ಖಾಸಗಿ ಆಸ್ಪತ್ರೆ, ಸಿಜರಿಯನ್‌ಗೆ ಒಲವು

7
ಸಾಮಾನ್ಯ ಹೆರಿಗೆಯಿಂದ ತಾಯಂದಿರ ಆರೋಗ್ಯಕ್ಕೆ ಅನುಕೂಲ; ವೈದ್ಯರ ಸಲಹೆ

ಖಾಸಗಿ ಆಸ್ಪತ್ರೆ, ಸಿಜರಿಯನ್‌ಗೆ ಒಲವು

Published:
Updated:

ರಾಮನಗರ: ಈಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ಆಸ್ಪತ್ರೆಗಳಲ್ಲಿಯೇ ಹೆಚ್ಚಿನ ಹೆರಿಗೆಗಳಾಗುತ್ತಿವೆ. ಅದರಲ್ಲಿಯೂ ಶಸ್ತ್ರಚಿಕಿತ್ಸೆ ಮೂಲಕ ಆಗುವಂತಹ ಹೆರಿಗೆಗಳ ಪ್ರಮಾಣವು ಏರತೊಡಗಿದೆ.

ಜನರಲ್ಲಿ ಆರೋಗ್ಯದ ಕಾಳಜಿಯಲ್ಲಿನ ಬದಲಾವಣೆ ಇದಕ್ಕೆ ಕಾರಣ ಎನ್ನುವುದು ವೈದ್ಯರ ಅಭಿಪ್ರಾಯ. ಖಾಸಗಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತದೆ. ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ ಎನ್ನುವ ಮನೋಭಾವನೆ ಜನರಲ್ಲಿ ಬೆಳೆದಿದೆ. ಹೀಗಾಗಿ ಅಂತಹ ಆಸ್ಪತ್ರೆಗಳತ್ತ ಹೆಚ್ಚು ಆಸಕ್ತಿ ತೋರತೊಡಗಿದ್ದಾರೆ. ಮತ್ತೊಂದೆಡೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಹಾಗೂ ವೈದ್ಯರ ಕೊರತೆ ಇರುವುದೂ ಇದಕ್ಕೆ ಕಾರಣವಾಗಿದೆ.

ಜಿಲ್ಲೆಯ ಉಳಿದ ಮೂರು ತಾಲ್ಲೂಕುಗಳಿಗೆ ಹೋಲಿಸಿದರೆ ಕನಕಪುರದಲ್ಲಿ ಕಳೆದ ಮೂರು ತಿಂಗಳಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಹೆಚ್ಚಿನ ಹೆರಿಗೆಗಳು ಆಗುತ್ತಿವೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಇಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ 12 ಹೆರಿಗೆಗಳು ಮಾತ್ರ ಆಗಿವೆ.

ಕನಕಪುರ ಹಾಗೂ ಮಾಗಡಿ ತಾಲ್ಲೂಕಿನಲ್ಲಿ ಸದ್ಯ ಪ್ರಸೂತಿ ತಜ್ಞರ ಕೊರತೆ ಇದೆ. ಈ ಕಾರಣಕ್ಕೆ ಇಲ್ಲಿ ಸಿಜರಿಯನ್‌ ಹೆರಿಗೆಗಳು ಕಡಿಮೆ ಆಗಿದೆ. ಅಂತಹ ಚಿಕಿತ್ಸೆಯ ಅಗತ್ಯವುಳ್ಳ ಮಂದಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆ. ಇನ್ನೂ ಕೆಲವು ಕಡೆ ಸರ್ಕಾರಿ ವೈದ್ಯರೇ ತಮಗೆ ಪರಿಚಯದ ಆಸ್ಪತ್ರೆಗಳಲ್ಲಿ ಹೆರಿಗೆಗೆ ಶಿಫಾರಸು ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ.

‘ತಾಯಿಯ ಆರೋಗ್ಯದ ದೃಷ್ಟಿಯಿಂದ ಸಾಮಾನ್ಯ ಹೆರಿಗೆ ಉತ್ತಮವಾಗಿದೆ. ಆದರೆ, ಈಚೆಗೆ ಹೆಚ್ಚಿನ ಮಂದಿ ಸಿಜರಿಯನ್‌ ಪ್ರಕ್ರಿಯೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ’ ಎನ್ನುತ್ತಾರೆ ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಆರ್‌.ಎನ್‌.ಲಕ್ಷ್ಮಿಪತಿ.

‘ಗರ್ಭಿಣಿ, ಪೋಷಕರಲ್ಲಿನ ಆತಂಕದ ಕಾರಣ ಇಂದು ಹೆಚ್ಚಿನ ಮಂದಿ ಸಿಜರಿಯನ್‌ ಹೆರಿಗೆಗೆ ಒಲವು ವ್ಯಕ್ತಪಡಿಸುತ್ತಾರೆ. ಆದರೆ ಹಾಗೆ ಮಾಡುವುದರಿಂದ ಅನೇಕ ತೊಂದರೆಗಳಿವೆ. ಮಗು ಜನಿಸಿದ ಅರ್ಧ ಗಂಟೆಯ ಒಳಗೆ ಅದಕ್ಕೆ ತಾಯಿಯ ಎದೆಹಾಲು ಕುಡಿಸಬೇಕು. ಆಗ ಮಾತ್ರ ಅತ್ಯವಶ್ಯವಾದ ಹಿಮಟೋಗ್ಲೋಬಿನ್‌ ಅಂಶ ದೊರಕುತ್ತದೆ. ಆದರೆ ಶಸ್ತ್ರಚಿಕಿತ್ಸೆಗಳ ಸಂದರ್ಭ ಅದು ಸಾಧ್ಯವಾಗುವುದಿಲ್ಲ. ಜೊತೆಗೆ ಸಿಜರಿಯನ್‌ಗೆ ಒಳಗಾದವರಿಗೆ ದೀರ್ಘ ಉಪಚಾರದ ಅಗತ್ಯ ಇರುತ್ತದೆ. ಅನಸ್ತೇಶಿಯಾದ ಅಡ್ಡ ಪರಿಣಾಮದ ಸಾಧ್ಯತೆಯೂ ಇರುತ್ತದೆ’ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !