ಮಂಗಳವಾರ, ಜನವರಿ 28, 2020
17 °C

ಪೌರತ್ವ ಆಯ್ದೆ ವಿರೋಧಿಸಿ ನಾಳೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಪೌರತ್ವ ತಿದ್ದುಪಡಿ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಡಿ.19ರಂದು ಬೆಳಿಗ್ಗೆ 10ಕ್ಕೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ.

ಅಂದು ಪಕ್ಷದ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟು ಗೋಪಿವೃತ್ತ, ಮಹಾವೀರ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಲಿದೆ. ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ, ಶಾಸಕರಾದ ಬಿ.ಕೆ.ಸಂಗಮೇಶ್ವರ್, ಆರ್.ಪ್ರಸನ್ನಕುಮಾರ್, ಮಾಜಿ ಶಾಸಕರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಅಂಗೀಕರಿಸಿದ ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನಕ್ಕೆ, ಒಂದು ಸಮುದಾಯದ ಆಶಯಕ್ಕೆ ವ್ಯತಿರಿಕ್ತವಾಗಿದೆ. 
ಕೋಮು ಧ್ರುವೀಕರಣ ಮತ್ತು ಒಂದು ಸಮುದಾಯ ಬಲಿಪಶುವಾಗಿಸುವ ಹುನ್ನಾರ ಅಡಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆ. ಸಂವಿಧಾನ ದಮನಕ್ಕಾಗಿ ಕೇಂದ್ರ ಸರ್ಕಾರ ಇಂತಹ ದಾಳಿ ಆರಂಭಿಸಿದೆ ಎಂದು ಆರೋಪಿಸಿದರು.

ಮಸೂದೆ ವಿರೋಧಿಸಿ ದೇಶದ ಎಲ್ಲಡೆ ಶಾಂತಿಯುತ ಪ್ರತಿಭಟನೆ ನಡೆಯುತ್ತಿದೆ. ಕೆಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇದಕ್ಕೆ ಕಾಂಗ್ರೆಸ್ ಕಾರಣ ಎಂದು ಕೇಂದ್ರ ಸರ್ಕಾರ ಮಾಡುತ್ತಿರುವ ಆರೋಪ ಖಂಡನೀಯ. ಹಿಂಸಾಚಾರಕ್ಕೆ ನರೇಂದ್ರ ಮೋದಿ, ಅಮಿತ್ ಶಾ ಅವರೇ ಕಾರಣ ಎಂದರು.

ಡಿ.19ರಂದು ಪ್ರತಿಭಟನಾ ಮೆರವಣಿಗೆ ನಡೆಸದಂತೆ ಒತ್ತಡ ಹೇರಲಾಗುತ್ತಿದೆ. ಇದು ಪ್ರಜಾಪ್ರಭುತ್ವ ಹತ್ತಿಕ್ಕುವ ಪ್ರಯತ್ನ. ಎಷ್ಟೆ ಒತ್ತಡ ತಂದರೂ ಅಂದು ಪ್ರತಿಭಟನೆ ನಡೆಸಲಾಗುವುದು ಎಂದು ಘೋಷಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಎಚ್.ಎಂ.ಚಂದ್ರಶೇಖರಪ್ಪ, ಮುಖಂಡರಾದ ಎಲ್.ರಾಮೇಗೌಡ, ಮುಕ್ತಿಯಾರ್ ಅಹಮ್ಮದ್, ಉಸ್ಮಾನ್, ಪಂಡಿತ್ ವಿ. ವಿಶ್ವನಾಥ್‌, ನಾಗರಾಜ್, ಯಮುನಾ ರಂಗೇಗೌಡ ಇದ್ದರು.

ಪ್ರತಿಕ್ರಿಯಿಸಿ (+)