ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಾಂಗಣದಲ್ಲಿ ಟಿಪ್ಪು ಜಯಂತಿ ನಿಷೇಧ

Last Updated 4 ನವೆಂಬರ್ 2017, 9:00 IST
ಅಕ್ಷರ ಗಾತ್ರ

ಕೆ.ಆರ್.ನಗರ: ಜಿಲ್ಲಾಡಳಿತದ ಆದೇಶದಂತೆ ಒಳಾಂಗಣದಲ್ಲಿಯೇ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ರುದ್ರಮುನಿ ಸೂಚಿಸಿದರು. ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಶುಕ್ರವಾರ ನಡೆದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕು ಆಡಳಿತದಿಂದ ಎಲ್ಲ ಮಹನೀಯರ ಜಯಂತಿ ಆಚರಿಸಿ ದಂತೆ ಅದ್ಧೂರಿಯಾಗಿ ಆಚರಣೆ ಮಾಡಲು ಶಾಸಕ ಸಾ.ರಾ.ಮಹೇಶ್ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಮೊದಲನೇ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಜತೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ, ರೇಡಿಯೋ ಮೈದಾನದಲ್ಲಿ ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಗಿತ್ತು. ಆಹ್ವಾನ ಪತ್ರಿಕೆ ಕೂಡ ಮುದ್ರಿಸಲಾಗಿದೆ.

ಆದರೆ, ಮೈಸೂರಿನಲ್ಲಿ ಈಚೆಗೆ ನಡೆದ ಜಿಲ್ಲಾಧಿಕಾರಿ ಸಭೆಯಲ್ಲಿ ಶಾಂತಿ, ಸುವ್ಯವಸ್ಥೆ ದೃಷ್ಟಿಯಿಂದ ಹೊರಾಂಗಣ ದಲ್ಲಿ ಟಿಪ್ಪು ಜಯಂತಿ ಆಚರಣೆಗೆ ನಿಷೇಧ ಹೇರಲಾಗಿದೆ. ಈ ಬಗ್ಗೆ ತಾಲ್ಲೂಕು ಆಡಳಿತಕ್ಕೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಹೇಳಿದರು.

ಈ ಹಿಂದೆ ನಿಗದಿಯಾದಂತೆ ನ.10ರಂದು ಬೆಳಿಗ್ಗೆ 10ಕ್ಕೆ ಪಟ್ಟಣದಲ್ಲಿ ಖಾಲಿ ಇರುವ ಸಮುದಾಯ ಭವನದ ಒಳಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಕಾರ್ಯಕ್ರಮ ನಡೆಯ ಲಿದೆ. ತಾಲ್ಲೂಕು ಆಡಳಿತವೇ ದೊಡ್ಡ ಬ್ಯಾನರ್ ಹಾಕುತ್ತದೆ. ಇದನ್ನು ಹೊರತುಪಡಿಸಿ ಪುರಸಭೆ ಅನುಮತಿ ಇಲ್ಲದೇ ಬೇರೆ ಯಾರೂ ಬ್ಯಾನರ್ ಹಾಕಬಾರದು ಎಂದು ಸೂಚಿಸಿದರು.

ಇದಕ್ಕೂ ಮೊದಲು ಮೂಳೆತಜ್ಞ ಮಹಬೂಬ್ ಖಾನ್ ಮಾತನಾಡಿ, ಎಲ್ಲ ಮಹನೀರ ಜಯಂತಿ ಆಚರಣೆ ಮಾಡಿದಂತೆ ಟಿಪ್ಪು ಜಯಂತಿ ಕೂಟ ಆಚರಣೆ ಮಾಡಬಹುದಿತ್ತು. ಆದರೆ, ಜಿಲ್ಲಾಡಳಿತದ ನಿರ್ಧಾರದಿಂದ ಬೇಸರ ವಾಗಿದೆ. ಆದರೂ ಅನುಸರಿಸಿಕೊಂಡು ಹೋಗಬೇಕಾಗಿದೆ ಎಂದರು.

ಟಿಪ್ಪು ಸುಲ್ತಾನ್ ಟ್ರಸ್ಟ್ ಅಧ್ಯಕ್ಷ ಸೈಯದ್ ಜಾಬೀರ್ ಮಾತನಾಡಿ, ಚುನಾವಣೆ ಹತ್ತಿರ ಬಂದಿದೆ. ಇಂತಹ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯಬಾರದೆಂಬ ಉದ್ದೇಶದಿಂದ ಒಳಾಂಗಣದಲ್ಲಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಇದಕ್ಕೆ ನಮ್ಮದೇನು ಅಭ್ಯಂತರ ಇಲ್ಲ. ಆದರೆ, ಜಯಂತಿ ಪ್ರಯುಕ್ತ ಕವ್ವಾಲಿ ಮಾಡಲು ಅವಕಾಶ ನೀಡಬೇಕು ಎಂದು ಕೋರಿದರು.

ಎಚ್.ಕೆ.ಜಿ.ಎನ್ ಅಧ್ಯಕ್ಷ ಮಜೀದ್ ಮಾತನಾಡಿ, ಪಟ್ಟಣದ ಮುಸ್ಲಿಂ ಬ್ಲಾಕ್ ಕೂಡ ಒಳಾಂಗಣ ಇದ್ದಂತೆ ಇದೆ. ಮುಸ್ಲಿಂ ಬ್ಲಾಕಿನಲ್ಲಿ ಆಚರಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ತಹಶೀಲ್ದಾರ್ ಮಹೇಶಚಂದ್ರ, ಸಿಪಿಐ ಬಸವರಾಜು ಮಾತನಾಡಿದರು. ಹಲವು ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT