ನರೇಗಾ ಅಕ್ರಮ: ₨1.11 ಲಕ್ಷ ದಂಡ ವಸೂಲಿಗೆ ಆದೇಶ

7

ನರೇಗಾ ಅಕ್ರಮ: ₨1.11 ಲಕ್ಷ ದಂಡ ವಸೂಲಿಗೆ ಆದೇಶ

Published:
Updated:

ರಾಮನಗರ: ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚೇಗೌಡನ ದೊಡ್ಡಿ ಗ್ರಾಮದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕೈಗೊಂಡ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ನಿಯಮ ಉಲ್ಲಂಘನೆ ಆರೋಪ ಸಾಬೀತಾಗಿದ್ದು, ಒಟ್ಟು ₨ 1,11,733 ದಂಡ ವಸೂಲಿಗೆ ಒಂಬುಡ್ಸ್‌ಮನ್‌ ಕಾರ್ಯಾಲಯವು ಆದೇಶಿಸಿದೆ.

ಗ್ರಾಮದ ಲಿಂಗರಾಜು ಅವರ ಮನೆಯ ಮುಂಭಾಗದಿಂದ ಕೃಷ್ಣ ಎಂಬುವರ ಮನೆಯ ಮುಂಭಾಗದವರೆಗೆ ನರೇಗಾ ಅಡಿ ₨10 ಲಕ್ಷ ಅಂದಾಜು ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ‘ಈ ಕಾಮಗಾರಿಯಲ್ಲಿ ನರೇಗಾ ಉದ್ಯೋಗ ಚೀಟಿ ಹೊಂದಿರುವ ವ್ಯಕ್ತಿಗಳ ಬದಲಿಗೆ ಜೆಸಿಬಿ ಯಂತ್ರಗಳನ್ನು ಬಳಸಿಕೊಳ್ಳಲಾಗಿದೆ. ವಾಸ್ತವ ವೆಚ್ಚಕ್ಕಿಂತ ಹೆಚ್ಚು ಖರ್ಚು ತೋರಿಸಿ ಸರ್ಕಾರಕ್ಕೆ ವಂಚನೆ ಮಾಡಲಾಗಿದೆ. ಇದಲ್ಲದೆ ಪಂಚಾಯಿತಿ ವ್ಯಾಪ್ತಿಯ ಇಂದಿರಾ ನಗರದ ರಸ್ತೆ ನಿರ್ಮಾಣದಲ್ಲಿಯೂ ನಿಯಮ ಉಲ್ಲಂಘನೆಯಾಗಿದೆ’ ಎಂದು ಮಾಹಿತಿಹಕ್ಕು ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ 2017ರ ಮೇ 22ರಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದರು.

ಜಿ.ಪಂ. ಸಿಇಒ ಅವರು ಅರ್ಜಿಯನ್ನು ಜಿಲ್ಲಾ ಒಂಬುಡ್ಸ್‌ಮನ್‌ಗೆ ರವಾನಿಸಿ, ತನಿಖೆಗೆ ಸೂಚಿಸಿದ್ದರು. ಅದರಂತೆ ನರೇಗಾ ಯೋಜನೆಯ ಒಂಬುಡ್ಸ್‌ಮನ್‌ ಡಾ. ವಿಷಕಂಠ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದ್ದರು. ಈ ಸಂದರ್ಭ, ಕೆಂಚೇಗೌಡನದೊಡ್ಡಿಯ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಭಾಗಶಃ ಜೆಸಿಬಿ ಯಂತ್ರಗಳ ಜೊತೆಗೆ ಅಗತ್ಯಕ್ಕಿಂತ ಹೆಚ್ಚು ವೆಚ್ಚ ಮಾಡಿರುವುದು ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಕಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ ಅವರಿಂದ ₨37,244, ಅಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವಯ್ಯ ಅವರಿಂದ ₨37,344 ಹಾಗೂ ಯೋಜನೆಯ ತಾಂತ್ರಿಕ ಸಹಾಯಕ ಎಂಜಿನಿಯರ್‌ ವೆಂಕಟೇಶ್ ಅವರಿಂದ ₨37,245 ಹಣ ವಸೂಲಿಗೆ ಒಂಬುಡ್ಸ್‌ಮನ್‌ ಆದೇಶಿಸಿದ್ದಾರೆ.

ಇಂದಿರಾನಗರ ಗ್ರಾಮದಲ್ಲಿ ರಸ್ತೆ ಕಾಮಗಾರಿ ಆರಂಭಿಸಿ ನಂತರ ತೆಗೆದಿದ್ದ ಎನ್‌ಎಂಆರ್ ಅನ್ನು ರದ್ದುಪಡಿಸಿದ ಆರೋಪದ ಮೇಲೆ ಪಿಡಿಒ ಬಸವರಾಜು ವಿರುದ್ಧ ಕ್ರಮ ಜರುಗಿಸುವಂತೆ ಅವರು ಕನಕಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !