ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನಲ್ಲಿ ಕೇಳಿಸಿಕೊಳ್ಳುವ ಕಲೆ ಅಗತ್ಯ: ಪ್ರಾಧ್ಯಾಪಕ ಡಾ.ನೀಲಗಿರಿ ತಳವಾರ್‌

‘ಗಿರಿಜನ ಕಲ್ಯಾಣ: ಸವಾಲು ಮತ್ತು ಅವಕಾಶಗಳು’ ತರಬೇತಿ ಕಮ್ಮಟ ಮುಕ್ತಾಯ
Last Updated 23 ಡಿಸೆಂಬರ್ 2021, 13:00 IST
ಅಕ್ಷರ ಗಾತ್ರ

ರಾಯಚೂರು: ಕೇಳಿಸಿಕೊಳ್ಳುವುದು ಒಂದು ಕಲೆಯಾಗಿದ್ದು, ಬದುಕಿನಲ್ಲಿ ಇದು ತುಂಬಾ ಅಗತ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ನೀಲಗಿರಿ ತಳವಾರ್‌ ಹೇಳಿದರು.

ರಾಯಚೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಗಿರಿಜನ ಕಲ್ಯಾಣ: ಸವಾಲು ಮತ್ತು ಅವಕಾಶಗಳು’ ಐದು ದಿನಗಳ ತರಬೇತಿ ಕಮ್ಮಟದ ಮುಕ್ತಾಯ ಸಮಾರಂಭದಲ್ಲಿ ಗುರುವಾರ ಮಾತನಾಡಿದರು.

ತರಬೇತಿ ಶಿಬಿರದಲ್ಲಿ ಬಹಳ ಪ್ರೀತಿಯಿಂದ ಶಿಬಿರಾರ್ಥಿಗಳು ಪಾಲ್ಗೊಂಡು ಹಲವು ವಿಚಾರಗಳನ್ನು ಕೇಳಿಸಿಕೊಂಡು, ಅನುಸಂಧಾನ ಮಾಡಿಕೊಂಡಿದ್ದಾರೆ. ಭಿನ್ನಭಿನ್ನವಾದ ವಿಚಾರಗೋಷ್ಠಿಗಳು ನಡೆದವು. ಈ ವಿಚಾರಗಳು ಜೀವನದಲ್ಲಿ ಮುಂಬರುವ ದಿನಗಳಲ್ಲಿ ಅನುಕೂಲಕ್ಕೆ ಬರುತ್ತವೆ ಎಂದು ತಿಳಿಸಿದರು.

ಅಕಾಡೆಮಿಯಿಂದ ಆಯೋಜಿಸಿದ ಕಮ್ಮಟದಲ್ಲಿ ಐದು ದಿನವೂ ಪಾಲ್ಗೊಂಡಿದ್ದೆ. ಶಿಬಿರಾರ್ಥಿಗಳು ತಮ್ಮ ಭವಿಷ್ಯಕ್ಕೆ ಪ್ರೇರಣೆ ಪಡೆದುಕೊಂಡು ಹೋಗುತ್ತಿದ್ದಾರೆ. ನೂತನ ಆಲೋಚನೆ ರೂಪಿಸಿಕೊಳ್ಳಬೇಕು ಎಂಬುದು ಕಮ್ಮಟದ ಉದ್ದೇಶ. ಪ್ರಶ್ನೆಗಳನ್ನು ಕೇಳಿ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ. ಪ್ರಶ್ನೆ ಕೇಳುವ ಧೈರ್ಯ ಬೆಳೆಸಿಕೊಳ್ಳಬೇಕು. ಒಳ್ಳೆಯ, ಗಹನವಾದ ಹಾಗೂ ಸಮರ್ಪಕವಾದ ಪ್ರಶ್ನೆಗಳನ್ನು ಕೇಳುವುದು ತುಂಬಾ ಅಗತ್ಯವಾಗಿದೆ ಎಂದು ಸಲಹೆ ನೀಡಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಬಹಳ ನಿಷ್ಠೆಯಿಂದ, ಶ್ರದ್ಧೆಯಿಂದ ಸಾಹಿತ್ಯ ಸೇವೆ ಮಾಡುತ್ತಿರುವುದನ್ನು ಸಮೀಪದಿಂದ ನೋಡಿದ್ದೇನೆ. ಅಕಾಡೆಮಿ ಕಾರ್ಯಚಟುವಟಿಕೆಗಳಿಂದ ಪ್ರಜಾಪ್ರಭುತ್ವದ ಸೌಂದರ್ಯ ವೃದ್ಧಿಸುತ್ತಿದೆ. ಅಕಾಡೆಮಿ ತಂಡದೊಂದಿಗೆ ರಾಯಚೂರು ವಿಶ್ವವಿದ್ಯಾಲಯವು ಕೈಜೋಡಿಸಿರುವುದು ಅಭಿವೃದ್ಧಿ ದೃಷ್ಟಿಯಿಂದ ಶ್ಲಾಘನೀಯವಾಗಿದೆ ಎಂದರು.

ಸಂಗೀತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಹನುಮಣ್ಣನಾಯಕ ದೊರೆ ಮಾತನಾಡಿ, ‘ನಾನು ಜಾನಪದ ಸಂಗೀತದ ಹಿನ್ನೆಲೆಯಿಂದ ಬಂದವನಾಗಿದ್ದು, ಶಾಸ್ತ್ರೀಯ ಸಂಗೀತವನ್ನು ಬಹಳ ಆಸಕ್ತಿಯಿಂದ ಕಲಿತಿದ್ದೇನೆ. ಜಾನಪದ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತ ಒಂದಕ್ಕೆ ಇನ್ನೊಂದು ಪ್ರಭಾವ ಬೀರಿರಬಹುದು. ಆದರೆ, ಇನ್ನೊಂದರ ಪ್ರಭಾವದಿಂದ ಅದು ಹುಟ್ಟಿಕೊಂಡಿಲ್ಲ. ಜಾನಪದದಲ್ಲಿ ಶಾಸ್ತ್ರೀಯ ಸಂಗೀತ ಸಿಗುವುದೇ ಇಲ್ಲ ಎಂಬುದು ನನ್ನ ಅನುಭವಕ್ಕೆ ಬಂದಿದೆ. ಎರಡೂ ಪ್ರತ್ಯೇಕ ಎಂಬುದು ನನ್ನ ಅನಿಸಿಕೆ’ ಎಂದರು.

ಜಾನಪದ ಬಹಳ ಸರಳವಾಗಿ, ಸುಲಭವಾಗಿ ಇರುತ್ತದೆ. ಪ್ರತಿಯೊಂದು ಸಂಗೀತಕ್ಕೆ ತನ್ನದೇ ಆದ ವೈಶಿಷ್ಟ್ಯ, ಶ್ರೇಷ್ಠತೆ ಇದೆ. ಯಾವುದು ಸಣ್ಣದು, ದೊಡ್ಡದು ಎನ್ನುವುದಿಲ್ಲ ಎಂದು ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ, ಕುಲಸಚಿವ ಡಾ.ವಿಶ್ವನಾಥ ಎಂ., ಶಿಬಿರದ ನಿರ್ದೇಶಕರಾದ ಡಾ.ಅಮರೇಶ ಯತಗಲ್‌, ಡಾ.ಆನಂದಕುಮಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಿ.ಎಂ. ಶರಭೇಂದ್ರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT