ನಾಲ್ಕು ಯುದ್ಧಗಳಲ್ಲಿ ಭಾಗಿ; ಸ್ಮರಣಾರ್ಹ

7
ಅವಿಭಜಿತ ವಿಜಯಪುರ ಜಿಲ್ಲೆಯಿಂದ ವಾಯುಪಡೆಗೆ ಸೇರ್ಪಡೆಯಾದ ಮೊದಲ ಅಧಿಕಾರಿ ಗೋಪಾಲ ಕುಲಕರ್ಣಿ

ನಾಲ್ಕು ಯುದ್ಧಗಳಲ್ಲಿ ಭಾಗಿ; ಸ್ಮರಣಾರ್ಹ

Published:
Updated:
Deccan Herald

ಬಸವನಬಾಗೇವಾಡಿ: ಬಾಲ್ಯದಲ್ಲೇ ಕುಟುಂಬ ನಿರ್ವಹಣೆಯ ಹೊಣೆ ಹೊತ್ತು, ಗೆಳೆಯರ ಸಲಹೆಯಂತೆ ವಾಯುಪಡೆ ಸೇರಿದ ತಾಲ್ಲೂಕಿನ ಮಸಬಿನಾಳ ಗ್ರಾಮದ ದಿ.ಗೋಪಾಲ ಕುಲಕರ್ಣಿ ಯುವ ಪೀಳಿಗೆಗೆ ಮಾದರಿ.

ಸೋಮವಾರ (ಅ.8) ವಾಯುಪಡೆ ದಿನಾಚರಣೆ. ಕುಲಕರ್ಣಿಯಂತಹ ಸ್ಮರಣೀಯರು ದಾಖಲಾರ್ಹರು. ಇವರು ವಾಯುಪಡೆ ಸೇರ ಬಯಸುವ ಅವಿಭಜಿತ ವಿಜಯಪುರ ಜಿಲ್ಲೆಯ ಯುವ ಜನಾಂಗಕ್ಕೆ ಪ್ರೇರಣೆ.

ಗೋಪಾಲ ಅವರ ತಂದೆ ಅಂಧರು. ಕುಟುಂಬ ನಿರ್ವಹಿಸುವ ಸಾಮರ್ಥ್ಯ ಇರಲಿಲ್ಲ. ಬಾಲ್ಯದಲ್ಲೇ ಹಲ ತೊಂದರೆಗಳಿಗೆ ಸಿಲುಕಿದ ಕುಲಕರ್ಣಿ ಏಳನೇ ತರಗತಿ ಓದುತ್ತಿರುವಾಗಲೇ, ದುಡಿದು ಕುಟುಂಬಕ್ಕೆ ಆಸರೆಯಾಗಬೇಕು ಎಂದು ಬಾಗಲಕೋಟೆಗೆ ಹೋಗಿದ್ದರು.

‘1942ರಲ್ಲಿ ಸೇನಾ ನೇಮಕಾತಿ ನಡೆಯುತ್ತದೆ ಎಂದು ಗೆಳೆಯರೊಬ್ಬರು ಮಾಹಿತಿ ನೀಡಿದಾಗ, ಹಿತೈಷಿಗಳಿಂದ 50 ಪೈಸೆ ಸಾಲ ಪಡೆದು ಸೈನ್ಯಕ್ಕೆ ಸೇರಬೇಕೆಂದು ಬೆಳಗಾವಿಗೆ ತೆರಳಿದ್ದರು. ಇವರ ಧೈರ್ಯ, ಸಾಮರ್ಥ್ಯ ಅರಿತ ಸೇನಾಧಿಕಾರಿಗಳು ವಾಯುಸೇನೆಗೆ ನೇಮಕ ಮಾಡಿಕೊಂಡಿದ್ದರು. ಅವಿಭಜಿತ ವಿಜಯಪುರ ಜಿಲ್ಲೆಯಿಂದ ವಾಯುಸೇನೆಗೆ ಸೇರಿದ ಮೊದಲಿಗರು ನಮ್ಮ ತಂದೆ’ ಎಂದು ಗೋಪಾಲ ಪುತ್ರ ರಾಜೇಂದ್ರ ಕುಲಕರ್ಣಿ ಹಳೆಯ ನೆನಪುಗಳನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

‘ನಮ್ಮ ತಂದೆ ವಾಯುಪಡೆಗೆ ಸೇರಿದ ಒಂದು ವರ್ಷದಲ್ಲೇ (1943) ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಈಗಿನ ಪಾಕಿಸ್ತಾನದ ಕೊಹಾಟ್ ಗ್ರಾಮಕ್ಕೆ ನಿಯೋಜನೆಗೊಂಡು, 1947ರವರೆಗೆ ಅಲ್ಲಿಯೇ ಕಾರ್ಯ ನಿರ್ವಹಿಸಿದ್ದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೂರು ತಿಂಗಳ ನಂತರ ಭಾರತಕ್ಕೆ ಬಂದ ಗೋಪಾಲ, ವಾಯುಪಡೆಯ ವಿವಿಧ ಪರೀಕ್ಷೆಗಳಲ್ಲಿ ಯಶಸ್ಸು ಕಂಡು, ಫ್ಲೈಯಿಂಗ್‌ ಆಫೀಸರ್‌ ಆಗಿ ಬಡ್ತಿ ಹೊಂದಿದ್ದರು.

1948ರಲ್ಲಿ ಭಾರತ–ಪಾಕಿಸ್ತಾನ ಯುದ್ಧ, 1962ರಲ್ಲಿ ಚೀನಾದೊಂದಿಗಿನ ಯುದ್ಧ, 1965ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ, 1971ರಲ್ಲಿ ಬಾಂಗ್ಲಾ ವಿಮೋಚನಾ ಚಳವಳಿಯಲ್ಲೂ ಭಾಗವಹಿಸಿದ್ದ ಗೋಪಾಲ ಅವರು 1981ರಲ್ಲಿ ನಿವೃತ್ತಿ ಹೊಂದಿದ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು. 2009ರಲ್ಲಿ ನಿಧನರಾದರು.

ತಂದೆಯ ದೇಶ ಸೇವೆಯ ಪ್ರೇರಣೆಯಿಂದ ರಾಜೇಂದ್ರ ಅವರು ಬೆಂಗಳೂರಿನಲ್ಲಿ ಹಿರಿಯ ನಾಗರಿಕರ ನೆಮ್ಮದಿ ಕೇಂದ್ರ, ಉಚಿತ ವೈದ್ಯಕೀಯ ಶಿಬಿರ, ಉದ್ಯೋಗ ಆಧಾರಿತ ತರಬೇತಿ ನೀಡುವುದು ಸೇರಿದಂತೆ ವಿವಿಧ ಸಮಾಜ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !