ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ವಿದ್ಯಾರ್ಥಿಗಳಿಗೆ ಸೈಕಲ್ ಕೊಡಿಸಿದ ಕಾರ್ಮಿಕ

ಯಮನೇಶ ಗೌಡಗೇರಾ
Published 4 ಮಾರ್ಚ್ 2024, 4:28 IST
Last Updated 4 ಮಾರ್ಚ್ 2024, 4:28 IST
ಅಕ್ಷರ ಗಾತ್ರ

ದೇವದುರ್ಗ (ರಾಯಚೂರು ಜಿಲ್ಲೆ): ತಾಲ್ಲೂಕಿನ ಮಲ್ಕಂದಿನ್ನಿ ಗ್ರಾಮದ ಕೂಲಿ ಕಾರ್ಮಿಕ ಆಂಜನೇಯ ದುಡಿಮೆಯಿಂದ ಬಂದ ಹಣದಲ್ಲಿ ಗ್ರಾಮದ 8ನೇ ತರಗತಿಯ 11 ವಿದ್ಯಾರ್ಥಿಗಳಿಗೆ ಹೀರೊ ಸೈಕಲ್‌ಗಳನ್ನು ಕೊಡಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದಕ್ಕಾಗಿ ಅವರು ₹60 ಸಾವಿರ ಖರ್ಚು ಮಾಡಿದ್ದಾರೆ.

ಮಲ್ಕಂದಿನ್ನಿ ಗ್ರಾಮದಲ್ಲಿ ಪ್ರೌಢಶಾಲೆ ಇಲ್ಲ. ಪ್ರೌಢ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು 5 ಕಿ.ಮೀ. ದೂರದ ಹೇಮನೂರಿಗೆ ನಡೆದುಕೊಂಡು ಹೋಗುತ್ತಾರೆ. ಪ್ರತಿದಿನ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕ ಆಂಜನೇಯ, ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಗಮನಿಸಿದ್ದಾರೆ. 11 ಸೈಕಲ್ ಖರೀದಿಸಿ ಶನಿವಾರ ಶಾಲೆಗೆ ತೆರಳಿ ಮುಖ್ಯಶಿಕ್ಷಕ ಬಸವರಾಜ ಮತ್ತು ಶಿಕ್ಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ನೀಡಿದ್ದಾರೆ.

‘ಬಸ್‌ ವ್ಯವಸ್ಥೆ ಇಲ್ಲದ ಕಾರಣ ನಡೆದುಕೊಂಡು ಹೋಗಲು ಸಾಧ್ಯವಾಗದೆ ಬಹಳಷ್ಟು ಹೆಣ್ಣು ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ನಮ್ಮ ಗ್ರಾಮದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ನನ್ನ ಈ ಅಲ್ಪ ಸೇವೆಯಿಂದ ಅವರ ಭವಿಷ್ಯ ಉಜ್ವಲವಾಗಲಿ’ ಎಂದು ಆಂಜನೇಯ ತಿಳಿಸಿದರು.

ದೇವದುರ್ಗ ತಾಲ್ಲೂಕಿನಲ್ಲಿ 186 ಕಂದಾಯ ಗ್ರಾಮಗಳು, 50ಕ್ಕೂ ಹೆಚ್ಚು ತಾಂಡಾಗಳು ಹಾಗೂ 30 ದೊಡ್ಡಿಗಳಿವೆ. ಅವುಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಗ್ರಾಮಗಳಿಗೆ ಇಂದಿಗೂ ಬಸ್‌ನ ವ್ಯವಸ್ಥೆ ಇಲ್ಲ. ಇದರಿಂದ ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ.

ಕೂಲಿ ಕಾರ್ಮಿಕ ಆಂಜನೇಯ ಅವರ ಕಾಳಜಿ ಇತರರಿಗೆ ಮಾದರಿಯಾಗಿದೆ.
ಬಸವರಾಜ, ಮುಖ್ಯಶಿಕ್ಷಕ, ಸರ್ಕಾರಿ ಪ್ರೌಢಶಾಲೆ ಹೇಮನೂರು
ರಾಜ್ಯದಾದ್ಯಂತ ಗ್ರಾಮೀಣ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳು ನಡೆದುಕೊಂಡು ಶಾಲೆಗಳಿಗೆ ತೆರಳುತ್ತಾರೆ. ಬೇಸಿಗೆ ಮಳೆಗಾಲದಲ್ಲಿ ವಿಧಿ ಇಲ್ಲದೆ ಗೈರಾಗುತ್ತೇವೆ. ಸರ್ಕಾರ ಉಚಿತ ಸೈಕಲ್ ವಿತರಣೆ ಯೋಜನೆಯನ್ನು ಮತ್ತೆ ಆರಂಭಿಸಬೇಕು.
ಸೈಕಲ್ ಪಡೆದ ವಿದ್ಯಾರ್ಥಿಗಳು
ಪ್ರೌಢಶಾಲೆಗೆ ನಡೆದುಕೊಂಡು ಹೋಗಲಾಗದೆ ಪ್ರತಿವರ್ಷ 15–20 ವಿದ್ಯಾರ್ಥಿನಿಯರು ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸುತ್ತಿದ್ದಾರೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸೈಕಲ್ ನೀಡಿದ್ದೇನೆ.
ಆಂಜನೇಯ ಮಲ್ಕಂದಿನ್ನಿ, ಕೂಲಿ ಕಾರ್ಮಿಕ
ಆಂಜನೇಯ
ಆಂಜನೇಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT