ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯದ ನಡುವೆಯೇ ಪಿಡಿಒ ಸಮಸ್ಯೆ ಅನಾವರಣ

Last Updated 28 ಫೆಬ್ರುವರಿ 2012, 7:50 IST
ಅಕ್ಷರ ಗಾತ್ರ

ಮೈಸೂರು: `ಸಾರ್ ನೀವು ಹಾಗಂತೀರಿ, ಆದರೆ ನಮ್ಮ ಕಷ್ಟ ನಮಗೇ ಗೊತ್ತು. ಒಬ್ಬರು ಒಂದು ಪಂಚಾಯಿತಿ ನೋಡಿಕೊಳ್ಳೋದೇ ಕಷ್ಟ..ಹೀಗಿರುವಾಗ ಎರಡು ಗ್ರಾಮ ಪಂಚಾಯಿತಿಗಳ ಉಸ್ತುವಾರಿ ಇನ್ನೂ ಕಷ್ಟ..ಅಗತ್ಯ ಅನುದಾನ ಇಲ್ಲದೆ ಪರದಾಡುತ್ತಿದ್ದೇವೆ~..

-ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ `ಭಯ~ದ ನಡುವೆಯೇ ಹೀಗೆ ಸಮಸ್ಯೆ ಅನಾವರಣಗೊಳಿಸಿದವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ನಾಗೇಗೌಡ. ಜನಪ್ರತಿನಿಧಿಗಳನ್ನು ಭಯ ದಿಂದಲೇ ಎದುರಿಸುತ್ತ ಒಂದಿಷ್ಟು ವಾಸ್ತವ ಸಂಗತಿಗಳನ್ನು ಬಹಿರಂಗ ಪಡಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಂಸದ ಎಚ್.ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ `ತಾಲ್ಲೂಕು ಮಟ್ಟದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ~ಯಲ್ಲಿ ಮಾತನಾಡಿದರು.

`ಕಸ ಗುಡಿಸುವುದು, ಚರಂಡಿ ಸ್ವಚ್ಛ ಮಾಡಿಸುವುದು, ಕುಡಿಯುವ ನೀರು ಸರಬರಾಜು, ಕಂದಾಯ ಸಂಗ್ರಹ, ವಿದ್ಯುತ್ ಅವಘಡ, ರಸ್ತೆ ದುರಸ್ತಿ, ಅನುದಾನ ಹಂಚಿಕೆ, ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹೀಗೆ ಎಲ್ಲವನ್ನೂ ಪಿಡಿಒಗಳು ನಿಭಾಯಿಸಬೇಕು~  -ಇದು ಜಿ.ಪಂ. ಕಾರ್ಯದರ್ಶಿ ಗೋಪಾಲ್ ಅವರ ಹುಕುಂ. ಇದಕ್ಕೆ ದನಿಗೂಡಿಸಿದ ಸಂಸದ ಎಚ್.ವಿಶ್ವನಾಥ್, `ಪಿಡಿಒಗಳು ಎಂದರೆ ಗ್ರಾಮ ಪಂಚಾಯಿತಿಯ ತಂದೆ-ತಾಯಿ ಇದ್ದಂತೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸಬೇಕು~ ಎಂದು ನಗುತ್ತಲೇ ಸೂಚಿಸಿದರು.

ಅಧಿಕಾರಿಗಳ ತರಾಟೆ, ಶಾಸಕ ಎಂ. ಸತ್ಯನಾರಾಯಣ ಅವರ ಸಿಟ್ಟು, ಸಂಸದರ ತಮಾಷೆಯಿಂದ ಕೂಡಿದ ಗಂಭೀರ ಪ್ರಶ್ನೆಗಳಿಗೆ ಮೈಸೂರು ತಾಲ್ಲೂಕು ಪಿಡಿಒಗಳು ಕೆಲಕಾಲ ಸುಸ್ತಾದರು. ತಾ.ಪಂ. ಸದಸ್ಯರ ಆಕ್ರೋಶಕ್ಕೆ ಮಹಿಳಾ ಪಿಡಿಒಗಳು ಕಂಗಾಲಾದರು! `ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಏನು ಗೊತ್ತು ನಮ್ಮ ಸಂಕಷ್ಟ, ಏನೇ ಆದರೂ ಎಲ್ಲಕ್ಕೂ ನಮ್ಮನ್ನು ಹೊಣೆ ಮಾಡುತ್ತಾರೆ. ವಾಸ್ತವಾಂಶ ತಿಳಿಯದೇ ಕೆಲಸ ಮಾಡಿ ಎನ್ನುತ್ತಾರೆ~ ಎಂದು ಹಿಂಬದಿಯಲ್ಲೇ ಕುಳಿತು ಗೊಣಗಿಕೊಂಡರು.

ಸಭೆಯಲ್ಲಿ ಹಾಜರಿದ್ದ ತಾಲ್ಲೂಕು ಪಂಚಾಯಿತಿ ಸದಸ್ಯರು ಕಾರ್ಯಕ್ರಮ ದುದ್ದಕ್ಕೂ ಪಿಡಿಒಗಳು, ಅಧಿಕಾರಿಗಳ ಮೇಲೆ ಹರಿಹಾಯ್ದರು. ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ಬೇಗನೆ ಇತ್ಯರ್ಥಗೊಳಿಸುವಂತೆ ಆದೇಶಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಎಚ್.ವಿಶ್ವನಾಥ್, `ಕುಡಿಯುವ ನೀರು, ಜಾನುವಾರುಗಳಿಗೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ಸಮಸ್ಯೆಯನ್ನು ನಿಭಾಯಿಸಬೇಕು. ಕೇಂದ್ರದಿಂಧ ಕುಡಿಯುವ ನೀರಿಗೆ 701 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಆಗಿದೆ. ಆ ಹಣವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಆದರೆ, ಕುಡಿಯುವ ನೀರಿನ ವಿಷಯದಲ್ಲಿ ಜಿ.ಪಂ. ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಬೇಸಿಗೆಯಲ್ಲಿ ಕುಡಿಯುವ ನೀರಿನ ಜೊತೆಗೆ ಜಾಂಡೀಸ್, ರಾಸುಗಳಿಗೆ ಕಾಲುಬಾಯಿ ಜ್ವರ ಸೇರಿದಂತೆ ಹಲವಾರು ಕಾಯಿಲೆಗಳು ಉದ್ಭವಿಸುತ್ತವೆ. ಆರೋಗ್ಯಾಧಿಕಾರಿ ಮತ್ತು ಪಶು ಇಲಾಖೆ ವೈದ್ಯಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಬೇಸಿಗೆಯಲ್ಲಿ ಜಾತ್ರೆಗಳು ಹೆಚ್ಚಾಗಿ ನಡೆಯುವುದರಿಂದ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಶಾಸಕ ಎಂ.ಸತ್ಯನಾರಾಯಣ, ತಾ.ಪಂ. ಅಧ್ಯಕ್ಷೆ ಎಂ.ಸಿ.ಗೀತಾ, ಉಪಾಧ್ಯಕ್ಷೆ ನೇತ್ರಾವತಿ ವೆಂಕಟೇಶ್, ಜಿ.ಪಂ. ಕಾರ್ಯದರ್ಶಿ ಗೋಪಾಲ್, ಕೇಂದ್ರ ಪುರಸ್ಕೃತ ಯೋಜನೆ ಸದಸ್ಯರಾದ ಮೋಹನ್‌ಕುಮಾರ್, ಪ್ರಭು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ, ಮಾಜಿ ತಾ.ಪಂ. ಅಧ್ಯಕ್ಷೆ ಮಂಜುಳಾ ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT