ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗ ನಿಯಂತ್ರಣಕ್ಕೆ ಕ್ಷಿಪ್ರ ಕಾರ್ಯಪಡೆ

Last Updated 4 ಜುಲೈ 2017, 7:03 IST
ಅಕ್ಷರ ಗಾತ್ರ

ಮೈಸೂರು: ಡೆಂಗಿ ಜ್ವರ ಉಲ್ಬಣಿಸಿರುವ ಕಾರಣ ಜಿಲ್ಲಾ ಆರೋಗ್ಯ ಇಲಾಖೆಯು ಒಟ್ಟು 18 ‘ಡೆಂಗಿ ಕ್ಷಿಪ್ರ ಕಾರ್ಯಪಡೆ’ ತಂಡ ರಚಿಸಿ ರೋಗ ನಿಯಂತ್ರಣಕ್ಕೆ ಮುಂದಡಿ ಇಟ್ಟಿದೆ.
ನಗರ ವ್ಯಾಪ್ತಿಗೆ ರಚಿಸಿರುವ 9 ತಂಡಗಳಿಗೆ ನಜರಬಾದ್‌ನಲ್ಲಿರುವ ಆರೋಗ್ಯ ಇಲಾಖೆ ಕಚೇರಿ ಆವರಣದಲ್ಲಿ ಸೋಮವಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಬಸವರಾಜು ಚಾಲನೆ ನೀಡಿದರು.

ಪ್ರತಿ ತಂಡದಲ್ಲಿ ಒಬ್ಬ ಹಿರಿಯ ಅಧಿ ಕಾರಿ ಹಾಗೂ ನಾಲ್ವರು ಪುರುಷರ ಆರೋಗ್ಯ ಸಹಾಯಕರು ಇರುತ್ತಾರೆ. ನಗರದಲ್ಲಿ 27 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಮೂರು ಆರೋಗ್ಯ ಕೇಂದ್ರಗಳ ವ್ಯಾಪ್ತಿಗೆ ಒಂದು ತಂಡ ನಿಯೋಜಿಸಲಾಗಿದೆ. ವಾರದಲ್ಲಿ ಎರಡು ದಿನ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಅಲ್ಲಿನ ವೈದ್ಯಾಧಿಕಾರಿ, 3–4 ಮಹಿಳಾ ಆರೋಗ್ಯ ಸಹಾಯಕರು, 4 ಮಂದಿ ಆಷಾ ಕಾರ್ಯಕರ್ತರೊಂದಿಗೆ ಸೇರಿ ಮನೆ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದೆ. ಎರಡು ತಂಡಗಳಿಗೆ ಒಂದು ವಾಹನದಂತೆ 4 ವಾಹನ ನೀಡಲಾಗಿದೆ.

ಅಲ್ಲದೆ, ಮನೆಯ ಒಳಗೆ ಹಾಗೂ ಹೊರಗೆ ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಿವೆ. ಸೊಳ್ಳೆ ಬೆಳೆಯಲು ಪ್ರಮುಖ ಕಾರಣವಾಗುವ ನೀರು ನಿಂತಿರುವ ಸ್ಥಳಗಳನ್ನು ಪರಿಶೀಲಿಸಿ ನೀರು ಖಾಲಿ ಮಾಡಲಿದೆ. ಜ್ವರದ ಲಕ್ಷಣ ಕಂಡು ಬಂದರೆ ಅಂಥವರಿಗೆ ಪ್ರಾಥಮಿಕ ಚಿಕಿತ್ಸೆ ನೀಡುವುದು, ಔಷಧ ಒದಗಿಸುವ ಕೆಲಸ ಮಾಡಲಿದೆ. ಜೊತೆಗೆ ರಕ್ತದ ಮಾದರಿ ಪಡೆಯಲಾಗುತ್ತದೆ. ಜ್ವರ ಉಲ್ಬಣಿಸಿದ್ದರೆ ಅಂಥವರನ್ನು ಆಸ್ಪತ್ರೆಗೆ ದಾಖಲಿಸಲು ಶಿಫಾರಸು ಮಾಡಲಾ ಗುತ್ತದೆ. ಡೆಂಗಿ ನಿಯಂತ್ರಣಾಧಿಕಾರಿ ಡಾ.ಚಿದಂಬರ ಸಾರಥ್ಯದಲ್ಲಿ ಒಂದು ಉಸ್ತುವಾರಿ ತಂಡ ರಚಿಸಲಾಗಿದೆ.

‘ಹಿಂದೆ ಮೂರು ತಂಡಗಳು ಮಾತ್ರ ಇದ್ದವು. ಜ್ವರದ ಸಮಸ್ಯೆ ಉಲ್ಬಣಿಸಿರು ವುದರಿಂದ ಈಗ ಅದನ್ನು 18 ತಂಡ ಗಳಿಗೆ ಹೆಚ್ಚಿಸಲಾಗಿದೆ. ನಗರದಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಪುರುಷ ಆರೋಗ್ಯ ಸಹಾಯಕರನ್ನು ಬೇರೆ ತಾಲ್ಲೂಕುಗಳಿಂದ ಕರೆಸಿಕೊಳ್ಳಲಾಗಿದೆ. ಡೆಂಗಿ ನಿಯಂತ್ರಣಕ್ಕೆ ಇನ್ನೂ ಐದಾರು ತಿಂಗಳು ನಿಗಾ ಇಡಲಾಗುವು ದು’ ಎಂದು ಡಾ.ಚಿದಂಬರ ತಿಳಿಸಿದರು.

‘ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ರೋಗ ನಿಯಂತ್ರಣಕ್ಕೆ ಮುಂದಡಿ ಇಟ್ಟಿದ್ದೇವೆ. ತೆರೆದ ಚರಂಡಿ ಸಮಸ್ಯೆ ಇದ್ದರೆ ಪಾಲಿಕೆ ಗಮನಕ್ಕೆ ತರಲಾಗುವುದು. ಮೊದಲ ದಿನ ಸುಮಾರು 2,250 ಮನೆಗಳಲ್ಲಿ ಈ ತಂಡಗಳು ಸಮೀಕ್ಷೆ ನಡೆಸಿವೆ’ ಎಂದರು.

ಮೈಸೂರು ತಾಲ್ಲೂಕಿನಲ್ಲಿ ಎರಡು ಡೆಂಗಿ ಕ್ಷಿಪ್ರ ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ. ಅದರಲ್ಲಿ ಒಂದು ತಂಡ ಜಯಪುರ ಹೋಬಳಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಇದನ್ನು ಸೂಕ್ಷ್ಮಪ್ರದೇಶ ವೆಂದು ಪರಿಗಣಿಸಲಾಗಿದೆ. ನಂಜನ ಗೂಡು ತಾಲ್ಲೂಕಿನಲ್ಲಿ ಮೂರು ತಂಡ ಗಳು ಇವೆ. ಎರಡು ತಂಡ ಗ್ರಾಮಾಂತರ ಪ್ರದೇಶದಲ್ಲಿ ಒಂದು ತಂಡ ನಗರ ಪ್ರದೇ ಶದಲ್ಲಿ ಡೆಂಗಿ ನಿಯಂತ್ರಣಕ್ಕೆ ಶ್ರಮಿಸಲಿವೆ. ಇನ್ನುಳಿದ ಐದು ತಾಲ್ಲೂಕುಗಳಿಗೆ ತಲಾ ಒಂದು ತಂಡ ರಚಿಸಲಾಗಿದೆ.

ಜಿಲ್ಲೆಯಲ್ಲಿ 279 ಡೆಂಗಿ ಪ್ರಕರಣ
ಮೈಸೂರು: ಜಿಲ್ಲೆಯಲ್ಲಿ ಈ ವರ್ಷ ಇದುವರೆಗೆ 279 ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಅದರಲ್ಲಿ 166 ಪ್ರಕರಣಗಳು ನಗರದಲ್ಲಿ ಹಾಗೂ 113 ಪ್ರಕರಣಗಳು ಗ್ರಾಮಾಂತರ ಪ್ರದೇಶದಲ್ಲಿ ವರದಿಯಾಗಿವೆ.

‘ಖಾಸಗಿ ಆಸ್ಪತ್ರೆಗಳ ವೈದ್ಯರನ್ನೂ ಒಳಗೊಂಡಿದ್ದ ಡೆತ್ ಆಡಿಟ್ ಸಮಿತಿ ನಡೆಸಿದ ಪರಿಶೀಲನೆ ವೇಳೆ ಜಿಲ್ಲೆಯಲ್ಲಿ ಡೆಂಗಿಯಿಂದ ಒಂದು ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ವರದಿಯನ್ನು ಆರೋಗ್ಯ ಇಲಾಖೆಗೆ ಕಳುಹಿಸಿಕೊಡಲಾಗಿದೆ. ಅಲ್ಲದೆ, ಇಬ್ಬರ ಸಾವಿನ ಪ್ರಕರಣದಲ್ಲಿ ನೆಗೆಟಿವ್‌ ವರದಿ ಬಂದಿದ್ದರೂ ಡೆಂಗಿ ಜ್ವರದ ಶಂಕೆ ಇದೆ. ಹೀಗಾಗಿ, ಮಣಿಪಾಲ ಆಸ್ಪತ್ರೆಗೆ ರಕ್ತದ ಮಾದರಿ ಕಳಿಸಿಕೊಟ್ಟಿದ್ದೇವೆ’ ಎಂದು ಡೆಂಗಿ ನಿಯಂತ್ರಣಾಧಿಕಾರಿ ಡಾ.ಚಿದಂಬರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT