ಭಾನುವಾರ, ಆಗಸ್ಟ್ 25, 2019
21 °C
ಹಿರಿಯರ ಉದ್ದಿಮೆ ಮುಂದುವರಿಸಿದ ಕುಟುಂಬ

ಬದುಕು ಅರಳಿಸಿದ ಸುಣ್ಣದ ಬಟ್ಟಿ

Published:
Updated:
Prajavani

ಬಸವನಬಾಗೇವಾಡಿ: ಹೊಸ ಮನೆಗಳು, ಕಟ್ಟಡಗಳ ಗೋಡೆಗಳ ಅಂದ ಹೆಚ್ಚಿಸುತ್ತಿದ್ದ ಸುಣ್ಣಕ್ಕೆ ಕೆಲ ವರ್ಷಗಳ ಹಿಂದೆ ಬೇಡಿಕೆ ಹೆಚ್ಚಿತ್ತು. ಇದನ್ನು ಅರಿತ ಇಲ್ಲಿನ ಹರೀಶ ಮೂಠೇಕರ ಅವರು ಸುಣ್ಣ ತಯಾರಿಸುವ ಘಟಕವನ್ನೇ ಉದ್ದಿಮೆಯನ್ನಾಗಿ ಮಾಡಿಕೊಂಡಿದ್ದಾರೆ.

ಮನೆಯ ಹಿರಿಯರು ಸುಣ್ಣದ ಬಟ್ಟಿಯಲ್ಲಿ ಸುಣ್ಣ ತಯಾರಿಸುತ್ತಿರುವುದನ್ನು ಹರೀಶ ಬಾಲ್ಯದಿಂದಲೇ ಗಮನಿಸುತ್ತಿದ್ದರು. 10ನೇ ತರಗತಿ ನಂತರ ವಿದ್ಯಾಭ್ಯಾಸ ನಿಲ್ಲಿಸಿ ಹಿರಿಯರ ಉದ್ದಿಮೆಯನ್ನೇ ಮುಂದುವರೆಸಿಕೊಂಡು ಹೋಗಲು ನಿರ್ಧರಿಸಿದರು.

20 ವರ್ಷಗಳ ಹಿಂದೆ ಪಟ್ಟಣದ ಮುದ್ದೇಬಿಹಾಳ ರಸ್ತೆಯಲ್ಲಿನ ಮಿನಿ ವಿಧಾನಸೌಧದ ಮುಂಭಾಗದ ರಸ್ತೆಯ ಪಕ್ಕದಲ್ಲಿ ಸುಣ್ಣದ ಬಟ್ಟಿಯನ್ನು ಆರಂಭಿಸಿದರು.
ಸುಣ್ಣ ತಯಾರಿಕೆಗೆ ಅಗತ್ಯವಿರುವ ಸುಣ್ಣದ ಕಲ್ಲುಗಳನ್ನು ಲೋಕಾಪುರದಿಂದ ತರಿಸಿಕೊಳ್ಳುತ್ತಾರೆ. ಸುಣ್ಣದ ಕಲ್ಲುಗಳೊಂದಿಗೆ ಕಲ್ಲಿದ್ದಲು, ಕಟ್ಟಿಗೆ ಇದ್ದಿಲು, ಕಟ್ಟಿಗೆ ತುಂಡುಗಳನ್ನು ಬಾಯ್ಲರ್‌ನಲ್ಲಿ ಹಾಕಿದ 24 ಗಂಟೆಗಳ ನಂತರ ಸುಣ್ಣ ತಯಾರಾಗುತ್ತದೆ.

1 ಕೆ.ಜಿ ಸುಣ್ಣ ತಯಾರಿಕೆಗೆ ₹12 ಖರ್ಚು ಬರುತ್ತದೆ. ₹15ಕ್ಕೆ ಕೆ.ಜಿಯಂತೆ ಮಾರಾಟವಾಗುತ್ತದೆ. ಸುಣ್ಣದ ವ್ಯಾಪಾರಸ್ಥರು ಇವರ ಬಳಿಗೆ ಬಂದು ಸಗಟು ದರದಲ್ಲಿ ಸುಣ್ಣ ಖರೀದಿಸುತ್ತಾರೆ. ಇವರ ಸುಣ್ಣದ ಬಟ್ಟಿಯಲ್ಲಿ ಒಂದು ಬಾರಿಗೆ 1 ಟನ್ ಸುಣ್ಣ ತಯಾರಾಗುತ್ತದೆ.

‘ಪರ್ಯಾಯ ಉದ್ಯೋಗ ಕಂಡುಕೊಳ್ಳಬೇಕು ಎಂದುಕೊಂಡು ವೀಳ್ಯದೆಲೆಗೆ ಬೇಕಾದ ಸುಣ್ಣ ತಯಾರಿಕೆಗೆ ಮುಂದಾಗಿದ್ದೇವೆ. ಸುಣ್ಣದ ಡಬ್ಬಿಗಳನ್ನು ಖರೀದಿಸಿ ಸುಣ್ಣ ತುಂಬಿ ಮಾರಾಟ ಮಾಡಬೇಕಾಗಿರುವುದರಿಂದ ಚಿಕ್ಕ ಡಬ್ಬಿಗಳ ಖರೀದಿ ದುಬಾರಿಯಾಗುತ್ತಿದೆ. ಡಬ್ಬಿ ತಯಾರಿಕೆ ಘಟಕ ಆರಂಭಿಸಲು ಸುಮಾರು ₹6 ಲಕ್ಷ ಖರ್ಚು ಮಾಡಬೇಕಾಗುತ್ತದೆ’ ಎನ್ನುತ್ತಾರೆ ಹರೀಶ ಅವರ ತಂದೆ ಲಕ್ಷ್ಮಣ.

‘ನಮ್ಮ ಸುಣ್ಣದ ಬಟ್ಟಿ ಮುಂಭಾಗದಲ್ಲೇ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣವಾಗಿದ್ದರಿಂದ 7 ವರ್ಷಗಳಿಂದ ಸುಣ್ಣದ ಬಟ್ಟಿ ಇಳಿಸುವ ಕಾರ್ಯ ಸ್ಥಗಿತಗೊಳಿಸಿದ್ದೇವೆ. ವಿಜಯಪುರದಲ್ಲಿನ ನಮ್ಮ ಮಾವನವರ ಬಟ್ಟಿಯಲ್ಲಿ ತಯಾರಾಗುವ ಸುಣ್ಣ ತಂದು ಮಾರಾಟ ಮಾಡುತ್ತಿದ್ದೇವೆ’ ಎನ್ನುತ್ತಾರೆ ಹರೀಶ ಮೂಠೇಕರ.

ಹಿಂದೆ ದೀಪಾವಳಿ, ದಸರಾ, ಯುಗಾದಿ, ಜಾತ್ರೆ ಸೇರಿದಂತೆ ವಿವಿಧ ದೊಡ್ಡ ಹಬ್ಬಗಳಲ್ಲಿ ಮನೆಯ ಗೋಡೆಗಳನ್ನು ಅಂದಗೊಳಿಸಲು ನಮ್ಮ ಸುಣ್ಣದ ಬಟ್ಟಿಯ ಸುಣ್ಣಕ್ಕೆ ಬೇಡಿಕೆ ಹೆಚ್ಚಿತ್ತು. ಆಗ 50 ಕೆ.ಜಿ ಮಾರಾಟವಾಗುತ್ತಿದ್ದ ಸುಣ್ಣ ಈಗ ಬರಿ 5 ಕೆ.ಜಿ ಮಾರಾಟವಾಗುತ್ತಿದೆ.

‘ನಮ್ಮಂತಹ ಚಿಕ್ಕ ಉದ್ದಿಮೆದಾರರಿಗೆ ಮಾರುಕಟ್ಟೆ ಒದಗಿಸುವುದರೊಂದಿಗೆ ಉದ್ದಿಮೆ ಉಳಿಸಲು ಆರ್ಥಿಕ ಪ್ರೋತ್ಸಾಹ ನೀಡಿದರೆ ನಮ್ಮ ಹಾಗೇ ಸುಣ್ಣದ ಬಟ್ಟಿಯಲ್ಲಿಯೇ ಬದುಕು ಕಟ್ಟಿಕೊಳ್ಳುತ್ತಿರುವ ಕುಟುಂಬಗಳಿಗೆ ಆಸರೆಯಾಗಲಿದೆ’ ಎಂಬ ಅಭಿಪ್ರಾಯ ಹರೀಶ ಅವರದ್ದು.

Post Comments (+)