ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಹೆಸರಿಗೆ ಸಾಗರ; ಇಲ್ಲೂ ನೀರಿಗೆ ಬರ

ನಗರದ ನಾಗರಿಕರಿಗೆ ವರದಾನವಾಗಿರುವ ಶರಾವತಿ ಹಿನ್ನೀರು
Last Updated 20 ಏಪ್ರಿಲ್ 2020, 17:36 IST
ಅಕ್ಷರ ಗಾತ್ರ

ಸಾಗರ: ಅಪ್ಪಟ ಮಲೆನಾಡು ಎಂಬ ಹಣೆಪಟ್ಟಿ ಹೊತ್ತಿದ್ದರೂ ಬೇಸಿಗೆಯಲ್ಲಿ ಈ ತಾಲ್ಲೂಕಿನ ಹಲವಾರು ಹಳ್ಳಿಗಳಲ್ಲಿ ನೀರಿಗೆ ಬವಣೆ ತಪ್ಪಿದ್ದಲ್ಲ. ಯಥೇಚ್ಛ ಪ್ರಮಾಣದಲ್ಲಿ ಮಳೆಯಾದ ವರ್ಷ ಕೂಡ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಕೊರತೆ ಉಂಟಾಗುವುದು ಸಾಮಾನ್ಯ ಎನ್ನುವಂತಾಗಿದೆ.

ಸಾಗರ ತಾಲ್ಲೂಕಿನ ವಾರ್ಷಿಕ ಮಳೆಯ ಪ್ರಮಾಣಕ್ಕಿಂತ ಕಳೆದ ವರ್ಷ ಶೇ 11ರಷ್ಟು ಹೆಚ್ಚು ಮಳೆಯಾಗಿದೆ. ನೈರುತ್ಯ ಮಳೆಯ ತಿಂಗಳು ಎಂದು ಗುರುತಿಸುವ ಜೂನ್‌ನಿಂದ ಸೆಪ್ಟೆಂಬರ್ ತಿಂಗಳವರೆಗೆ ವಾಡಿಕೆಯಂತೆ 2462 ಮಿ.ಮೀ. ಮಳೆಯಾಗಬೇಕಿತ್ತು. ಆಗಿರುವ ಮಳೆಯ ಪ್ರಮಾಣ 3384 ಮಿ.ಮೀ.

ಕಳೆದ ವರ್ಷ ತಾಲ್ಲೂಕಿನಲ್ಲಿ 102 ಗ್ರಾಮಗಳನ್ನು ನೀರಿನ ಕೊರತೆ ಇರುವ ಗ್ರಾಮಗಳು ಎಂದು ಗುರುತಿಸಲಾಗಿತ್ತು. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಈ ಗ್ರಾಮಗಳಿಗೆ 2859 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ₹ 30 ಲಕ್ಷ ಖರ್ಚು ಮಾಡಲಾಗಿತ್ತು.

ಈ ವರ್ಷ ಇಲ್ಲಿನ ತಾಲ್ಲೂಕು ಪಂಚಾಯಿತಿಯು 30 ಪಂಚಾಯಿತಿ ವ್ಯಾಪ್ತಿಯ 182 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಗುರುತಿಸಿದೆ. ಹೀಗೆ ಕೊರತೆ ಬರಲು ತೆರೆದ ಬಾವಿ ಹಾಗೂ ಕೊಳವೆಬಾವಿಗಳಲ್ಲಿನ ಅಂತರ್ಜಲದ ಮಟ್ಟ ಕುಸಿದಿರುವುದೇ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ.

ಸಾಗರ ತಾಲ್ಲೂಕು ಪಶ್ಚಿಮಘಟ್ಟ ವ್ಯಾಪ್ತಿಗೆ ಬರುತ್ತಿದ್ದು, ಇದನ್ನು ಗುಡ್ಡಗಾಡು ವಲಯ ಎಂದೇ ಗುರುತಿಸಲಾಗಿದೆ. ಇಲ್ಲಿ ಮಳೆಗಾಲದಲ್ಲಿ ಹರಿಯುವ ನೀರನ್ನು ಹಿಡಿದಿಡುವ ದೂರಗಾಮಿ ಯೋಜನೆಗೆ ಒತ್ತು ನೀಡದೆ ಇರುವುದು ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಸಾಂಪ್ರದಾಯಿಕ ಕೃಷಿಯ ಸ್ಥಾನ ಅಲಂಕರಿಸಿದ ಬದಲಾದ ಕೃಷಿಯ ಸ್ವರೂಪ, ಅರಣ್ಯ ನಾಶ, ಭೂ ಒತ್ತುವರಿ, ಜೀವವೈವಿಧ್ಯ ಸಂರಕ್ಷಣೆಯಲ್ಲಿನ ವೈಫಲ್ಯ, ಕೆರೆಗಳ ಅಭಿವೃದ್ಧಿ ಕುರಿತ ನಿರ್ಲಕ್ಷ್ಯ ಹೀಗೆ ಹತ್ತು ಹಲವು ಅಂಶಗಳು ನೀರಿನ ಬವಣೆಗೆ ತನ್ನದೇ ಆದ ಕೊಡುಗೆ ನೀಡುತ್ತಿವೆ.

ಈ ಹಿಂದೆ ಸಾಗರ ನಗರಕ್ಕೆ ನಗರದ ಹೊರವಲಯದಲ್ಲಿನ ಬಸವನಹೊಳೆ ಡ್ಯಾಂ ಮೂಲಕ ನೀರು ಪೂರೈಸಲಾಗುತ್ತಿತ್ತು.

ನಂತರ ಶರಾವತಿ ಹಿನ್ನೀರಿನಿಂದ ನಗರಕ್ಕೆ ನೀರು ತರುವ ಯೋಜನೆ ಕಾರ್ಯಗತಗೊಂಡಿದ್ದು, ನಗರದ ಜನರ ಕುಡಿಯುವ ನೀರಿನ ಬವಣೆಯನ್ನು ಕಡಿಮೆ ಮಾಡಿದೆ.

ಆದರೆ ಈ ಯೋಜನೆ ಕಾರ್ಯಗತಗೊಳ್ಳುವಾಗ ಮಾರ್ಗ ಮಧ್ಯದ ಹಳ್ಳಿಗಳಿಗೆ ನೀರು ಪೂರೈಸಬೇಕು ಎಂಬ ಗ್ರಾಮಸ್ಥರ ಒತ್ತಾಯ ಈವರೆಗೂ ಈಡೇರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT