ್ಸ್ ಪಡೆಯಲೂ ಪ್ರಯತ್ನಿಸುತ್ತಾರೆ. ಆದರೆ ಈ ಬಾರಿ  ಬಹುತೇಕ ಶಾಲೆಗಳಲ್ಲಿ ಅರ್ಧ ವಾರ್ಷಿಕ ಪರೀಕ್ಷೆಗಳು ಆರಂಭವಾಗಿರುವುದರಿಂದ ಬಾಲ್ ಬಾಯ್ ಆಗಿರುವವರ ಸಂಖ್ಯೆ ಕಡಿಮೆಯಿದೆ. ಕಳೆದ ಡಿಸೆಂಬರ್ ನಲ್ಲಿ ರಣಜಿ ಪಂದ್ಯ ನಡೆದಾಗ 40ಕ್ಕೂ ಹೆಚ್ಚು ಹುಡುಗರಿದ್ದರು.

‘ನಮ್ಮ ಕೆಎಸ್ ಸಿಎ ಅಕಾಡೆಮಿಯ ಹುಡುಗರಿಗೆ ಇದೂ ಒಂದು ಉತ್ತಮ ಅವಕಾಶ. ಅವರಿಗೆ ಇದರಿಂದ ಸಾಕಷ್ಟು ಕಲಿಯುವ ಅವಕಾಶವೂ ಸಿಗುತ್ತದೆ. ಅವರ ಕ್ರಿಕೆಟ್ ಜ್ಞಾನವೂ ಹೆಚ್ಚುತ್ತದೆ. ಆದ್ದರಿಂದ ಅವರಿಗೆ ಹೆಚ್ಚು ಅವಕಾಶ ನೀಡಲಾಗಿದೆ. ಪರೀಕ್ಷೆಗಳು ಇಲ್ಲದ ಶಾಲೆಯ ಮಕ್ಕಳು ಭಾಗವಹಿಸಿದ್ದಾರೆ‘ ಎಂದು ಮೈಸೂರು ವಲಯ ನಿಮಂತ್ರಕ ಎಸ್. ವಿಜಯಪ್ರಕಾಶ್ ಹೇಳುತ್ತಾರೆ.

ಗಂಗೋತ್ರಿ ಗ್ಲೇಡ್ಸ್ ನತ್ತ ಜನಮನ!
ಮೈಸೂರು: ಕ್ರಿಕೆಟ್ ಆಟದ ಆಕರ್ಷಣೆಯ ಅಂತದ್ದು. ಎಲ್ಲ ಕೆಲಸವನ್ನೂ ಬಿಟ್ಟು ಬಂದು ಕೂರುವಂತಹ ಚುಂಬಕ ಶಕ್ತಿ ಈ ಆಟಕ್ಕೆ ಇದೆ. ಅದರಲ್ಲೂ ‘ಬಿ’ ದರ್ಜೆಯ ನಗರಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ತಾರೆಗಳ ಆಟವನ್ನು ನೋಡುವ ಅವಕಾಶ ಸಿಕ್ಕರೆ?

ಹೌದು, ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಅಂಗಳದಲ್ಲಿ ಬುಧವಾರ ಆರಂಭವಾದ ಭಾರತ ‘ಎ’ ಮತ್ತು ವೆಸ್ಟ್ ಇಂಡೀಸ್ ‘ಎ‘ ತಂಡಗಳ ನಡುವಿನ ಲೀಸ್ಟ್ ‘ಎ’ ಟೆಸ್ಟ್ ಪಂದ್ಯದ ಮೊದಲ ದಿನ ಸೇರಿದ ಕ್ರಿಕೆಟ್ ಪ್ರೇಮಿಗಳ ದಂಡು ಇದಕ್ಕೆ ಸಾಕ್ಷಿ.

ಕಳೆದ ಎರಡು ದಶಕಗಳಲ್ಲಿ ರಣಜಿ ಪಂದ್ಯಗಳನ್ನು ನೋಡಿರುವ ಇಲ್ಲಿಯ ಜನರಿಗೆ ಈಗ ಅಂತರರಾಷ್ಟ್ರೀಯ ದರ್ಜೆಯ ಪಂದ್ಯ ನೋಡುವ ಸದವಕಾಶ ಸಿಕ್ಕಿದೆ. ಅದರಲ್ಲೂ ಉಚಿತ ಪ್ರವೇಶವಿರುವ ಕಾರಣ, ಬಹಳಷ್ಟು ಜನರು ಮೈದಾನಕ್ಕೆ ಲಗ್ಗೆ ಇಡುತ್ತಿದ್ದಾರೆ.

ಬುಧವಾರ ಕೆಲಸದ ದಿನವಾದರೂ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಸುಮಾರು ಎರಡು ಸಾವಿರ ಜನರು ಸೇರಿದ್ದರು. ಮಾನಸಗಂಗೋತ್ರಿಯ ವಿವಿಧ ವಿಭಾಗಗಳ ವಿದ್ಯಾರ್ಥಿ–ವಿದ್ಯಾರ್ಥಿನಿಯರೂ ಬಹಳಷ್ಟು ಸಂಖ್ಯೆಯಲ್ಲಿದ್ದರು.

ವಿಶೇಷ ಆಹ್ವಾನಿತರು ಮತ್ತು ಗಣ್ಯ ವ್ಯಕ್ತಿಗಳಿಗಾಗಿ ಎರಡು ಗ್ಯಾಲರಿಗಳನ್ನು ಹೊರತುಪಡಿಸಿ ಉಳಿದೆ ಎಲ್ಲ ಗ್ಯಾಲರಿಗಳನ್ನೂ ಸಾರ್ವಜನಿಕರಿಗೆ ಮುಕ್ತಗೊಳಿಸ ಲಾಗಿದೆ. ದಿನದಾಟದ ಮೊದಲ ಅವಧಿಯಲ್ಲಿ ಜನರ ಸಂಖ್ಯೆ ಕಡಿಮೆಯಿತ್ತು. ಹೊತ್ತು ಸರಿದಂತೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT