ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿರುವ ಆಲಮಟ್ಟಿ

ಇನ್ನೂ ಆರಂಭಗೊಳ್ಳದ ಸಂಗೀತ ಕಾರಂಜಿ: ₹1.3 ಕೋಟಿ ವೆಚ್ಚದಲ್ಲಿ ದುರಸ್ತಿ
Last Updated 23 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಆಲಮಟ್ಟಿ: ಆಲಮಟ್ಟಿ ಜಲಾಶಯದಿಂದ ದಾಖಲೆಯ 6.7 ಲಕ್ಷ ಕ್ಯುಸೆಕ್ ನೀರು ಬಿಟ್ಟ ಸಂದರ್ಭದಲ್ಲಿ ಸಂಪೂರ್ಣ ಜಲಾವೃತಗೊಂಡಿದ್ದ ಸಂಗೀತ ಕಾರಂಜಿ ಇನ್ನೂ ಆರಂಭಗೊಳ್ಳದ್ದರಿಂದ ಮೊಘಲ್ ಉದ್ಯಾನ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದೆ.

ಆಗಸ್ಟ್ 9 ರಿಂದಲೇ ಸಂಗೀತ ಕಾರಂಜಿ ಬಂದಾಗಿದ್ದು, ಮೊಘಲ್‌ ಉದ್ಯಾನ ಸಮುಚ್ಚಯ ಪ್ರವಾಸಿಗರಿಲ್ಲದೇ ಬೀಕೋ ಎನ್ನುತ್ತಿದೆ. ಮೊಘಲ್‌, ಇಟಾಲಿಯನ್‌, ಫ್ರೆಂಚ್‌ ಉದ್ಯಾನ ಇದ್ದರೂ ಅವುಗಳತ್ತ ಪ್ರವಾಸಿಗರು ಹೆಚ್ಚಾಗಿ ಸುಳಿಯುತ್ತಿಲ್ಲ. ಸಂಗೀತ ಕಾರಂಜಿ ಒಳಗೊಂಡು ವಿವಿಧ ಉದ್ಯಾನಗಳ ಸಮುಚ್ಚಯಕ್ಕೆ ₹20 ಇದ್ದ ಪ್ರವೇಶ ದರವನ್ನು ಸದ್ಯ ₹10ಕ್ಕೆ ಇಳಿಸಲಾಗಿದೆ.

ಟೂರ್ ಸೀಸನ್: ಪ್ರತಿ ವರ್ಷ ನವೆಂಬರ್‌ದಿಂದ ಜನವರಿವರೆಗೆ ಪ್ರವಾಸಿ ಸೀಸನ್ ಇದ್ದು, ರಾಜ್ಯದ ನಾನಾ ಕಡೆಯಿಂದ ಸಹಸ್ರಾರು ಪ್ರವಾಸಿಗರು ಬರುತ್ತಾರೆ. ಉಳಿದ 9 ತಿಂಗಳಲ್ಲಿ ಬರುವ ಪ್ರವಾಸಿಗರಿಗಿಂತಲೂ ಈ ಮೂರು ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಸಂಗೀತ ಕಾರಂಜಿ ಇಲ್ಲದ್ದಕ್ಕೆ ಪ್ರವಾಸೋದ್ಯಮಕ್ಕೆ ಈ ವರ್ಷ ಹೊಡೆತ ಬೀಳುತ್ತಿದೆ. ಸಂಜೆ ಬರುವ ಪ್ರವಾಸಿಗರನ್ನೇ ನಂಬಿ ವಹಿವಾಟು ನಡೆಸುತ್ತಿರುವವರ ಮೇಲೆಯೂ ಪರಿಣಾಮ ಬೀರಿದೆ.

ಹಾಳಾಗಿದ್ದು ಏನೇನು?: ಸಂಗೀತ ಕಾರಂಜಿಯೊಳಗೆ ನೀರು ನಿಂತ ಕಾರಣ ಡಾಲ್ಬಿ ಸ್ಪೀಕರ್‌ಗಳು ಸಂಪೂರ್ಣ ಹಾಳಾಗಿವೆ. ಜೊತೆಗೆ ಲೈಟಿಂಗ್ ಕಂಟ್ರೋಲ್ ಪೆನಾಲ್‌ಗಳು, ಟ್ರಾನ್ಸ್‌ಫಾರ್ಮರ್, ಆರ್‌ಜಿಬಿ ತಂತ್ರಜ್ಞಾನದ ಎಲ್ಇಡಿ ಬಲ್ಬ್‌ಗಳು, ಬೋರ್ಡ್‌, ಕೇಬಲಿಂಗ್ ಸೇರಿದಂತೆ ಬಹುತೇಕ ಎಲೆಕ್ಟ್ರಾನಿಕ್‌ ಉಪಕರಣಗಳು ಹಾಳಾಗಿವೆ.

₹1.3 ಕೋಟಿ ವೆಚ್ಚದಲ್ಲಿ ದುರಸ್ತಿ: ‘ವಿಶೇಷ ಪ್ರಕರಣವೆಂದು ಪರಿಗಣಿಸಿ, ರಿಕ್ವೆಸ್ಟ್ ಫಾರ್ ಪ್ರೊಪೊಸಲ್ (ಆರ್ಎಫ್‌ಟಿ) ಓಪನ್ ಟೆಂಡರ್ ಕರೆಯಲಾಗಿದೆ. ಗುತ್ತಿಗೆದಾರರೇ ಹಾನಿಯ ಸಮೀಕ್ಷೆ ನಡೆಸಿ ,ಸಂಪೂರ್ಣ ದುರಸ್ತಿ ಕೈಗೊಳ್ಳುವ ರೀತಿ ಓಪನ್ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದೂ ಒಂದೆರೆಡು ದಿನದಲ್ಲಿ ಕಾರ್ಯಾದೇಶ ನೀಡಿ ತ್ವರಿತಗತಿಯಲ್ಲಿ ಕಾಮಗಾರಿ ಆದೇಶ ನೀಡಲಾಗುವುದು’ ಎಂದು ಕೆಬಿಜೆಎನ್ಎಲ್ ಮುಖ್ಯ ಎಂಜಿನಿಯರ್ ಆರ್.ಪಿ. ಕುಲಕರ್ಣಿ ತಿಳಿಸಿದರು.

‘ಸಂಗೀತ ಕಾರಂಜಿ ಆಲಮಟ್ಟಿ ಪ್ರವಾಸಿ ಸ್ಥಳಕ್ಕೆ ಮುಕುಟಮಣಿ. ಈಗಾಗಲೇ ತಾತ್ಕಾಲಿಕ ದುರಸ್ತಿ ಕಾರ್ಯ ಆರಂಭಗೊಳಿಸಲಾಗಿದೆ. ದುರಸ್ತಿ ಜೊತೆಗೆ ಸಂಗೀತ ಕಾರಂಜಿಯನ್ನು ಹೊಸ ಆವೃತ್ತಿಗೆ ಅಪ್‌ಗ್ರೇಡ್‌ ಮಾಡಲಾಗುವುದು. ಅಂದಾಜು ₹1.3 ಕೋಟಿ ವೆಚ್ಚವಾಗಲಿದೆ. ಹಾಡಿನ ಥೀಮ್‌ಗಳನ್ನು ಬದಲಾಯಿಸಲಾಗುತ್ತಿದೆ. ಹಗಲು ರಾತ್ರಿ ಕಾಮಗಾರಿ ಕೈಗೊಂಡು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಸಂಗೀತ ಕಾರಂಜಿಯೊಳಗೆ ವೀಕ್ಷಕರು ಕುಳಿತುಕೊಳ್ಳುವ ಗ್ಯಾಲರಿಗೆ ಸಂಪೂರ್ಣವಾಗಿ ಗ್ರಾನೈಟ್ ಅಳವಡಿಸುವ ಕಾರ್ಯವೂ ನಡೆದಿದೆ. ಒಟ್ಟಾರೆ 3,600 ಚದರ ಮೀ. ಮೀಟರ್ ವಿಶಾಲ ಪ್ರದೇಶದಲ್ಲಿ ಗ್ರಾನೈಟ್ ಅಳವಡಿಸಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕವಾಗಿ ₹95 ಲಕ್ಷ ಅನುದಾನ ಬಳಸಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT