ರಾಯಚೂರು: ಪ್ರವೇಶದ್ವಾರದಲ್ಲೇ ಪರಿಸರ ಪ್ರೇಮಿಗಳನ್ನು ಸ್ವಾಗತಿಸುವ ಜಿರಾಫೆಗಳು, ಎರಡು ಎಕರೆ ಪ್ರದೇಶದಲ್ಲಿ ವಿಶಾಲ ಬಾಹುಗಳನ್ನು ಚಾಚಿ ಬೆಳೆದ ಮರಗಳು, ತಂಪು ಸೂಸುವ ಬಿದಿರು, ಗಿಡಗಳಲ್ಲಿ ಅರಳಿದ ಅಂದದ ಹೂವುಗಳು, ಇದೆಲ್ಲವನ್ನೂ ನೋಡುತ್ತ ಇದ್ದರೆ ಒಂದು ಕ್ಷಣ ಎಂಥವರೂ ಮೈಮೆರೆಯುತ್ತಾರೆ.
ಹೌದು! ಇದೆಲ್ಲ ಇರುವುದು ನಗರದಲ್ಲಿರುವ ಅರಣ್ಯ ಇಲಾಖೆಯ ಸಾಲು ಮರದ ತಿಮ್ಮಕ್ಕ ಉದ್ಯಾನದಲ್ಲಿ. ಎರಡು ತಿಂಗಳು ಚೆನ್ನಾಗಿ ಮಳೆ ಸುರಿದ ನಂತರ ಗಿಡಮರಗಳು ಚಿಗುರೊಡೆದು ಹಸಿರು ಹೊದ್ದಿವೆ. ವೃಕ್ಷಗಳು ಕಾಯಿಬಿಟ್ಟು ಹೂಅರಳಿಸಿವೆ. ಬೇಸಿಗೆಯಲ್ಲಿ ಬಿಸಿಲ ಝಳಕ್ಕೆ ಬಾಡಿದ್ದ ಉದ್ಯಾನ ಮತ್ತೆ ಜನರನ್ನು ಕೈಬೀಸಿ ಕರೆಯುತ್ತಿದೆ.
ಬಿಸಿಲೂರಲ್ಲಿ ಪರಿಸರದ ಮಧ್ಯೆ ಒಂದಿಷ್ಟು ಸಮಯ ಕಳೆಯೋಣವೆಂದರೆ ಒಂದು ಉತ್ತಮವಾದ ಜಾಗವೇ ಇಲ್ಲವೆಂದು ಗೊಣಗುವವರೇ ಅಧಿಕ. ಇದಕ್ಕೆ ಕಾರಣ ಮಾವಿನ ಕೆರೆಯ ಪಕ್ಕದಲ್ಲಿ ಚಿಕ್ಕದೊಂದು ಉದ್ಯಾನವಿದ್ದರೂ ಕೆರೆ ನೀರಿನ ಗಬ್ಬುನಾಥ ಹಾಗೂ ಸೊಳ್ಳೆಗಳು ನೆಮ್ಮದಿಯನ್ನೇ ಹಾಳು ಮಾಡುತ್ತವೆ. ಸಾಲು ಮರದ ತಿಮ್ಮಕ್ಕ ಉದ್ಯಾನ ಮಾತ್ರ ಇಲ್ಲಿ ಭೇಟಿ ನೀಡುವವರಲ್ಲಿ ಪುಳಕವನ್ನುಂಟು ಮಾಡುತ್ತಿದೆ.
ಕೆಲ ವರ್ಷಗಳ ಹಿಂದೆ ಇಲ್ಲಿ ಚಿಕ್ಕದಾದ ಪ್ರಾಣಿ ಸಂಗ್ರಹಾಲಯವಿತ್ತು. ಕೃಷ್ಣಮೃಗ, ಜಿಂಕೆ, ಮೊಲ, ಮುಳ್ಳುಹಂದಿ, ಮೊಸಳೆ, ಬಾತುಕೋಳಿಗಳೂ ಇದ್ದವು. ಇವುಗಳನ್ನು ನೋಡಲು ಜನ ಕುಟುಂಬ ಸಮೇತ ಇಲ್ಲಿಗೆ ಬರುತ್ತಿದ್ದರು. ಪ್ರಾಣಿ ಸಂಗ್ರಹಾಲಯ ಬಾಗಿಲು ಮುಚ್ಚಿದ ಮೇಲೆ ಇಲ್ಲಿ ಬರುವವರ ಸಂಖ್ಯೆಯೂ ಕಡಿಮೆ ಆಯಿತು. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಅರಣ್ಯ ಇಲಾಖೆಯ ಅಧಿಕಾರಿಗಳು ಉದ್ಯಾನವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ.
ಉದ್ಯಾನದ ಜಾಗವು 10 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಒಳಗಡೆ ಗುಡ್ಡದ ಮೇಲೆ ಹೋಗಲು ಚಿಕ್ಕದಾದ ದಾರಿಯೂ ಇದೆ. ಅದನ್ನು ಒಂದಿಷ್ಟು ವಿಸ್ತರಿಸಿಕೊಂಡು ಟ್ರಕ್ಕಿಂಗ್ ವ್ಯವಸ್ಥೆ ಮಾಡಬೇಕು. ಅರಣ್ಯ ರಕ್ಷಣೆ ಹಾಗೂ ವನ್ಯಜೀವಿಗಳ ರಕ್ಷಣೆಯ ಬಗ್ಗೆಯೂ ಒಂದಿಷ್ಟು ಜನರಿಗೆ ತಿಳಿವಳಿಕೆ ನೀಡಬೇಕು ಎನ್ನುವ ದಿಸೆಯಲ್ಲಿ ಅಧಿಕಾರಿಗಳು ಹೊಸದೊಂದು ಪ್ರಯತ್ನ ನಡೆಸಿದ್ದಾರೆ.
‘ಕರ್ನಾಟಕ ಮೃಗಾಲಯ ಪ್ರಾಧಿಕಾರ ರಚನೆಯಾದ ಮೇಲೆ ಇಲ್ಲಿನ ಜಿಂಕೆ ಪಾರ್ಕ್ ಬಂದ್ ಮಾಡಲಾಗಿದೆ. ಮೃಗಾಲಯಗಳ ಮೇಲುಸ್ತುವಾರಿಯನ್ನು ನೇರವಾಗಿ ಪ್ರಾಧಿಕಾರವೇ ನೋಡಿಕೊಳ್ಖುತ್ತದೆ. ಹೀಗಾಗಿ ಸಸ್ಯ ಉದ್ಯಾನದ ಆಕರ್ಷಣೆ ಉಳಿಸಿಕೊಳ್ಳಲು ವನ್ಯಜೀವಿಗಳ ಪ್ರತಿಕೃತಿಯನ್ನು ಅಳವಡಿಸಲಾಗಿದೆ’ ಎಂದು ರಾಯಚೂರು ವಲಯ ಅರಣ್ಯ ಅಧಿಕಾರಿ ರಾಜೇಶ ನಾಯಕ ಹೇಳುತ್ತಾರೆ.
‘ಬೆಳಿಗ್ಗೆ ಟ್ರಕ್ಕಿಂಗ್‌ಗೆ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ. ಗುಡ್ಡದ ಮೇಲೆ ಹೋಗಲು ಇರುವ ಕಾಲು ದಾರಿಯನ್ನು ಇನ್ನಷ್ಟು ವಿಸ್ತರಿಸಲಾಗುವುದು. ಬೆಳಿಗ್ಗೆ ನಡೆದುಕೊಂಡು ಗುಡ್ಡದ ತುದಿಗೆ ಹೋದರೆ ರಾಯಚೂರು ನಗರ ದರ್ಶನವಾಗಲಿದೆ’ ಎಂದು ತಿಳಿಸಿದರು.
‘ಪ್ರಸ್ತುತ ಇಲ್ಲಿನ ಉದ್ಯಾನಕ್ಕೆ ಭಾನುವಾರ ಹಾಗೂ ರಜಾ ದಿನಗಳಲ್ಲಿ 70ರಿಂದ 100, ವಾರದ ಉಳಿದ ದಿನಗಳಲ್ಲಿ ನಿತ್ಯ 40ರಿಂದ 50 ಜನ ವೀಕ್ಷಕರು ಬರುತ್ತಾರೆ. ಸೌಲಭ್ಯ ವಿಸ್ತರಿಸಿದ ನಂತರ ಇಲ್ಲಿಗೆ ಬರುವವರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಲಿದೆ’ ಎಂದು ಹೇಳುತ್ತಾರೆ.
ಉದ್ಯಾನದಲ್ಲಿ ಏನಿದೆ?
ಅರಣ್ಯ ಇಲಾಖೆ ಉದ್ಯಾನದ ಅಂದವನ್ನು ಹೆಚ್ಚಿಸಲು ಏನು ಮಾಡಬೇಕೋ ಎಲ್ಲವನ್ನೂ ಮಾಡಿದೆ. ಉದ್ಯಾನದಲ್ಲಿ ಚಿಕ್ಕದಾದ ವಸ್ತು ಸಂಗ್ರಹಾಲಯ ಹಾಗೂ ಮತ್ಸ್ಯಾಲಯವೂ ಇದೆ. ಜಿರಾಫೆ, ಆನೆಗಳು, ಜಿಂಕೆ ಮರಿಗಳು, ಡೈನೋಸೋರ್, ಜಿಂಕೆ, ಕೊಕ್ಕರೆ, ನವಿಲುಗಳ ಪ್ರತಿಕೃತಿಗಳು ಉದ್ಯಾನಕ್ಕೆ ಜೀವ ತುಂಬಿವೆ.
ವಿಭಿನ್ನ ತಳಿಯ ಬಿದಿರು ಸಮೃದ್ಧವಾಗಿ ಬೆಳೆದು ನೆರಳನ್ನು ಚೆಲ್ಲುತ್ತಿದೆ. ಕಾಡು ಮರಗಳ ಜತೆಗೆ ಇತರೆ ಮರಗಳೂ ಇಲ್ಲಿವೆ. ಸಸ್ಯ ಸಂಕುಲಗಳ ಮಾಹಿತಿ ಪಡೆಯಲು ಅನುಕೂಲವಾದ ಪರಿಸರ ಇಲ್ಲಿದೆ. ಕಿಡಿಗೇಡಿಗಳು ಕಾವಲುಗಾರರ ಕಣ್ಣುತಪ್ಪಿಸಿ ಡೈನೋಸೋರ್ ಕೈ, ಜಿರಾಫೆಯ ಬಾಲ, ಜಿಂಕೆಯ ಬಾಲ ಮುರಿದು ಹಾನಿಗೊಳಿಸಿದ್ದಾರೆ.
ಉದ್ಯಾನ ರಕ್ಷಣೆ ಹಾಗೂ ನಿರ್ವಹಣೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಸಾರ್ವಜನಿಕರಿಂದ ಅತ್ಯಂತ ಕನಿಷ್ಠ ಶುಲ್ಕ ಆಕರಿಸುತ್ತಿದೆ. ಪ್ರವೇಶದ್ವಾರದಲ್ಲಿ ಶುಲ್ಕ ಪಾವತಿಸಿ ಉದ್ಯಾನ ಪ್ರವೇಶಿಸಿ ಇಷ್ಟು ಬಂದಷ್ಟು ಸಮಯವನ್ನು ಉದ್ಯಾನದಲ್ಲಿ ಕಳೆಯಬಹುದಾಗಿದೆ.
‘ಶನಿವಾರ ಹಾಗೂ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನ ಇಲ್ಲಿಗೆ ಬರುತ್ತಾರೆ. ಉಳಿದ ದಿನಗಳಲ್ಲಿ ಜನರ ಸಂಖ್ಯೆ ಕಡಿಮೆ ಇರುತ್ತದೆ. ಇದೀಗ ಮರಗಳು ಹಸಿರು ಹೊದ್ದಿವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ’ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಆಂಜನೇಯ ತಿಳಿಸಿದರು.
ಉದ್ಯಾನಕ್ಕೆ ಮತ್ತೇನು ಬೇಕು?
ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಕುಟುಂಬಗಳು ಶನಿವಾರ ಹಾಗೂ ಭಾನುವಾರ ಇಲ್ಲಿ ಪಿಕ್‌ನಿಕ್ ಬರುತ್ತಾರೆ. ಅವರಿಗೆ ಒಂದುಕಡೆ ಕುಳಿತುಕೊಂಡು ಊಟ ಮಾಡಲು ವ್ಯವಸ್ಥೆ ಇದ್ದರೆ ಒಳ್ಳೆಯದು. ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಬೇಕಿದೆ.
ಉದ್ಯಾನದ ಒಂದು ಬದಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದರೆ ಇಲ್ಲಿಗೆ ಬರುವ ಪ್ರವಾಸಿಗರಿಗೂ ಅನುಕೂಲವಾಗಲಿದೆ. ಉದ್ಯಾನದಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಕಸದ ತೊಟ್ಟಿಗಳನ್ನು ಇಡುವ ಅಗತ್ಯವಿದೆ. ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸಿ ರಾತ್ರಿ 8.30ರ ವರೆಗೂ ಅವಕಾಶ ಕಲ್ಪಿಸಿದರೆ ಅನುಕೂಲವಾಗಲಿದೆ. ಉದ್ಯಾನಕ್ಕೆ ಸಾರ್ವಜನಿಕರಿಗೆ ಉತ್ತಮ ಆದಾಯವೂ ಬರಲಿದೆ ಎನ್ನುತ್ತಾರೆ ಪ್ರವಾಸಿಗರು.
ಮಂತ್ರಾಲಯ ರಸ್ತೆಯ ಪ್ರವೇಶದಲ್ಲಿ ಇನ್ನೊಂದು ಕಮಾನು ನಿರ್ಮಿಸಬೇಕು. ಮುಖ್ಯರಸ್ತೆಯಿಂದ ಉದ್ಯಾನದ ಪ್ರವೇಶ ದ್ವಾರದ ವರೆಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು. ಪ್ರವೇಶ ದ್ವಾರದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಉದ್ಯಾನದಲ್ಲಿ ನಾಲ್ಕು ಕಡೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ರಕ್ಷಣೆ ಮಾಡಬೇಕು ಎನ್ನುವುದು ಜನರ ಬೇಡಿಕೆಯಾಗಿದೆ ಎಂದು ಪರಿಸರ ಪ್ರೇಮಿಗಳಾದ ಶಿವಕುಮಾರ ಹಾಗೂ ತೇಜಸ್ವಿನಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.