ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ನಷ್ಟದ ಭೀತಿಯಲ್ಲಿ ಎಸಿ, ಕೂಲರ್‌ ವ್ಯಾಪಾರಿಗಳು

ಬೇಸಿಗೆಯಲ್ಲಿ ಭರ್ಜರಿ ಬೇಡಿಕೆ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ
Last Updated 31 ಮಾರ್ಚ್ 2020, 7:09 IST
ಅಕ್ಷರ ಗಾತ್ರ

ರಾಯಚೂರು: ಪ್ರತಿವರ್ಷದಂತೆ ಬೇಸಿಗೆ ಆರಂಭದಲ್ಲಿ ಎಸಿ, ಕೂಲರ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್‌ ಸರಕುಗಳನ್ನು ದಾಸ್ತಾನು ಮಾಡಿಕೊಂಡಿದ್ದ ವ್ಯಾಪಾರಿಗಳು ನಷ್ಟದ ಭೀತಿಗೊಳಗಾಗಿದ್ದಾರೆ.

ಏಪ್ರಿಲ್‌ 14 ರ ನಂತರ ಕೊರೊನಾ ಲಾಕ್‌ಡೌನ್‌ ಮುಕ್ತಾಯವಾದರೆ, ಮುಂದೆ ಬೇಸಿಗೆ ಮುಗಿಯುವುದಕ್ಕೆ 45 ದಿನ ಮಾತ್ರ ಬಾಕಿ ಉಳಿಯುತ್ತದೆ. ಸದ್ಯ ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದರಿಂದ ಬೇಡಿಕೆ ಕೂಡಾ ಇರುವುದಿಲ್ಲ. ಈ ವರ್ಷ ತಂದುಕೊಂಡಿರುವ ಮಾಡಲ್‌ಗಳನ್ನು ಅಪ್‌ಡೇಟ್‌ ಆಗುವುದರಿಂದ ಮುಂದಿನ ವರ್ಷ ಮಾರಾಟ ಮಾಡುವುದಕ್ಕೆ ಆಗುವುದಿಲ್ಲ. ಲಾಭ ಇಲ್ಲದಿದ್ದರೂ ಹಾಕಿದ ಬಂಡವಾಳ ವಾಪಸ್‌ ಕೈ ಸೇರುತ್ತದೆಯೋ ಇಲ್ಲವೋ ಎನ್ನುವ ಚಿಂತೆಯಲ್ಲಿದ್ದಾರೆ.

ಈ ವರ್ಷ ಫೆಬ್ರುವರಿ ಮಧ್ಯೆಭಾಗದಿಂದಲೇ ತಾಪಮಾನ ಏರಿಕೆ ಆಗುತ್ತಿದೆ. ಸಹಜವಾಗಿ ಮಾರ್ಚ್‌, ಏಪ್ರಿಲ್‌ ಹಾಗೂ ಮೇ ತಿಂಗಳುಗಳಲ್ಲಿ ತಂಪು ಸೂಸುವ ಯಂತ್ರಗಳಿಗೆ ಬೇಡಿಕೆ ಇರುತ್ತದೆ ಎನ್ನುವ ನಿರೀಕ್ಷೆ ವ್ಯಾಪಾರಿಗಳದ್ದಾಗಿತ್ತು. ಇದೀಗ ಕೊರೊನಾ ತಂದೊಡ್ಡಿದ ಸಂಕಷ್ಟದಿಂದ ಪಾರಾಗುವುದು ಮೊದಲ ಸವಾಲಾಗಿ ಪರಿಣಮಿಸಿದೆ.

ಫೆಬ್ರುವರಿ ಕೊನೆಯ ವಾರದಿಂದ ಮಾರ್ಚ್‌ ಮೊದಲವಾರದವರೆಗೂ ರಾಯಚೂರಿನ ಮಾರಕಟ್ಟೆಯಲ್ಲಿ ಎಲ್ಲಿ ನೋಡಿದರೂ ಕೂಲರ್‌, ಎಸಿ, ಫ್ಯಾನ್‌, ಫ್ರಿಡ್ಜ್‌ಗಳ ರಾಶಿ ಕಾಣುತ್ತಿತ್ತು. ಸ್ಟೇಷನ್‌ ರಸ್ತೆಯುದ್ದಕ್ಕೂ, ಚಂದ್ರಮೌಳೇಶ್ವರ ವೃತ್ತದಿಂದ ಗಂಜ್‌ ವೃತ್ತ, ಸೂಪರ್‌ ಮಾರ್ಕೆಟ್‌ನಲ್ಲಿರುವ ಎಲ್ಲಾ ಎಲೆಕ್ಟ್ರಾನಿಕ್‌ ಮಳಿಗೆಗಳ ಎದುರು ಲಾರಿಗಳು ಪ್ರತಿದಿನ ಲೋಡ್‌ಗಟ್ಟಲೇ ತಂದು ಹಾಕುವ ದೃಶ್ಯ ಸಾಮಾನ್ಯವಾಗಿತ್ತು.

ಉಪಜೀವನಕ್ಕೆ ಹೊಡೆತ: ಎಸಿ, ಫ್ಯಾನ್‌ಗಳನ್ನು ಅಳವಡಿಸುವುದು ಹಾಗೂ ದುರಸ್ತಿ ಕಾರ್ಯಗಳನ್ನು ನೆಚ್ಚಿಕೊಂಡಿದ್ದ ನೂರಾರು ಜನರು ತಾಪತ್ರಯದಲ್ಲಿ ಮುಳುಗಿದಂತಾಗಿದೆ. ‘ಎಲೆಕ್ಟ್ರಾನಿಕ್‌ ಉಪಕರಣಗಳು ಬಿಸಿಲಿನಿಂದ ಹಾಳಾಗಿರುತ್ತವೆ. ಕೂಲರ್‌ಗಳನ್ನು ಪ್ರತಿ ಬೇಸಿಗೆಯಲ್ಲಿ ಸರ್ವಿಸ್‌ ಮಾಡಿಸುವುದು, ಮೋಟಾರ್‌ ಪಂಪ್‌ ಸರ್ವಿಸ್‌ ಸೇರಿದಂತೆ ಅನೇಕ ಉಪಕರಣಗಳ ದುರಸ್ತಿ ಮಾಡುವುದಕ್ಕೆ ಬೇಸಿಗೆಯಲ್ಲಿಯೇ ಅತಿಹೆಚ್ಚು ಕರೆಗಳು ಬರುತ್ತವೆ. ಈಗ ಕೊರೊನಾ ವೈರಸ್‌ನಿಂದ ಉಪಜೀವನ ಸಾಗಿಸುವುದು ಕಷ್ಟವಾಗಿದೆ’ ಎನ್ನುತ್ತಾರೆ ಮಿಕ್ಸರ್‌ ದುರಸ್ತಿ ಮಾಡುವ ಮೆಹಬೂಬ್‌ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT